ಮೂಡಬಿದಿರೆ: ಸಂಪತ್ತನ್ನು ಗಳಿಸಬೇಕೆಂಬ ಧಾವಂತದಲ್ಲಿ ಭ್ರಷ್ಟಾಚಾರ ಮಾಡುವುದಾಗಲೀ ಅದನ್ನು ಪ್ರೋತ್ಸಾಹಿಸುವುದಾಗಲೀ ಸಲ್ಲದು. ಭ್ರಷ್ಟಾಚಾರಮುಕ್ತ ಸಮಾಜ ಕಟ್ಟಬೇಕಾದರೆ ಮೊದಲು ನಾವು ಬದಲಾಗಬೇಕು ಎಂದು ಕರ್ನಾಟಕದ ಮಾಜಿ ಲೋಕಾಯುಕ್ತ ಡಾ|ಎನ್. ಸಂತೋಷ್ ಹೆಗ್ಡೆ ಹೇಳಿದರು. ಎಕ್ಸಲೆಂಟ್ ಪ.ಪೂ. ಕಾಲೇಜು ಆವರಣದ ‘ವೀರ ಸಾಗರ’ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ‘ರೋಟೆಕ್ಸ್ ಡಿಬೇಟ್ 2017 ಮೆಗಾ ಫಿನಾಲೆ’ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ನಾಲ್ಕನೆಯ ಸ್ತಂಭವೆಂದೇ ಪರಿಗಣಿಸಲ್ಪಟ್ಟ ಮಾಧ್ಯಮ ರಂಗವೂ ಭ್ರಷ್ಟಾಚಾರಕ್ಕೆ ಹೊರತಾಗಿಲ್ಲದಿರುವುದು ಘೋರ ದುರಂತ ಎಂದ ಅವರು ಹೈಸ್ಕೂಲು ಮಟ್ಟದಲ್ಲೇ ರಾಜಕಾರಣ, ವಂಶಪಾರಂಪರ್ಯ ಆಡಳಿತ, ಭ್ರಷ್ಟಾಚಾರ ಮೊದಲಾದ ವಿಷಯಗಳ ಚರ್ಚೆಯಲ್ಲಿ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಈ ಹಂತದಲ್ಲೇ ವಿದ್ಯಾರ್ಥಿಗಳು ಭ್ರಷ್ಟಾಚಾರ ಮುಕ್ತ ಭಾರತ ಕಟ್ಟಲು ಸಂಕಲ್ಪ ತೊಟ್ಟರೆ ಅದೇ ದೇಶಕ್ಕೆ ದೊಡ್ಡ ಕೊಡುಗೆ’ ಎಂದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಮೂಡಬಿದಿರೆ ರೋಟರಿ ಕ್ಲಬ್ ಟೆಂಪಲ್ ಟೌನ್ ಬೆಂಬಲದೊಂದಿಗೆ ಮಂಗಳೂರಿನ ಸೆಂಟರ್ ಫಾರ್ ಇಂಟೆಗ್ರಲ್ ಲರ್ನಿಂಗ್ ಸಂಘಟಿಸಿದ ಡಿಬೇಟ್ ಸ್ಪರ್ಧೆಯಲ್ಲಿ 50 ಮಂದಿ ಭಾಗವಹಿಸಿದ್ದರು. ಸಿಐಎಲ್‌ನ ನಂದಗೋಪಾಲ್ ಡಿಬೇಟ್ ನಡೆಸಿಕೊಟ್ಟರು. ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಶ್ಮಿತಾ ಯುವರಾಜ್ ಸ್ವಾಗತಿಸಿದರು.
ವೇದಿಕೆಯಲ್ಲಿ ಸಿಐಎಲ್ ನಿರ್ದೇಶಕಿ ಸಚಿತಾ ನಂದಗೋಪಾಲ್, ಐ.ಎಸ್.ಓ. ಸಂಯೋಜಕ ಆನಂದ ಕುಮಾರ್, ಎಕ್ಸಲೆಂಟ್ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಯಶೀಲ್ ಉಪಸ್ಥಿತರಿದ್ದರು. ಉಪನ್ಯಾಸಕಿ ವರ್ಷಾ ಕಾಮತ್ ಮುಖ್ಯ ಅಥಿತಿಗಳನ್ನು ಪರಿಚಯಿಸಿದರು. ಪ್ರಾಂಶುಪಾಲ ಸುರೇಶ್ ಬಾಬು ವಂದಿಸಿದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥ ವಿಮಲ್ ರಾಜ್ ಕಾರ್ಯಕ್ರಮ ನಿರೂಪಿಸಿದರು.
ಪ್ರಶ್ನಿಸುವ ಹಕ್ಕು
ಭಾರತದ ರಾಷ್ಟ್ರಪತಿ, ಪ್ರಧಾನಿ ಒಳಗೊಂಡಂತೆ ಎಲ್ಲ ಸರಕಾರದಿಂದ ಸಂಬಳ, ಸವಲತ್ತು ಪಡೆಯುವವರೆ ಲ್ಲರೂ ಜನಸೇವಕರೇ ಆಗಿದ್ದಾರೆ. ಈ ಜನಸೇವಕರ ನಡೆಯನ್ನು ಪ್ರಶ್ನಿಸುವ ಹಕ್ಕು ಈ ಪ್ರಜಾಪ್ರಭುತ್ವ ದೇಶದ ಎಲ್ಲರಿಗೂ ಇದೆ ಎಂದ ಸಂತೋಷ್ ಹೆಗ್ಡೆ.