Advertisement

ಅಂಗನವಾಡಿ ಮಕ್ಕಳಿಗೆ ಕಳಪೆ ಆಹಾರ ನೀಡಬೇಡಿ -ಸಚಿವ ಆಚಾರ ಹಾಲಪ್ಪ ಬಸಪ್ಪ

05:07 PM Jul 14, 2022 | Team Udayavani |

ಹಾವೇರಿ: ಅಂಗನವಾಡಿ ಮಕ್ಕಳಿಗೆ ಕಳಪೆ ಆಹಾರ ಪೂರೈಕೆ ಆಗುತ್ತಿರುವ ಕುರಿತಂತೆ ವ್ಯಾಪಕ ದೂರುಗಳಿವೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಸೂಪರ್‌ವೈಸರ್‌ಗಳು ಎಚ್ಚರ ವಹಿಸಬೇಕೆಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ ಹಾಲಪ್ಪ ಬಸಪ್ಪ ತಾಕೀತು ಮಾಡಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುವ ಬದಲು ತಮ್ಮ ವ್ಯಾಪ್ತಿಯ ಪ್ರತಿ ಅಂಗನವಾಡಿಗಳಿಗೆ ನಿಯಮಿತವಾಗಿ ಭೇಟಿ ನೀಡಿ ವೀಕ್ಷಣೆ ಮಾಡಬೇಕು. ಅಲ್ಲಿಯ ನ್ಯೂನತೆಗಳ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳ ಗಮನ ಸೆಳೆಯಬೇಕೆಂದು ಸೂಚನೆ ನೀಡಿದರು.

ಅಂಗನವಾಡಿ ಪರಿಸರವನ್ನು ಸ್ವಚ್ಛಗೊಳಿಸಿ ಮಕ್ಕಳ ಆಕರ್ಷಣೀಯ ಕೇಂದ್ರಗಳಾಗಿ ರೂಪಿಸಬೇಕು. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದಲ್ಲಿ ಮೇಲ ಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕೆಂದರು.

ಕೋವಿಡ್‌ ಪೂರ್ವದಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವೈದ್ಯಕೀಯ ಮತ್ತು ಪೌಷ್ಟಿಕ ಆಹಾರ ಪೂರೈಕೆಗಾಗಿ ಪ್ರತಿ ತಿಂಗಳು ಪ್ರತಿ ಮಗುವಿಗೆ ಎರಡು ಸಾವಿರ ರೂ. ನೀಡುವ ಕುರಿತಂತೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ತಾಲೂಕು ಹಂತದಲ್ಲಿ ಮೊಟ್ಟೆ ಖರೀದಿಗೆ ಟೆಂಡರ್‌ ಕರೆಯಲು ಅವಕಾಶ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ನೀಡಿದರು.

Advertisement

ಮಾತೃಪೂರ್ಣ, ಮಾತೃ ವಂದನೆ ಯೋಜನೆ ಅನುಷ್ಠಾನದಲ್ಲಿ ಹಿಂದುಳಿದಿರುವ ತಾಲೂಕುಗಳಲ್ಲಿ ವಿಶೇಷ ಐಇಸಿ ಚುಟುವಟಿಕೆಗಳನ್ನು ಹಮ್ಮಿಕೊಂಡು ತಾಯಂದಿರ ಮನವೊಲಿಸಿ ಅಂಗನವಾಡಿಯಲ್ಲೇ ಆಹಾರ ಸೇವಿಸಲು ಕ್ರಮ ಕೈಗೊಳ್ಳಿ. ಬಡವರಿಗಾಗಿ ರೂಪಿಸಿರುವ ಈ ಕಾರ್ಯಕ್ರಮ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದರು.

ನಿವೇಶನ ಇಲ್ಲದ ಅಂಗನವಾಡಿ ಕಟ್ಟಡಗಳಿಗೆ ತ್ವರಿತವಾಗಿ ಸರ್ಕಾರಿ ಜಮೀನುಗಳನ್ನು ಗುರುತಿಸಬೇಕು ಅಥವಾ ಬಳಕೆಯಾಗದ ಸರ್ಕಾರಿ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಬೇಕು. 75ನೇ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಗೆ 25 ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಆಗಸ್ಟ್‌ 15ರೊಳಗಾಗಿ ಎಲ್ಲ ಕಟ್ಟಡಗಳನ್ನು ಪೂರ್ಣಗೊಳಿಸಬೇಕು. ಆಗಸ್ಟ್‌ 15ರಂದು ರಾಜ್ಯಾದ್ಯಂತ ಅಮೃತ ಅಂಗನವಾಡಿ ಕೇಂದ್ರಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

ಅಮೃತ ಸ್ವ ಸಹಾಯ ಕಿರು ಉದ್ಯಮ ಯೋಜನೆಯಡಿ ಆಯ್ಕೆಯಾದ ಸ್ವ ಸಹಾಯ ಗುಂಪುಗಳಿಗೆ ಆಗಸ್ಟ್‌ 15ರೊಳಗೆ ಅನುದಾನ ಬಿಡುಗಡೆಗೊಳಿಸಬೇಕು. ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ, ಕಿರು ಸಾಲ ಸೇರಿದಂತೆ ವಿವಿಧ ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕಿನಿಂದ ತ್ವರಿತವಾಗಿ ಸಾಲ ನೀಡಲು ಸೂಚನೆ ನೀಡಿದರು.

ಭಾಗ್ಯಲಕ್ಷ್ಮೀ ಬಾಂಡ್‌ ವಿತರಣೆಯಲ್ಲಿ ವಿಳಂಬ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯಲ್ಲಿ 1195 ಹೆಣ್ಣು ಮಕ್ಕಳಿಗೆ ಪಾಸ್‌ ಬುಕ್‌ ವಿತರಣೆ ಬಾಕಿ ಉಳಿದಿದೆ. ಯಾವ ದಾಖಲೆಯ ಕೊರತೆಯಿಂದ ಬಾಕಿ ಉಳಿದಿವೆ ಎಂಬುದನ್ನು ಗುರುತಿಸಿ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಸೂಪರ್‌ವೈಸರ್‌ ಗಳಿಗೆ ಸೂಚಿಸಿದರು.

ವಿಶೇಷ ಅಭಿಯಾನ: ವಿಕಲಚೇತನರಿಗೆ ವಿಶೇಷ ವಿಶಿಷ್ಟ ಗುರುತಿನ ಚೀಟಿ ನೀಡುವ ಯೋಜನೆಯಡಿ ಮೆಡಿಕಲ್‌ ಬೋರ್ಡ್‌ನಲ್ಲಿ 11,452 ಅರ್ಜಿಗಳು ಬಾಕಿ ಉಳಿದಿವೆ. ವಿಶೇಷ ಅಭಿಯಾನ ಹಮ್ಮಿಕೊಂಡು ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಯುಡಿಐಡಿ ಕಾರ್ಡ್‌ಗಳನ್ನು ವಿತರಿಸುವಂತೆ ತಾಕೀತು ಮಾಡಿದರು. ಪಿಎಂ ಕೇರ್‌ ಫಾರ್‌ ಚಿಲರ್ ಯೋಜನೆಯಡಿ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಜಿಲ್ಲೆಯ ನಾಲ್ಕು ಮಕ್ಕಳಿಗೆ ಕಿಟ್‌ ವಿತರಿಸಲಾಯಿತು.

ಸಭೆಯಲ್ಲಿ ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖಾ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸರ್ಕಾರದ ಕಾರ್ಯದರ್ಶಿ ಡಾ|ರೇಜು ಟಿ.ಎಂ., ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ ರೋಷನ್‌, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಹನುಮಂತರಾಯ ಇದ್ದರು.

ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಲ್ಲಿ ಯಾವುದೇ ವಂಚನೆಯಾಗಬಾರದು. ಸರ್ಕಾರ ಈ ವಿಷಯ ವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹಾಲು, ಮೊಟ್ಟೆ ನೀಡುವ ಯೋಜನೆಯನ್ನು ವಿಸ್ತರಿಸಲಾಗಿದೆ. ಪ್ರತಿ ಮಕ್ಕಳಿಗೂ ಪೌಷ್ಟಿಕ ಆಹಾರ ನೀಡುವ ಮೂಲಕ ಅವರಲ್ಲಿರುವ ನ್ಯೂನತೆಗಳನ್ನು ಹೊಗಲಾಡಿಸಿ ಬೌದ್ಧಿಕ ಮತ್ತು ಮಾನಸಿಕ ವಿಕಾಸಕ್ಕೆ ಶ್ರಮಿಸಬೇಕು. –ಆಚಾರ ಹಾಲಪ್ಪ ಬಸಪ್ಪ, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next