Advertisement

ವೀರಶೈವ-ಲಿಂಗಾಯತ ಎರಡೆಂಬ ಭಾವ ಬೇಡ

10:08 AM May 27, 2022 | Team Udayavani |

ಹುಬ್ಬಳ್ಳಿ: ವೀರಶೈವ ಹಾಗೂ ಲಿಂಗಾಯತ ಎರಡು ಎನ್ನುವ ಭಾವನೆ ಬೇಡ. ಬಸವೇಶ್ವರ ತತ್ವ ಮತ್ತು ಶಿವಾಚಾರ್ಯರು ನಮಗೆ ಎರಡು ಕಣ್ಣುಗಳು ಇದ್ದಂತೆ ಎಂದು ವಿಧಾನ ಪರಿಷತ್ತು ಮಾಜಿ ಸಭಾಪತಿ ವೀರಣ್ಣ ಮತ್ತೀಕಟ್ಟಿ ಹೇಳಿದರು.

Advertisement

ಗುರುವಾರ ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘದ ಮೂಜಗಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿಯವರ 19ನೇ ಪುಣ್ಯಸ್ಮರಣೆ ಹಾಗೂ ಮೂಜಗಂ ಸಾಹಿತ್ಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ವೀರಶೈವ ಹಾಗೂ ಲಿಂಗಾಯತ ಎನ್ನುವ ಬೇಧ ಇರಲಿಲ್ಲ. ಆದರೆ ಕೆಲವರು ಇದನ್ನು ಸ್ವಹಿತಾಸಕ್ತಿ ಹಾಗೂ ರಾಜಕೀಯ ಕಾರಣಕ್ಕೆ ಬಳಸಿಕೊಂಡರು. ಜನರಲ್ಲಿ ಇಬ್ಭಾಗದ ಭಾವನೆ ಮೂಡಿಸದಂತೆ ಮನವಿ ಮಾಡಿದ್ದೆ. ಈ ಬೆಳವಣಿಗೆಯಿಂದಾಗಿ ಸಮಾಜದ ದೃಷ್ಟಿಯಲ್ಲಿ ಕೆಟ್ಟದಾಗಿ ಕಾಣುತ್ತಿದೆ. ಈ ಭಾಗದಲ್ಲಿ ಮೂರುಸಾವಿರ ಮಠ, ಗದುಗಿನ ಪಂಚಾಕ್ಷರಿ ಗವಾಯಿಗಳ ಆಶ್ರಮ, ಶಿವಯೋಗಮಂದಿರ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವಂತಹ ವಟುಗಳನ್ನು ತಯಾರಿಸುವ ಪವಿತ್ರ ಕೇಂದ್ರಗಳಾಗಿವೆ ಎಂದರು.

ಜಗದ್ಗುರು ಡಾ| ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಜ್ಞಾನ ಗಳಿಸಬೇಕು. ಪಡೆದ ಜ್ಞಾನವನ್ನು ಇನ್ನೊಬ್ಬರಿಗೆ ನೀಡಬೇಕು. ವಿನಯ ಇದ್ದಾಗ ಮಾತ್ರ ಪಡೆದ ವಿದ್ಯೆಗೆ ಗೌರವ ಬರುತ್ತದೆ. ಮೂಜಗಂ ಪ್ರಶಸ್ತಿಗೆ ಚಂದ್ರಶೇಖರ ಅವರು ಸೂಕ್ತ ವ್ಯಕ್ತಿಯಾಗಿದ್ದು, ವಚನ ಸಾಹಿತ್ಯಕ್ಕೆ ನೀಡಿದ ಸೇವೆ ದೊಡ್ಡದು ಎಂದು ಹೇಳಿದರು.

ವಿಧಾನ ಪರಿಷತ್ತು ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ನಾಯಕನಾದವನು ನ್ಯಾಯದ ಕಡೆ ಇರಬೇಕು. ಅದನ್ನು ಮರೆತರೆ ಅವನು ನಾಯಿಗಿಂತ ಕಡೆ. ಇಂದಿನ ಪರಿಸ್ಥಿತಿಯಲ್ಲಿ ಇದನ್ನು ಅರಿತುಕೊಳ್ಳುವ ಅಗತ್ಯವಿದೆ. ಮೂಜಗಂ ಶ್ರೀಗಳು ಸಮಾನತೆಗೆ ಹೆಚ್ಚಿನ ಒತ್ತು ನೀಡಿದವರು. ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಯ ಗುರಿ ಹೊಂದಿದ್ದರು. ಕೊನೆಗೆ ಮಹಿಳಾ ಕಾಲೇಜು ಆರಂಭಿಸಿದರು. ಇದರೊಂದಿಗೆ ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದರು ಎಂದರು.

Advertisement

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಇಂದಿನ ದಿನಗಳಲ್ಲಿ ಸಮಾಜಗಳನ್ನು ಒಡೆಯುವ ಕೆಲಸ ಆಗುತ್ತಿದೆ. ಎಚ್ಚೆತ್ತುಕೊಂಡು ಒಗ್ಗೂಡಿಕೊಂಡು ಜೀವನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವಾಮೀಜಿಗಳು ಸಮಾಜಕ್ಕೆ ತಿಳಿಹೇಳುವ ಕಾರ್ಯ ಮಾಡಬೇಕಾಗಿದೆ. ಮೂಜಗಂ ಅವರ ಪುಣ್ಯಸ್ಮರಣೆ ಮೂಲಕ ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಚರ್ಚೆಯಾಗಬೇಕು. ಕೇವಲ ಧಾರ್ಮಿಕ, ದಾಸೋಹಕ್ಕೆ ಸೀಮಿತವಾಗದೆ ಶಿಕ್ಷಣ, ಸಾಹಿತ್ಯ, ಸಮಾಜದಲ್ಲಿ ಸಾಮರಸ್ಯ ಶಾಂತಿ ಮೂಡಿಸುವ ಕೆಲಸ ಅವರಿಂದ ಆಗಿದೆ ಎಂದು ಹೇಳಿದರು.

ಹಾವೇರಿಯ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು. ಎರಡೆತ್ತಿನ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಬೈಲಹೊಂಗಲ ಮೂರುಸಾವಿರ ಮಠದ ಶಾಖಾ ಮಠದ ಶ್ರೀ ನೀಲಕಂಠ ಸ್ವಾಮೀಜಿ, ನರಗುಂದ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವಿದ್ಯಾವರ್ಧಕ ಸಂಘದ ಚೇರ್ಮೆನ್‌ ಅಧ್ಯಕ್ಷ ಅರವಿಂದ ಕುಬಸದ, ಕಾಂಗ್ರೆಸ್‌ ಮುಖಂಡ ಪ್ರಕಾಶ ಬುರಬುರೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next