ದಾವಣಗೆರೆ: ಜಿಲ್ಲೆಯ 4,500 ಬಿಸಿಯೂಟ ತಯಾರಕರ ಜೀವನಕ್ಕೇ ಸಂಚಕಾರ ತರುವಂತಹ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯನ್ನು ಇಸ್ಕಾನ್‌ಗೆ ವಹಿಸುವ ನಿರ್ಧಾರವನ್ನು ಜಿಲ್ಲಾಡಳಿತ ಕೈಬಿಡಬೇಕು ಎಂದು ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್(ಎಐಟಿಯುಸಿ) ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಸಿಯೂಟ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಳೆದ 16 ವರ್ಷದಿಂದ ದಾವಣಗೆರೆ ಜಿಲ್ಲೆಯಲ್ಲಿ 4,500ರಷ್ಟು ಬಿಸಿಯೂಟ ಕಾರ್ಯಕರ್ತರು ಗೌರವ ಧನದ ಹೆಸರಲ್ಲಿ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಜಿಲ್ಲಾಡಳಿತ ಇಸ್ಕಾನ್ ಸಂಸ್ಥೆಗೆ ಬಿಸಿಯೂಟ ಯೋಜನೆ ವಹಿಸುವ ನಿರ್ಧಾರ ಕೈಗೊಂಡಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.
ಇಸ್ಕಾನ್ ಸಂಸ್ಥೆಗೆ ಬಿಸಿಯೂಟ ಯೋಜನೆ ವಹಿಸುವುದರಿಂದ 4,500 ಬಿಸಿಯೂಟ ಕಾರ್ಯಕರ್ತರು ಮತ್ತು ಅವರ ಕುಟುಂಬದವರ ಜೀವನ ಅಕ್ಷರಶಃ ಬೀದಿಗೆ ಬರಲಿದೆ. ಹಾಗಾಗಿ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಬಿಸಿಯೂಟ ಯೋಜನೆಯನ್ನು ಇಸ್ಕಾನ್ ಸಂಸ್ಥೆಗೆ ವಹಿಸಬಾರದು. ಈ ಕೂಡಲೇ ನಿರ್ಧಾರವನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಿಸಿಯೂಟ ಎಂದರೆ ಶಾಲೆಯಲ್ಲಿ ಅಡುಗೆ ತಯಾರಿಸಿ ಮಕ್ಕಳಿಗೆ ಬಿಸಿ, ಶುಚಿಯಾದ ಊಟ ಬಡಿಸುವುದು. ಆದರೆ, ಅದಕ್ಕೆ ತದ್ವಿರುದ್ಧವಾಗಿ ಎಲ್ಲಿಯೋ, ಯಾವುದೋ ಸಮಯದಲ್ಲಿ ಅಡುಗೆ ಸಿದ್ಧಪಡಿಸಿ, ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತದೆ. ಅದನ್ನು ತಿನ್ನುವ ವೇಳೆಗೆ ಆಹಾರ ನೀರೊಡೆದಿರುತ್ತದೆ. ಈ ಎಲ್ಲವೂ ಗೊತ್ತಿದ್ದರೂ ಅಧಿಕಾರಿಗಳು ಬಿಸಿಯೂಟ ಯೋಜನೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗುತ್ತಿರುವುದು ಇಡೀ ಯೋಜನೆಗೇ ವಿರುದ್ಧ ಕ್ರಮ ಎಂದು ತಿಳಿಸಿದರು.
ಅಕ್ಷರ ದಾಸೋಹ ಬಿಸಿಯೂಟ ಯೋಜನೆಯಡಿ ಗೌರವಧನದ ಹೆಸರಲ್ಲಿ ಮುಖ್ಯ ಅಡುಗೆಯವರಿಗೆ 2,700 ಮತ್ತು ಸಹಾಯಕರಿಗೆ 2,600 ರೂ. ನೀಡಲಾಗುತ್ತಿದೆ. ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆಯಲ್ಲಿ ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಕೇಂದ್ರ ಸರ್ಕಾರ ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಮಾಸಿಕ 18 ಸಾವಿರ ರೂಪಾಯಿ ಕನಿಷ್ಠ ವೇತನ ಜಾರಿಗೆ ತರುವ ಮೂಲಕ ರಾಜ್ಯದ 1.18 ಲಕ್ಷ ಮಹಿಳೆಯರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ತಯಾರಕರನ್ನು ಶಾಲಾ ಸಿಬ್ಬಂದಿಯನ್ನಾಗಿ ಪರಿವರ್ತಿಸುವ ಮೂಲಕ ಸೇವಾ ಭದ್ರತೆ ಒದಗಿಸುವುದು, ಕಾರ್ಮಿಕರೆಂದು ಪರಿಗಣಿಸಿ, ಆರೋಗ್ಯ ವಿಮೆ, ಭವಿಷ್ಯನಿಧಿ ಇತರೆ ಸೌಲಭ್ಯ ಜಾರಿ, ಅಪಘಾತಕ್ಕೆ ತುತ್ತಾದವರಿಗೆ 2 ಲಕ್ಷ, ಮರಣ ಹೊಂದಿದ ಕುಟುಂಬದವರಿಗೆ 5 ಲಕ್ಷ ಪರಿಹಾರ ಒದಗಿಸಬೇಕು. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಹಂತ ಹಂತದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಖಜಾಂಚಿ ರುದ್ರಮ್ಮ, ಸಿ. ರಮೇಶ್, ವನಜಾಕ್ಷಮ್ಮ, ಅರುಣಾ, ಪ್ರಮೀಳಾ, ಲಲಿತಮ್ಮ, ಪದ್ಮಾ, ಬೊಮ್ಮಕ್ಕ, ಚನ್ನಮ್ಮ, ಐರಣಿ ಚಂದ್ರು, ಆವರಗೆರೆ ವಾಸು ಇತರರು ಇದ್ದರು.