Advertisement

ವೀರಶೈವ, ಲಿಂಗಾಯತ ವಿಚಾರದಲ್ಲಿ ಇಬ್ಬಗೆ ಬೇಡ

09:40 PM May 03, 2019 | Lakshmi GovindaRaj |

ವಿಜಯಪುರ: ವೀರಶೈವ, ಲಿಂಗಾಯತ ಸಮಾಜದ ವಿಚಾರದಲ್ಲಿ ಇಬ್ಬಗೆ ಬೇಡ. ಎಲ್ಲರೂ ಸಂಘಟಿತರಾಗಿ ಬದುಕುವುದನ್ನು ಕಲಿಯಬೇಕು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ವೀರಶೈವ ಸಮಾಜ ಔನತ್ಯ ಸಾಧಿಸಬೇಕಿದೆ ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎನ್‌.ತಿಪ್ಪಣ್ಣ ಸಲಹೆ ನೀಡಿದರು.

Advertisement

ಪಟ್ಟಣದ ಹೊರವಲಯದಲ್ಲಿರುವ ಶ್ರೀ ಗಿರಿಜಾಶಂಕರ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ವಿಎಸ್‌ಆರ್‌ ಸಭಾಂಗಣದಲ್ಲಿ ದೇವನಹಳ್ಳಿ ತಾಲೂಕು ವೀರಶೈವ ಸಮಾಜ ಸಂಘ, ವಿ.ಎಂ.ರುದ್ರಪ್ಪ ಕುಟುಂಬಗಳ ವತಿಯಿಂದ ಹಮ್ಮಿಕೊಂಡಿದ್ದ ನೂತನ ಶ್ರೀ ಶಿವಕುಮಾರ ಮಹಾಸ್ವಾಮೀಜಿ ನಗರ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದುಡಿದು ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನಾದರೂ ಸಮಾಜ ಹಾಗೂ ನೊಂದವರ ಸೇವೆಗೆ ಮೀಸಲಿಡಬೇಕೆಂದು ಹೇಳಿದರು.

ಸ್ವಾಮೀಜಿ ಆದರ್ಶ ಪಾಲಿಸಿ: ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರಲ್ಲಿರುವ ನಿಷ್ಠೆ, ಸೇವಾಕಾಂಕ್ಷೆ, ದೃಢ ನಿಶ್ಚಯ, ಧೈರ್ಯ, ಕಾಯಕದಲ್ಲಿ ಪಾವಿತ್ರ್ಯತೆ, ನೈರ್ಮಲ್ಯ, ದೃಷ್ಟಿ ವೈಶಾಲ್ಯತೆ, ಸತ್ಯ, ಪ್ರೇಮ, ಮೇಲ್ಮಟ್ಟದ ಧ್ಯೇಯಗಳಂತಹ ಗುಣಗಳು ಸಾರ್ವಕಾಲಿಕ ಹಾಗೂ ಅನುಕರಣೀಯವಾಗಿವೆ. ಸ್ವೇಚ್ಛಾಚಾರ ನಡೆಯಿಂದ ದೂರವಿದ್ದು, ದೃಷ್ಟಿಯಿಂದ ಸೃಷ್ಟಿಯನ್ನು ಕಾಣುವ ಗುಣವನ್ನು ಕಂಡುಕೊಳ್ಳಬೇಕು ಎಂದರು.

ಜನಗಣತಿ ಅಂಶಗಳು ಸುಳ್ಳು: ಚಿನ್ನಪ್ಪರೆಡ್ಡಿ ಸಮಿತಿ ವರದಿಯಂತೆ ರಾಜ್ಯದಲ್ಲಿ ಕಳೆದ 20ವರ್ಷಗಳ ಹಿಂದೆಯೇ 1.30 ಕೋಟಿಯಷ್ಟು ವೀರಶೈವ ಲಿಂಗಾಯತ ಜನಸಂಖ್ಯೆ ಇತ್ತು. ಆದರೆ, ಇತ್ತೀಚೆಗೆ ಸರ್ಕಾರ ನಡೆಸಿದ ಜನಗಣತಿಯಂತೆ ಕೇವಲ 65ಲಕ್ಷ ಜನಸಂಖ್ಯೆಯನ್ನು ಮಾತ್ರ ತೋರಿಸುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂಬುದು ಗೋಚರಿಸುತ್ತದೆ. ನಾವೆಲ್ಲರೂ ಒಳಪಂಗಡಗಳನ್ನು ದೂರಮಾಡಿ ಒಗ್ಗೂಡಿ ವೀರಶೈವ ಲಿಂಗಾಯತ ಒಂದೇ ಎಂಬ ಭಾವನೆ ತಳೆಯಬೇಕು ಎಂದರು.

Advertisement

ಶಿಕ್ಷಣ, ಸಂಘಟನೆ ಅಗತ್ಯ: ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಅಖೀಲ ಭಾರತ ವೀರಶೈವ ಮಹಾಸಭಾದ ಸದಸ್ಯತ್ವ ಗುರುತಿನ ಚೀಟಿಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಯಾವುದೇ ಜಾತಿ, ಜನಾಂಗದ ಅಭಿವೃದ್ಧಿಗೆ ಉತ್ತಮ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಅಗತ್ಯವಿದೆ. ಯುವಪೀಳಿಗೆಯಲ್ಲಿ ಅನಂತ ಶಕ್ತಿಯಿದೆ.

ಅದನ್ನು ಸಮಾಜದ ಮತ್ತು ವೈಯಕ್ತಿಕ ಬೆಳವಣಿಗೆಗೆ ಬಳಸಿಕೊಂಡು ಬೆಳೆಯಬೇಕು. ವೀರಶೈವ ಲಿಂಗಾಯತ ಮಠಗಳು ಸಮಾಜದ ಅಭಿವೃದ್ಧಿಯಲ್ಲಿ ಸ್ವಾತಂತ್ರ ಪೂರ್ವದಿಂದಲೂ ಸಾಕಷ್ಟು ಕೊಡುಗೆ ನೀಡುತ್ತ ಬಂದಿವೆ. ಇಡೀ ಮನುಕುಲದ ಒಳಿತನ್ನೇ ತನ್ನ ಜೀವನವೆಂದು ತ್ರಿವಿಧ ದಾಸೋಹದ ಮೂಲಕ ಬದುಕು ಸವೆಸಿದ ಶ್ರೀ ಶಿವಕುಮಾರ ಸ್ವಾಮೀಜಿ ವಿಶ್ವ ರತ್ನರಾಗಿ ಅಜರಾಮರರಾಗಿದ್ದಾರೆ ಎಂದು ತಿಳಿಸಿದರು.

ಮೇ 23ರ ನಂತರ ಸರ್ಕಾರ ಪತನ: ಸಮ್ಮಿಶ್ರ ಸರ್ಕಾರ ಪತನಕ್ಕೆ ಬಿಜೆಪಿ ಕಾರಣವಾಗುವುದಿಲ್ಲ. ಮೇ 23ರ ನಂತರ ಲೋಕಸಭಾ ಚುನಾವಣಾ ಫ‌ಲಿತಾಂಶ ಪ್ರಕಟವಾಗುತ್ತಿದ್ದಂತೆ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ರಮೇಶ್‌ ಜಾರಕಿಹೊಳಿ ಮತ್ತಿತರರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ವಿಚಾರದಲ್ಲಿ ಇನ್ನೂ ಹೈಕಮಾಂಡ್‌ ತೀರ್ಮಾನ ತೆಗೆದುಕೊಂಡಿಲ್ಲ. ಸಮ್ಮಿಶ್ರ ಸರ್ಕಾರದ ನಿಶ್ಚಿತತೆಯ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಮೌನವಾಗಿದ್ದಾರೆ. ಮೇ 23ರ ನಂತರ ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಅಲ್ಲಗಳೆಯುವಂತಿಲ್ಲ ಎಂದರು.

ಸದಸ್ಯತ್ವ ಹೆಚ್ಚಳ: ಅಖೀಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಿ.ಎಸ್‌.ಸಚ್ಚಿದಾನಂದಮೂರ್ತಿ ಮಾತನಾಡಿ, ಹಾನಗಲ್ಲ ಕುಮಾರ ಸ್ವಾಮೀಜಿ ಆರಂಭಿಸಿದ ಅಖಲಿ ಭಾರತ ವೀರಶೈವ ಮಹಾಸಭಾ ಕೇವಲ ಸಾವಿರ ಸದಸ್ಯತ್ವ ಹೊಂದಿತ್ತು. ಅದನ್ನು ಇಂದು 50ಲಕ್ಷ ಮೀರಿಸಲು ಶ್ರಮಿಸಲಾಗುತ್ತಿದೆ. ಸಂಘದ ಶಕ್ತಿ ಮತ್ತು ಶ್ರಮದಿಂದ ಸಾಧನೆ ಸುಲಭವಾಗಿದೆ. ನಮ್ಮ ಸಂಸ್ಕಾರ, ಆಚರಣೆಗಳನ್ನು ಉಳಿಸಿಕೊಂಡು ಸಮಾಜದ ಇತರೇ ಜನಾಂಗಗಳನ್ನು ಪ್ರೀತಿಸಿ ಬದುಕುವ ಕಲೆ ವೀರಶೈವ ಲಿಂಗಾಯತರಿಗೆ ಕರಗತವಾಗಿದೆ ಎಂದರು.

ದೇವನಹಳ್ಳಿ ತಾಲೂಕು ವೀರಶೈವ ಸಮಾಜ ಸಂಘದ ಅಧ್ಯಕ್ಷ ಎಂ.ಎಸ್‌.ರಮೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಪೀಳಿಗೆ ಜನಾಂಗದ ಏಳಿಗೆ, ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯರಾಗಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಸರ್ವ ಕ್ಷೇತ್ರ›ಗಳಲ್ಲಿಯೂ ಔನತ್ಯ ಸಾಧಿಸಬೇಕೆಂದರು.

ಬೆಂಗಳೂರು ಉತ್ತರ ವೀರಶೈವ ಸಮಾಜದ ಅಧ್ಯಕ್ಷ ತಿಂಡ್ಲು ಬಸವರಾಜು, ಸಹಕಾರ ನಗರ ವೀರಶೈವ ಸಮಾಜದ ಅಧ್ಯಕ್ಷ ಗುರುಸ್ವಾಮಿ, ಪುರಸಭಾ ಮಾಜಿ ಸದಸ್ಯ ಎಂ.ಸತೀಶ್‌ಕುಮಾರ್‌, ಶಿಕ್ಷಕ ಎಚ್‌.ಎಸ್‌.ರುದ್ರೇಶಮೂರ್ತಿ, ದಾಸೋಹ ಭಾಸ್ಕರ ಕೃತಿ ಕತೃ ಹರಳೂರು ಶಿವಕುಮಾರ್‌, ಬೆಂಗಳೂರು ನಗರ ವೀರಶೈವ ಮಹಾಸಭಾ ಯುವ ಘಟಕಾಧ್ಯಕ್ಷ ಮನೋಹರ್‌, ತಾಲೂಕು ವೀರಶೈವ ಸಮಾಜ ಸಂಘದ ಕಾರ್ಯದರ್ಶಿ ಪ್ರಸನ್ನಹಳ್ಳಿ ವಿಜಯಕುಮಾರ್‌, ಉಪಾಧ್ಯಕ್ಷ ಹುಣಸಮಾರನಹಳ್ಳಿ ವಿಶ್ವನಾಥ್‌, ನಿರ್ದೇಶಕ ಎಂ.ಕುಮಾರ್‌, ವೀರಭದ್ರಪ್ಪ, ನಾಗೇಶ್‌, ನಿವೃತ್ತ ಶಿಕ್ಷಕ ಶಾಂತವೀರಯ್ಯ, ಕೆ.ಸದಾಶಿವಯ್ಯ, ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ವೀರಭದ್ರಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಹರಳೂರು ಎಸ್‌.ಶಿವಕುಮಾರ್‌ ವಿರಚಿತ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅಷ್ಟೋತ್ತರ ಶತನಾಮಾವಳಿಯನ್ನು ಲೋಕಾರ್ಪಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಶಾಂತವೀರಯ್ಯ ಅವರ ತೋಟದ ಮನೆ ಒಳಗೊಂಡಿರುವ ಬಡಾವಣೆಗೆ ಶ್ರೀ ಶಿವಕುಮಾರ ಮಹಾಸ್ವಾಮೀಜಿ ನಗರ ಎಂಬ ನಾಮಫ‌ಲಕ ಅನಾವರಣಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next