Advertisement

“ತೀರ್ಮಾನವಾಗುವವರೆಗೆ ಜಿಲ್ಲೆಯ ಮಂದಿ ಟೋಲ್‌ ನೀಡಬೇಡಿ’

02:27 PM Feb 25, 2017 | Team Udayavani |

ಉಡುಪಿ: ಸಾಸ್ತಾನ ಟೋಲ್‌ಗೇಟ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ನೋಂದಾಯಿತ (ಕೆಎ 20) ಹಾಗೂ ಸ್ಥಳೀಯರ ಯಾವುದೇ ವಾಹನಗಳಿಗೆ ಟೋಲ್‌ ಶುಲ್ಕ ತೆಗೆದುಕೊಳ್ಳಬಾರದು ಎನ್ನುವ ಬೇಡಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಲಾಗಿದೆ. ಈ ಬಗ್ಗೆ ಒಂದು ರೀತಿಯ ತೀರ್ಮಾನವಾಗುವವರೆಗೆ ಉಡುಪಿ ಜಿಲ್ಲೆಯ ಮಂದಿ ಟೋಲ್‌ಗೇಟ್‌ನಲ್ಲಿ ಶುಲ್ಕ ನೀಡಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್‌ ಶೆಟ್ಟಿಯವರು ಉಡುಪಿ ಪ್ರಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ಮತ್ತು ಅವೈಜ್ಞಾನಿಕ ಕಾಮಗಾರಿ, ಮೂಲಸೌಕರ್ಯ ಹಾಗೂ ಉಡುಪಿ ಜಿಲ್ಲಾ ವಾಹನಗಳಿಗೆ ಟೋಲ್‌ ಶುಲ್ಕ ವಿನಾಯಿತಿ ಈ ಎಲ್ಲ ಬೇಡಿಕೆ ಈಡೇರಿಸುವಂತೆ ರಾ.ಹೆ. ಜಾಗೃತಿ ಸಮಿತಿಯು ಹೋರಾಟ ಮುಂದುವರಿಸುತ್ತಿದೆ. ಫೆ. 13ರಂದು ನಡೆದ ಉಡುಪಿ ಜಿಲ್ಲಾ ಬಂದ್‌ ವೇಳೆ ಬ್ರಹ್ಮಾವರ ವಿಶೇಷ ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿ ಟೋಲ್‌ ವಿನಾಯಿತಿ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸುವುದಾಗಿ ಹೇಳಿದ್ದರು. ಆನಂತರದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರು ಕೂಡ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಭೆ ನಡೆಸಿ ತೀರ್ಮಾನಕ್ಕೆ ಬರುವವರೆಗೆ ಯಾವುದೇ ಟೋಲ್‌ ಸಂಗ್ರಹ ಮಾಡಬಾರದು ಎನ್ನುವ ಸೂಚನೆ ನೀಡಿದ್ದಾರೆ. ಹಾಗಾಗಿ ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಉಡುಪಿ ಜಿಲ್ಲೆಯ ಯಾವುದೇ ವಾಹನಗಳಿಂದ ಟೋಲ್‌ ಸಂಗ್ರಹಿಸಬಾರದು. ನಿಯಮದಲ್ಲಿ ಏನೇ ಇದ್ದರೂ ಅದನ್ನು ಬದಲಾಯಿಸಿಕೊಳ್ಳಲಿ. ಇದನ್ನು ಹೊರತುಪಡಿಸಿ ಟೋಲ್‌ ಸಂಗ್ರಹಕ್ಕೆ ಮುಂದಾದಲ್ಲಿ ಹೋರಾಟ ಮುಂದುವರಿಯುವುದು ಎಂದರು.

ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಕಾರ್ಯದರ್ಶಿ ವಿಠಲ ಪೂಜಾರಿ, ಐರೋಡಿ ಗ್ರಾ.ಪಂ. ಅಧ್ಯಕ್ಷ ಮೋಸೆಸ್‌ ರಾಡ್ರಿಗಸ್‌, ಸಾಲಿಗ್ರಾಮ ಪ.ಪಂ. ಸದಸ್ಯ ಅಚ್ಯುತ ಪೂಜಾರಿ, ರೋಟರಿ ಕ್ಲಬ್‌ ಅಧ್ಯಕ್ಷ ಅಲ್ವಿನ್‌ ಅಂದ್ರಾದೆ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.

ವಿನಾಯಿತಿಯೇ ಸೂಕ್ತ ಪರಿಹಾರ
ಹಾಸನ, ಬೆಂಗಳೂರು ಇನ್ನಿತರ ಕಡೆಗಳಲ್ಲಿ ವಿನಾಯಿತಿ ಇಲ್ಲವಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಪ್ರತ್ಯೇಕ ಸರ್ವಿಸ್‌ ರಸ್ತೆಗಳನ್ನು ನಿರ್ಮಿಸಿ ಸ್ಥಳೀಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದಾರೆ. ಇಲ್ಲಿ 
ಜನರು ನಿತ್ಯ ಸಾಗುವ ನಗರದ ನಡುವೆಯೇ ಹೆದ್ದಾರಿ ಸಾಗಿದೆ. ಅತ್ತಿಂದಿತ್ತ ದೈನಂದಿನ ವ್ಯವಹಾರ ನಡೆಸಬೇಕಾದರೂ ಇಲ್ಲಿನ ಹೆದ್ದಾರಿಯಲ್ಲಿ ಸಾಗಬೇಕು. ಇದು ಅನಿವಾರ್ಯವೂ ಕೂಡ. ಈ ರೀತಿ ಇರುವಾಗ ಸೂಕ್ತವಾಗಿ ಸರ್ವೀಸ್‌ ರಸ್ತೆಯನ್ನೂ ಕಲ್ಪಿಸದೆ ದಿಗ½ಂಧನ ವಿಧಿಸಿದಂತೆ ಕಾಮಗಾರಿ ನಡೆಸಲಾಗಿದೆ. ಆದಕಾರಣ ನಾವು ರಿಯಾಯಿತಿ ಕೇಳುವುದಿಲ್ಲ. ವಿನಾಯಿತಿಯೇ ಇದಕ್ಕೆ ಸೂಕ್ತ ಪರಿಹಾರವಾಗಿದೆ. ಹೆದ್ದಾರಿಯ ಇನ್ನೊಂದು ಪಾರ್ಶ್ವಕ್ಕೆ 50 ಮೀ. ಸಾಗಬೇಕಾದರೂ ಆರೇಳು ಕಿ.ಮೀ. ಸುತ್ತು ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಕಾಮಗಾರಿಯೂ ಸರಿಯಾದ ಪ್ರಮಾಣದಲ್ಲಿ ಪೂರ್ಣಗೊಂಡಿಲ್ಲ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next