Advertisement

ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಿ

06:31 PM Mar 28, 2022 | Shwetha M |

ಮುದ್ದೇಬಿಹಾಳ: ರಾಜ್ಯವ್ಯಾಪಿ ಇರುವ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಕೊಡಬೇಕೆಂದು ಆಗ್ರಹಿಸಿ ಎ. 14ರ ಡಾ| ಬಿ.ಆರ್‌. ಅಂಬೇಡ್ಕರ್‌ ಜಯಂತಿ ದಿನದಂದು ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದು ಈಗಾಗಲೇ ಪೂರ್ವತಯಾರಿ ಭರದಿಂದ ಸಾಗಿವೆ ಎಂದು ಬೇಡ ಜಂಗಮ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಪ್ರಮುಖ ಮತ್ತು ಬೇಡ ಜಂಗಮ ರಥಯಾತ್ರೆ ಸಂಚಾಲಕ ಅರುಣಕುಮಾರ ಜಡಿಮಠ ಹೇಳಿದರು.

Advertisement

ಪಟ್ಟಣಕ್ಕೆ ರವಿವಾರ ಆಗಮಿಸಿದ ಬೇಡ ಜಂಗಮ ರಥಯಾತ್ರೆಯ ವಾಹನವನ್ನು ಸ್ವಾಗತಿಸಿಕೊಂಡು, ಕುಂಭ ಸಮೇತ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಕರೆತಂದಾಗ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಬೇಡ ಜಂಗಮ ರಥಯಾತ್ರೆಯ ಮೂಲಕ ಸಮಾಜದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬೇಡ ಜಂಗಮ ಪ್ರಮಾಣ ಪತ್ರದ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆಯುವ ಹೋರಾಟಕ್ಕೆ ರಾಜ್ಯವ್ಯಾಪಿ ಅಸಂಖ್ಯಾತ ಜಂಗಮ ಸಮಾಜದ ಪ್ರತಿನಿ ಗಳು ಆಗಮಿಸಿ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯ ಮಾಡುವ ಮೂಲಕ ರಾಜ್ಯವ್ಯಾಪಿ ಏಕರೂಪದ ಆದೇಶ ಮಾಡಲು ಮನವಿ ಮಾಡುತ್ತೇವೆ ಎಂದರು.

ಮುದ್ದೇಬಿಹಾಳ ತಾಲೂಕು ವೀರಶೈವ ಜಂಗಮ ಸಮಾಜದ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಶಿವಾನಂದ ಹಿರೇಮಠ, ಉಪಾಧ್ಯಕ್ಷ ದಾನಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್‌.ಐ. ಹಿರೇಮಠ, ಸಂಘದ ಖಜಾಂಚಿ ಮಹಾಂತೇಶ ಬೂದಿಹಾಳಮಠ ಮತ್ತು ಜಂಗಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ಹಿರೇಮಠ ಅವರು ಈ ಸಂದರ್ಭ ಮಾತನಾಡಿ ಬೇಡ ಜಂಗಮರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿ ರಾಜ್ಯವ್ಯಾಪಿ ಏಕರೂಪದ ಪ್ರಮಾಣ ಪತ್ರ ಕೊಡಬೇಕು ಎನ್ನುವುದು ನಮ್ಮ ಸಮಾಜದ ಹಲವು ವರ್ಷಗಳ ಬೇಡಿಕೆಯಾಗಿದೆ. ಬೆಂಗಳೂರಿನಲ್ಲಿ ನಡೆಯುವ ಹೋರಾಟಕ್ಕೆ ಎಲ್ಲ ತಾಲೂಕುಗಳಿಂದಲೂ ಸಮಾಜ ಬಾಂಧವರು ತೆರಳಿ ಸರ್ಕಾರಕ್ಕೆ ಒತ್ತಾಯ ಮಾಡಲು ಮುಂದಾಗಬೇಕು ಎಂದರು.

ಇದೇ ವೇಳೆ ಮಾತನಾಡಿದ ಎಲ್ಲ ಮುಖಂಡರು, ಸರ್ಕಾರವು ಪ್ರತಿ ವರ್ಷ ಮಾ. 16ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವ ಕುರಿತು ಆದೇಶ ಹೊರಡಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

Advertisement

ಸಂಘದ ಗೌರವಾಧ್ಯಕ್ಷ ಅರವಿಂದ ಲದ್ದಿಮಠ, ಅಧ್ಯಕ್ಷ ಸಿದ್ದಲಿಂಗಯ್ಯ ಕಲ್ಯಾಣಮಠ, ಸಂಘಟನಾ ಕಾರ್ಯದರ್ಶಿ ವೀರೇಶ ಹಿರೇಮಠ, ಪುರಸಭೆ ನಾಮ ನಿರ್ದೇಶಿತ ಸದಸ್ಯ ಪ್ರಸನ್ನಕುಮಾರ ಮಠ, ಪ್ರಮುಖರಾದ ಮಂಜು ಅಬ್ಯಾಳಮಠ ಕುಂಟೋಜಿ, ಮುತ್ತಯ್ಯ ಹಿರೇಮಠ, ಸಿದ್ದಯ್ಯ ಗಣಾಚಾರಿ, ಶಂಕರ ಹಿರೇಮಠ, ಜಂಗಮ ಸಮಾಜ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತೆಗ್ಗಿನಮಠ, ಗುರಯ್ಯ ಮುದ್ನೂರಮಠ, ಶಂಕರ ಸಾಲಿಮಠ, ಶಿವಾನಂದ ಸಾಲಿಮಠ, ಸಿದ್ದು ಹಿರೇಮಠ, ಗಿರಿಜಾ ಶಿವಯೋಗಿಮಠ, ಸಂಗಮ್ಮ ಸಾಲಿಮಠ, ಚಂದ್ರಶೇಖರ ಶಿವಯೋಗಿಮಠ, ಗೌರಮ್ಮ ಕಲ್ಯಾಣಮಠ, ಬೇಬಿ ಹಿರೇಮಠ ಸೇರಿ ಹಲವರು ಪಾಲ್ಗೊಂಡಿದ್ದರು.

ಬಸವೇಶ್ವರ ವೃತ್ತದಿಂದ ಜೈಕಾರದೊಂದಿಗೆ ಮರಳಿ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿದ ರಥಯಾತ್ರೆಯನ್ನು ತಾಳಿಕೋಟೆ ಪಟ್ಟಣದತ್ತ ಬೀಳ್ಕೊಡಲಾಯಿತು. ರಥಯಾತ್ರೆಯ ಸಂಚಾಲಕ ಜಡಿಮಠ, ಹಿರೇಮಠ ಮತ್ತಿತರರು ರಥಯಾತ್ರೆಯ ವಾಹನ ಸಮೇತ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next