ಬೆಂಗಳೂರು: ನ್ಯಾಯಪೀಠದಲ್ಲಿ ಕುಳಿತು ಕಾರ್ಯನಿರ್ವಹಿಸುವಾಗ ನಿಷ್ಠೆ, ಶ್ರದ್ಧೆ, ನಿಷ್ಪಕ್ಷಪಾತ ಇದ್ದಾಗ ತೀರ್ಪು ನೀಡಲು ಯಾವ ನ್ಯಾಯಾಧೀಶರೂ ಹೆದರಬೇಕಿಲ್ಲ ಎಂದು ನಿವೃತ್ತ ನ್ಯಾ.ಎ.ಜೆ.ಸದಾಶಿವ ಅಭಿಪ್ರಾಯಪಟ್ಟರು.
ರಂಗಶ್ರೀ ಕಲಾ ಸಂಸ್ಥೆ ಹಾಗೂ ದಯಾನಂದ ಸಾಗರ್ ಪ್ರತಿಷ್ಠಾನ ಸಹಯೋಗದಲ್ಲಿ ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ದಯಾನಂದ ಸಾಗರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಗರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನ್ಯಾಯಾಧೀಶರ ಕೆಲಸ ಬಹಳ ಕಷ್ಟವಾದದ್ದು. ತೀರ್ಪು ಕೊಡುವಾಗ ಎಂಟತ್ತು ಬಾರಿ ಚಿಂತನೆ ಮಾಡಬೇಕು ಎಂದು ಹೇಳಿದರು.
ಯಾವ ನ್ಯಾಯಾಧೀಶರಿಗೂ ನಾನು ಕೊಟ್ಟ ತೀರ್ಪು ಸರಿ ಎಂದು ಹೇಳಲು ಧೈರ್ಯ ಇರುವುದಿಲ್ಲ. ಏಕೆಂದರೆ ಅದರ ಮೇಲೆ ಮೇಲ್ಮನವಿಗಳು ಸಲ್ಲಿಕೆಯಾಗುತ್ತವೆ. ಕಣ್ಣು ಮುಚ್ಚಿಕೊಂಡು ತೀರ್ಪು ನೀಡಲು ಸಾಧ್ಯವಿಲ್ಲ. ವಾದ ಪ್ರತಿವಾದ ಆಲಿಸಿ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕವೂ ತೀರ್ಪು ನೀಡುವಾಗ ಇಡೀ ಕೋರ್ಟ್‌ದ್ದವರೆಲ್ಲರ ಕಣ್ಣುಗಳು, ಕಿವಿಗಳನ್ನು ಗಮನಿಸುತ್ತಿರುತ್ತವೆ ಎಂಬ ಎಚ್ಚರಿಕೆ ಕೂಡ ನ್ಯಾಯಾಧೀಶರ ಅಂತರಂಗದಲ್ಲಿ ತೊಳಲಾಟಕ್ಕೆ ಕಾರಣವಾಗಿರುತ್ತದೆ ಎಂದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಟಿ.ಎ.ಶರವಣ, ಮೇಯರ್ ಜಿ.ಪದ್ಮಾವತಿಹಿರಿಯ ಚಲನಚಿತ್ರ ನಟ ಡಾ.ಶ್ರೀನಾಥ್, ಸಾಗರ್ ಆಟೋಮೊಬೈಲ್ ಸಿಇಓ ರೋಹನ್ ಪಿ.ಸಾಗರ್, ರಂಗಶ್ರೀ ರಂಗಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಾಗರ್ ಪ್ರಶಸ್ತಿ ಪುರಸ್ಕಾರ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ಸೂಲಗಿತ್ತಿ ನರಸಮ್ಮ, ನಿವೃತ್ತ ನ್ಯಾ.ಎ.ಜೆ.ಸದಾಶಿವ, ಸಂಘಟಕ ಬಿ.ಪಿ.ಮಂಜೇಗೌಡ, ಪೊಲೀಸ್ ಅಧಿಕಾರಿ ಟಿ.ಮಹದೇವ, ವೈದ್ಯೆ ಡಾ.ಲತಾ ವೆಂಕಟರಾಮ್, ಎನ್.ಚೇತನ್ ಆನಂದ್, ಚಲನಚಿತ್ರ ನಿರ್ದೇಶಕ ಸಾಯಿ ಪ್ರಕಾಶ್, ವಿಜಯಕುಮಾರ್ ಅವರಿಗೆ ಸಾಗರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.