Advertisement
ಈ ಕಾರ್ಯಕಾರಿಣಿಗೆ ಈಶ್ವರಪ್ಪ ಅವರು ಗೈರು ಹಾಜರಾಗುತ್ತಾರೆ ಎಂದು ಹೇಳಲಾಗಿತ್ತಾದರೂ ವರಿಷ್ಠರ ತಾಕೀತಿನ ಮೇರೆಗೆ ಕೊನೆ ಕ್ಷಣದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ರಾಯಚೂರಿನಲ್ಲಿ ಮೇ 8ರಂದು ಕರೆದಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಭ್ಯಾಸವರ್ಗವನ್ನು ಮುಂದೂಡಿದ್ದಾರೆ.
Related Articles
Advertisement
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಯಲ್ಲಿ ಪಕ್ಷದ ಅಸಮಾಧಾನಿತರ ಗುಂಪು ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ನಡೆಸು ತ್ತಿರುವ ಚಟುವಟಿಕೆಗಳ ಬಗ್ಗೆಯೂ ಚರ್ಚೆಯಾಗಿ ಗೊಂದಲ ಉಂಟಾಗುವ ಸಾಧ್ಯತೆಯೂ ಇದೆ.
ಶನಿವಾರ ಬೆಳಗ್ಗೆ ಉದ್ಘಾಟನಾ ಸಮಾರಂಭ ಮುಗಿದ ಬಳಿಕ ಪಕ್ಷ ಸಂಘಟನೆ ಕುರಿತಂತೆ ಗೋಷ್ಠಿ ನಡೆಯಲಿದೆ. ಈ ವೇಳೆ ಪಕ್ಷದೊಳಗಿನ ಅಸಮಾಧಾನ, ಆ ಕುರಿತ ಬೆಳವಣಿಗೆಗಳ ಬಗ್ಗೆಯೂ ಪ್ರಸ್ತಾವವಾಗಬಹುದು. ಸಂತೋಷ್ ವಿರುದ್ಧ ಯಡಿಯೂರಪ್ಪ ಬಹಿರಂಗ ಹೇಳಿಕೆ ನೀಡಿರುವುದು, ಭಾನುಪ್ರಕಾಶ್, ನಿರ್ಮಲ್ ಕುಮಾರ್ ಸುರಾನಾ ಅವರನ್ನು ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಅಂಶಗಳೂ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಬಿಎಸ್‌ವೈ-ಈಶ್ವರಪ್ಪ ಚರ್ಚೆಗೆ ಅವಕಾಶ?
ಯಡಿಯೂರಪ್ಪ-ಈಶ್ವರಪ್ಪ ಅವರಿಬ್ಬರನ್ನೇ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವೇಳೆ ಪ್ರತ್ಯೇಕವಾಗಿ ಕೂರಿಸಿ ಪರಸ್ಪರ ಚರ್ಚೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಅವರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದಾಗ ಇಬ್ಬರನ್ನೂ ಒಟ್ಟಾಗಿ ಕೂರಿಸಿ ಮಾತುಕತೆಗೆ ಅವಕಾಶ ಮಾಡಿಕೊಟ್ಟರೆ ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕಿ ಬಳಿಕ ಒಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಗೆ ಆಗಮಿಸುವ ಇಬ್ಬರನ್ನೂ ಒಟ್ಟಾಗಿ ಕೂರಿಸಿ ಪರಸ್ಪರ ಚರ್ಚೆಗೆ ಅವಕಾಶ ಮಾಡಿಕೊಡುವ ಕುರಿತು ಮುರಳೀಧರ ರಾವ್ ಅವರು ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈಶ್ವರಪ್ಪ ಭಾಗವಹಿಸುತ್ತಿರುವುದೇಕೆ?
ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಸ್ಪಷ್ಟ ತೀರ್ಮಾನ ಹೇಳದೆ ಅಡ್ಡಗೋಡೆ ಮೇಲೆ ದೀಪ ಇಡುತ್ತಿದ್ದ ಕೆ.ಎಸ್.ಈಶ್ವರಪ್ಪ ಅವರು ಕೊನೇ ಕ್ಷಣದಲ್ಲಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ನಿರ್ಣಯ ಪ್ರಕಟಿಸಿದ್ದು ಮತ್ತು ಅದಕ್ಕಾಗಿ ರಾಯಚೂರಿನ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಭ್ಯಾಸ ವರ್ಗ ಮುಂದೂಡಿರುವುದರ ಹಿಂದೆ ವರಿಷ್ಠರ ಸಂದೇಶ ಕೆಲಸ ಮಾಡಿದೆ ಎನ್ನಲಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಅವರು ಈಶ್ವರಪ್ಪ ಅವರನ್ನು ಸಂಪರ್ಕಿಸಿ ಕಾರ್ಯಕಾರಿಣಿಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದ್ದರು. ಅಲ್ಲದೇ, ಸಮಸ್ಯೆ ಬಗೆಹರಿಯುವ ಪ್ರಯತ್ನ ನಡೆಯುತ್ತಿರುವಾಗ ಕಾರ್ಯಕಾರಿಣಿಯಿಂದ ದೂರ ಉಳಿದರೆ ಸಮಸ್ಯೆಯಾಗಬಹುದು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.