ಧಾರವಾಡ: ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರದಿಂದ ಸಾರ್ವಜನಿಕರಿಗೆ ಅಗತ್ಯ ವಸ್ತುಗಳಾದ ಹಾಲು, ಔಷಧಿ, ಪೆಟ್ರೋಲಿಯಂ ಉತ್ಪನ್ನಗಳು, ತರಕಾರಿ, ಅಡುಗೆ ಅನಿಲ , ಮೇವು ಸರಬರಾಜು ಮತ್ತು ಶಾಲೆ-ಕಾಲೇಜುಗಳ ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ|ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಲಾರಿ ಮುಷ್ಕರಕ್ಕೆ ಸಂಬಂಧಿಸಿದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅಗತ್ಯ ಸಲಹೆ-ಸೂಚನೆ ನೀಡಿದ ಅವರು, ಮುಷ್ಕರ ನಿರತರು ಒತ್ತಾಯ ಪೂರ್ವಕವಾಗಿ ವಾಹನಗಳನ್ನು ತಡೆಯುವ, ಸಂಚಾರ ವ್ಯವಸ್ಥೆಗೆ ಅಡಚಣೆ ತರುವ ಕಾರ್ಯ ಮಾಡಬಾರದೆಂದು ಮನವಿ ಮಾಡಿದರು.
ಒಂದು ವೇಳೆ ಮುಷ್ಕರ ಮುಂದುವರಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆವುಂಟಾಗದಂತೆ ಸಂಘಟನೆಗಳು ಎಚ್ಚರ ವಹಿಸಬೇಕು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಹಾಗೂ ಗಸ್ತು ಸಂಚಾರದ ಏರ್ಪಾಡು ಮಾಡಿದೆ. ಆಹಾರ, ತರಕಾರಿ, ಹಾಲು, ಔಷಧಿ, ಮೇವು, ಕುಡಿಯುವ ನೀರು, ಅಡಿಗೆ ಅನಿಲ ಸೇರಿದಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುವ ಯಾವುದೇ ವಾಹನಗಳ ಸಂಚಾರಕ್ಕೂ ವ್ಯತ್ಯಯ ಉಂಟಾಗಬಾರದು.
ಅಗತ್ಯ ಬಿದ್ದರೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಸರಕಾರದ ವಿವಿಧ ಇಲಾಖೆಗಳಿಗೆ ಸೇರಿದ ವಾಹನಗಳನ್ನು ಗುರುತಿಸಿ ಅಗತ್ಯ ಸೇವೆಗಳ ಸರಬರಾಜಿಗೆ ಸಿದ್ಧವಾಗಿಟ್ಟುಕೊಂಡಿರಬೇಕು ಎಂದು ಸೂಚನೆ ನೀಡಿದರು. ಪೆಟ್ರೋಲಿಯಂ ಕಂಪೆನಿಗಳೂ ಸಾಕಷ್ಟು ಸಂಗ್ರಹ ಇಟ್ಟುಕೊಂಡಿರಬೇಕು. ಪೆಟ್ರೋಲ್ ಬಂಕ್‌ಗಳಲ್ಲಿ ಸರಕಾರಿ ವಾಹನಗಳಿಗೆ ಇಂಧನ ಮೀಸಲಾಗಿಟ್ಟುಕೊಂಡಿರಬೇಕು.
ಸಾರ್ವಜನಿಕರು ತಮ್ಮ ಕುಂದು- ಕೊರತೆಗಳನ್ನು ಸಹಾಯವಾಣಿ ಸಂಖ್ಯೆಗಳ ಮೂಲಕ ಜಿಲ್ಲಾಡಳಿತ ಮತ್ತು ಪೊಲೀಸರ ಗಮನಕ್ಕೆ ತರಬೇಕು ಎಂದರು. ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗೈಬುಸಾಬ್ ಹೊನ್ಯಾಳ ಮಾತನಾಡಿ, ವಿಮೆಯ ಪ್ರಿಮಿಯಂ ಮೊತ್ತ, ಹೆದ್ದಾರಿಗಳಲ್ಲಿನ ಟೋಲ್ ದರ ಮತ್ತು ಟೋಲ್ ಸಂಗ್ರಹ ಸಂಖ್ಯೆಗಳನ್ನು ಹೆಚ್ಚಿಸಿರುವುದರಿಂದ ಮುಷ್ಕರ ಹೂಡಲಾಗಿದೆ. ನಮ್ಮ ಬೇಡಿಕೆಗಳ ಈಡೇರಿಕೆಗೆ ಶಾಂತಿಯುತವಾಗಿ ಹೋರಾಡುತ್ತೇವೆ ಎಂದರು.
ಪೊಲೀಸ್ ಉಪ ಆಯುಕ್ತ ಜಿನೇಂದ್ರ ಖನಗಾವಿ, ಧಾರವಾಡ ಗ್ರಾಮೀಣ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ, ಉಪ ಸಾರಿಗೆ ಆಯುಕ್ತ ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಉಪ ನಿರ್ದೇಶಕ ಸದಾಶಿವ ಮರ್ಜಿ, ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀಕಾಂತ ತೋಟಗೆ, ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳಾದ ಗಂಗಾಧರ ಹೊಸಮನಿ, ಶಂಭುಕುಮಾರ ಸುಂಕದ, ರಾಜಮಹ್ಮದ್ ಎಸ್.ಪಠಾಣ, ಸುನೀಲ ಕಲಾಲ, ಮ್ಯಾಕ್ಸಿಕ್ಯಾಬ್ ಮಾಲೀಕರ ಸಂಘದ ಅಧ್ಯಕ್ಷ ಹೆಚ್.ಎಂ.ತೋಪಿನಕಟ್ಟಿ ಸಭೆಯಲ್ಲಿದ್ದರು.