ವಿಜಯಪುರ: ದೇಶದಲ್ಲಿ ಮತಾಂತರ ಮಿತಿ ಮೀರಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣ ಉತ್ತುಂಗಕ್ಕೇರಿದೆ. ಲವ್ ಜಿಹಾದ್, ದೇಶ ದ್ರೋಹದ ಕೃತ್ಯದಲ್ಲಿ ತೊಡಗಿದ್ದರೂ ನಿರ್ದಿಷ್ಟ ಸಮುದಾಯದ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಅಲ್ಪಸಂಖ್ಯಾತರ ಓಲೈಕೆಯ ಕಾರಣ ಹಿಂದೂಗಳನ್ನು ದ್ವಿತೀಯ ದರ್ಜೆ ನಾಗರಿಕರಂತೆ ಬಾಳುವ ದುಸ್ಥಿತಿ ಇದೆ ಎಂದು ಆರೆಸ್ಸೆಸ್ ಪ್ರಾಂತೀಯ ಸಹ ಸಂಚಾಲಕ ಅರವಿಂದ ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ನಗರದ ಗುರುಸಂಗನಬಸವ ಮಂಗಲ ಭವನದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಹಿಂದೂ ಜನಜಾಗೃತಿ ಚಿಂತನಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತು ಹಿಂದೂ ಸಂಸ್ಕೃತಿ ಬಗ್ಗೆ ಮಾತನಾಡುತ್ತಿರುವ ಈ ಹಂತದಲ್ಲಿ ಭಾರತದ ಮೂಲ ನಿವಾಸಿ ಹಿಂದೂಗಳು ತನ್ನದೇ ನೆಲದಲ್ಲಿ ದ್ವಿತೀಯ ದರ್ಜೆ ನಾಗರಿಕರಂತೆ ಜೀವಿಸುತ್ತಿದ್ದಾರೆ ಎಂದು ದೂರಿದರು.
ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಯುವತಿಯರ ದುರ್ಬಳಕೆ ಮಾಡಿಕೊಂಡು, ಮತಾಂತರ ಮಾಡಲಾಗುತ್ತಿದೆ. ಮತ್ತೂಂದೆಡೆ ಸರ್ಕಾರಗಳೂ ಕೂಡ ಕೇವಲ ಅಲ್ಪಸಂಖ್ಯಾತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆದು ಮತೀಯ ತುಷ್ಟೀಕರಣ ನೀತಿ ಅನುಸರಿಸುತ್ತಿವೆ. ಹಿಂದೂಗಳ ವಿಷಯ ಬಂದಾಗ ಜಾತ್ಯತೀತ ನೀತಿ ಬೋಧಿಸಲಾಗುತ್ತಿದೆ. ಪರಿಣಾಮ ಹಿಂದೂಗಳು ದೇಶದಲ್ಲಿ ದ್ವಿತೀಯ ದರ್ಜೆ ನಾಗರಿಕರಂತೆ ಜೀವಿಸುವ ದುಸ್ಥಿತಿ ಇದೆ ಎಂದು ಕಿಡಿಕಾರಿದರು.
ಗೋರಕ್ಷಣೆಗೆ ಮುಂದರೂ ಹಿಂದೂ ಧರ್ಮಿಯರ ಮೇಲೆ ಮೊಕದ್ದಮೆ ದಾಖಲಿಸಿ, ಹಿಂದೂ ಸಂಘಟನೆಗಳನ್ನು ಹಾಗೂ ಅವುಗಳ ಕಾರ್ಯಕರ್ತರನ್ನು ಮಟ್ಟ ಹಾಕುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹಿಂದೂಗಳು, ಹಿಂದುತ್ವ ಉಳಿದರೆ ದೇಶ ಉಳಿಯುತ್ತದೆ. ಹಿಂದೂ ಧರ್ಮ ಸಂರಕ್ಷಣೆಯಾದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಮಾತ್ರ ಭಾರತೀಯರೆಲ್ಲ ಒಂದೇ ಎಂಬ ನೈಜತೆ ಜಾರಿಗೆ ಬರಲಿ ಎಂದು ಆಗ್ರಹಿಸಿದರು.
ಸಾನ್ನಿಧ್ಯ ವಹಿಸಿದ್ದ ಕೆಸರಟ್ಟಿಯ ಸೋಮಲಿಂಗ ಶ್ರೀಗಳು ಮಾತನಾಡಿ, ಗೋಹತ್ಯೆ ನಿಷೇಧ, ಗೋರಕ್ಷಣೆಗೆ ಬದ್ಧವಾಗಿರುವ ಸರ್ಕಾರದಿಂದ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣ ಸಾಧ್ಯ. ಅಮೆರಿಕದಲ್ಲಿ ಬಹುಸಂಖ್ಯಾತರು ಕ್ರಿಶ್ಚಿಯನ್ ಧರ್ಮಿಯರಿದ್ದಾರೆ, ಅಲ್ಲಿಯೂ ಬೆರಳಣಿಕೆಯಷ್ಟು ಚರ್ಚ್‌ಗಳಿವೆ. ಆದರೆ ನಮ್ಮಲ್ಲಿ ಎಣಿಸಲಾರದಷ್ಟು ಚರ್ಚ್‌ಗಳು ನಿರ್ಮಾಣಗೊಳ್ಳುತ್ತಿವೆ. ಮತಾಂತರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹಿಂದೂ ಧರ್ಮದ ಸಂಸ್ಕೃತಿ ವಿನಾಶಕ್ಕೆ ಜಾರುತ್ತದೆ. ನಮ್ಮ ಧರ್ಮ, ಸಂಸ್ಕೃತಿ, ಜೀವನ ಕ್ರಮಗಳ ಶ್ರೇಷ್ಠತೆ ಬಗ್ಗೆ ವಿದೇಶಿಗರು ಆಸಕ್ತಿ ತೋರುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ನಾವುಗಳು ನಮ್ಮತನಗಳ ಕುರಿತು ಅನಾದರ ಹೊಂದುತ್ತಿರುವುದು ಶೋಚನೀಯ ಎಂದು ವಿಷಾದಿಸಿದರು.
ಬಬಲೇಶ್ವರ ಬೃಹನ್ಮಠದ ಡಾ| ಮಹಾದೇವ ಶ್ರೀಗಳು ಮಾತನಾಡಿ, ಹಿಂದೂ ಧರ್ಮವನ್ನು ಕಾಡುತ್ತಿರುವ ಮತಾಂತರದ ಪಿಡುಗು ನಿರ್ಮೂಲನೆಗೆ ಯುವ ಜನರು ಜಾಗೃತರಾಗಬೇಕು. ಇದಕ್ಕಾಗಿ ನಮ್ಮಲ್ಲಿರುವ ಲೋಪಗಳನ್ನು ಸರಿಪಡಿಸಿಕೊಂಡು ನಮ್ಮ ಧರ್ಮ ಸಂರಕ್ಷಣೆಗೆ ನಾವೇ ಪಣ ತೊಡಬೇಕು ಎಂದು ಸಲಹೆ ನೀಡಿದರು.
ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ-ಆಂಧ್ರಪ್ರದೇಶ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲಜಿ ಮಾತನಾಡಿದರು. ಪ್ರಕಾಶ ಮಹಾರಾಜ, ಮಲ್ಲಿಕಾರ್ಜುನ ಶ್ರೀಗಳು, ಧರ್ಮ ಜಾಗರಣಾ ವೇದಿಕೆ ಪ್ರಮುಖರಾದ ದಾಮೋದರಜಿ, ಮುನಿಯಪ್ಪ, ಬಸಯ್ಯ ಹಿರೇಮಠ, ಬಿ.ಎಸ್. ಪಾಟೀಲ, ಸುನೀಲ ಭೈರೋಡಗಿ ಇದ್ದರು.