Advertisement

ಹೊಸ ಶಿಕ್ಷಣ ನೀತಿ ಜಾರಿ ಬೇಡ

03:29 PM Sep 29, 2020 | Suhan S |

ವಾಡಿ: ಸಂಸತ್‌ ಸದನಗಳಲ್ಲಿ ಚರ್ಚೆಯಿಲ್ಲದೆ ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿರುವ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಸಂಪೂರ್ಣ ಆರ್‌ಎಸ್‌ಎಸ್‌ ಹಿಡಿತದಲ್ಲಿದೆ. ವೃತ್ತಿ ಶಿಕ್ಷಣದ ಹೆಸರಿನಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಪೋಷಿಸುತ್ತ ಶ್ರೇಣೀಕೃತ ಸಮಾಜವನ್ನು ಮರುಸ್ಥಾಪಿಸುವ ಧ್ಯೇಯ ಹೊಂದಿರುವ ಕೆಟ್ಟ ಶಿಕ್ಷಣ ನಮಗೆ ಬೇಡ ಎಂದು ಸಾಹಿತಿ, ಅಂಕಣಕಾರ ಬಿ.ಶ್ರೀಪಾದ ಭಟ್‌ ಹೇಳಿದರು.

Advertisement

ಸಂಚಲನ ಸಾಹಿತ್ಯ ಸಾಂಸ್ಕೃತಿಕ ವೇದಿಕೆವತಿಯಿಂದ ಸೋಮವಾರ ಪಟ್ಟಣದ ಅಂಬೇಡ್ಕರ್‌ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-2020ರ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್‌ಎಸ್‌ ಎಸ್‌ನ ಅಂಗ ಸಂಸ್ಥೆಗಳಾದ ಭಾರತೀಯ ಶಿಕ್ಷಣ ಮಂಡಲ್‌, ಶಿಕ್ಷ ಸಂಸ್ಕೃತಿ ಉತ್ಥಾನ ನ್ಯಾಸ್‌ ಮತ್ತು ಭಾರತೀಯ ಭಾಷಾ ಮಂಚ್‌ ಜಂಟಿಯಾಗಿ ರಾಷ್ಟ್ರಾದ್ಯಂತ 40 ಸೆಮಿನಾರ್‌ಗಳನ್ನು ಸಂಘಟಿಸಲಾಗಿತ್ತು. ಆರ್‌ಎಸ್‌ಎಸ್‌ ಪದಾಧಿಕಾರಿಗಳೊಂದಿಗೆ ಮತ್ತು ಬಿಜೆಪಿ ಸರಕಾರವಿರುವ ರಾಜ್ಯಗಳೊಂದಿಗೆ ಚರ್ಚಿಸಲಾಗಿತ್ತು. ಸಂಘ ಪರಿವಾರದ ಅಂಗ ಸಂಸ್ಥೆಗಳು ತಮ್ಮ ಅಭಿಪ್ರಾಯಗಳನ್ನು ಸುಬ್ರಮಣ್ಯ ಸಮಿತಿ ಹಾಗೂ ನಂತರದ ಕಸ್ತೂರಂಗನ್‌ ಸಮಿತಿಗೆ ಸಲ್ಲಿಸಿದ್ದವು. ಭಾರತದ ಮೌಲ್ಯಗಳು, ಭಾಷೆ, ಕಲೆ ಸಂಸ್ಕೃತಿ ಎನ್‌ ಇಪಿ-2020 ಮುಖ್ಯಭಾಗಗಳಾಗಿರುತ್ತವೆ ಎಂದು ಎಸ್‌ಎಸ್‌ಯುಎನ್‌ನ ರಾಷ್ಟ್ರೀಯ ಕಾರ್ಯದರ್ಶಿ ಕೊಠಾರಿ ಪ್ರತಿಪಾದಿಸಿದ್ದರು.

ಆದರೆ ಪ್ರಭುತ್ವ ಮಾತ್ರ ಪ್ರಜಾತಾಂತ್ರಿಕ ನಿಲುವುಗಳನ್ನು ಗಾಳಿಗೆ ತೂರುವ ಮೂಲಕ ಜನವಿರೋಧಿ  ಶಿಕ್ಷಣ ನೀತಿ ಜಾರಿಗೆಗೆ ಹಟ ತೊಟ್ಟಿದೆ ಎಂದು ಆಪಾದಿಸಿದರು. ಉಪನ್ಯಾಸಕಿ ಹಾಗೂ ಹೋರಾಟಗಾರ್ತಿ ಅಶ್ವಿ‌ನಿ ಮಾತನಾಡಿ,ಶಿಕ್ಷಣ ತಜ್ಞರು, ಲೇಖಕರು, ವಿದ್ಯಾರ್ಥಿ ಸಂಘಟನೆಗಳು, ಪ್ರಜ್ಞಾವಂತರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೋಮುವಾದಸಿದ್ಧಾಂತ ಪಾಲಿಸಿರುವುದು ಸ್ಪಷ್ಟವಾಗಿದೆ. ಇದು ಇಡೀ ಶಿಕ್ಷಣದ ವಿಶ್ವಾರ್ಹತೆಗೆ ಧಕ್ಕೆಯುಂಟು ಮಾಡಿದೆ. ಕಡ್ಡಾಯ ಶಿಕ್ಷಣ ಹಕ್ಕು ತೆಗೆದುಹಾಕಿ ಬಾಲ್ಯದಲ್ಲಿಯೇ ಕುಲಕಸುಬಿನತ್ತ ನೂಕುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷೆ ಝರೀನಾಬೇಗಂ ಕಾರ್ಯಕ್ರಮ ಉದ್ಘಾಟಿಸಿದರು. ಸಂಚಲನ ಸಾಹಿತ್ಯ ವೇದಿಕೆಯ ಕಾಶಿನಾಥ ಹಿಂದಿನಕೇರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಅಧ್ಯಕ್ಷ ವಿಕ್ರಮ ನಿಂಬರ್ಗಾ ಮಾತನಾಡಿದರು. ಸಿದ್ಧಯ್ಯಶಾಸ್ತ್ರಿ ನಂದೂರಮಠ ಮತ್ತು ಬಸವರಾಜ ಯಲಗಟ್ಟಿ ಅವರು ಪ್ರಗತಿಪರ ಗೀತೆಗಳನ್ನು ಹಾಡಿದರು. ಡಾ| ಮಲ್ಲಿನಾಥ ತಳವಾರ, ಶ್ರವಣಕುಮಾರ ಮೊಸಲಗಿ, ರಮೇಶ ಮಾಶಾಳ, ದಯಾನಂದ ಖರ್ಜಗಿ, ದೇವಿಂದ್ರ ಕರದಳ್ಳಿ, ವೀರಣ್ಣ ಯಾರಿ, ಇಮಾನ್ವೆಲ್‌, ಸಿದ್ದಲಿಂಗ ಬಾಳಿ, ಅಶ್ವಿ‌ನಿ ಮದನಕರ, ಭೀಮಶಾ ಜಿರೊಳ್ಳಿ, ಚಂದ್ರಸೇನ ಮೇನಗಾರ, ಪದ್ಮರೇಖಾ ವೀರಭದ್ರಪ್ಪ, ಪೂಜಾ ಸಿಂಗೆ, ರವಿ ಕೋಳಕೂರ, ಚಂದ್ರು ಕರಣಿಕ, ಖೇಮಲಿಂಗ ಬೆಳಮಗಿ, ಸಂದೀಪ ಕಟ್ಟಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಹೋರಾಟಗಾರರು, ಪ್ರಗತಿಪರ ಚಿಂತಕರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಮಡಿವಾಳಪ್ಪ ಹೇರೂರ ನಿರೂಪಿಸಿದರು. ಮಲ್ಲೇಶ ನಾಟೇಕರ ವಂದಿಸಿದರು.

 

Advertisement

ನಾಳೆ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿ ಸಿ ಪ್ರತಿಭಟನೆ :

ಕಲಬುರಗಿ: ಕೇಂದ್ರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಅಖೀಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಕಾನ್ಫಡರೇಷನ್‌ ವತಿಯಿಂದ ಸೆ.30ರಂದು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾನ್ಫಡರೇಷನ್‌ಮಹಾಕಾರ್ಯದರ್ಶಿ ಎಂ.ಬಿ. ಸಜ್ಜನ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರು ಹೊಸ ಶಿಕ್ಷಣ ನೀತಿಗೆ ವಿರೋಧಿಸಿದ್ದು, ಅಂದು ಆಯಾ ವಿಶ್ವವಿದ್ಯಾಲಯಗಳಲ್ಲಿ ಎರಡು ಗಂಟೆಗಳ ಕಾಲ ಮುಷ್ಕರ ನಡೆಸಿ ಈ ಶಿಕ್ಷಣ ನೀತಿಯನ್ನು ತಡೆ ಹಿಡಿಯುವಂತೆ ಕೋರಿ ಕುಲಪತಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಗುಣಮಟ್ಟ ಕುಸಿಯಲಿದೆ. ಶಿಕ್ಷಣದ ಸೌಲಭ್ಯ ಮತ್ತು ಅವಕಾಶಗಳು ಹಾಗೂ ಪ್ರವೇಶಗಳಲ್ಲಿ ತಾರತಮ್ಯಗಳು ಹೆಚ್ಚಾಗಲಿವೆ. ಶಿಕ್ಷಣವು ಸಹವರ್ತಿ ಪಟ್ಟಿಯಲ್ಲಿದ್ದರೂ ರಾಜ್ಯ ಸರ್ಕಾರಗಳನ್ನು ಕಡೆಗಣಿಸಿ ಅವುಗಳ ಹಕ್ಕುಗಳನ್ನು ಮೊಟಕುಗೊಳಿಸಲಿದೆ ಎಂದು ದೂರಿದರು.

ಈ ಶಿಕ್ಷಣ ನೀತಿಯು ಶಿಕ್ಷಣದಲ್ಲಿ ತೀವ್ರವಾದ ಖಾಸಗೀಕರಣ, ವ್ಯಾಪಾರೀಕರಣಕ್ಕೆ ಎಡೆ ಮಾಡಿಕೊಟ್ಟು ಸಾರ್ವಜನಿಕ ಶಿಕ್ಷಣವನ್ನು ನಿರ್ನಾಮ ಮಾಡುವ ದುರುದ್ದೇಶ ಹೊಂದಿದೆ. ಕಾರ್ಪೋರೇಟ್‌ ತರಹದ ಈ ಶಿಕ್ಷಣ ವ್ಯವಸ್ಥೆಯು ಕೇಂದ್ರೀಕರಣ, ವ್ಯಾಪಾರೀಕರಣ ಮತ್ತು ಕೋಮುವಾದಿಕರಣ ಒಳಗೊಂಡಿದೆ ಎಂದು ಅವರು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ.ಜಿ ಕಿಣ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next