ಬೆಂಗಳೂರು: ಓಲಾ,ಊಬರ್ ಸಂಸ್ಥೆಗಳ ಎದುರು ಕಾನೂನು ಬಾಹಿರವಾಗಿ ಪ್ರತಿಭಟಿಸುವವಂತಿಲ್ಲ, ಕರ್ತವ್ಯ ನಿರ್ವಹಿಸದಂತೆ ಚಾಲಕರಿಗೆ ನಿರ್ಬಂಧ ಹೇರುವಂತಿಲ್ಲ ಎಂದು ಓಲಾ, ಊಬರ್ ಚಾಲಕರ ಒಕ್ಕೂಟಗಳಿಗೆ ಹೈಕೋರ್ಟ್ ಸೋಮವಾರ ಸೂಚಿಸಿದೆ.
ಓಲಾ ಟ್ಯಾಕ್ಸಿ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವೀರಪ್ಪ, ಓಲಾ, ಊಬರ್ ಚಾಲಕರ ಒಕ್ಕೂಟಗಳು ಚಾಲಕರನ್ನು ಕರ್ತವ್ಯಕ್ಕೆ ತೆರಳದಂತೆ ಬಲವಂತವಾಗಿ ನಿರ್ಬಂಧಿಸ ಬಾರದು. ಸ್ವ ಇಚ್ಛೆಯಿಂದ ಕರ್ತವ್ಯಕ್ಕೆ ತೆಳುವವರಿಗೆ ಅವಕಾಶ ಮಾಡಿಕೊಡ ಬೇಕು,ಸಂಸ್ಥೆಗಳ ಕಚೇರಿ ಮುಂದೆ ಕಾನೂನು ಬಾಹಿರ ಪ್ರತಿಭಟನೆಗಳನ್ನು ನಡೆಸಬಾರದು ಎಂದು ಸೂಚಿಸಿದೆ.
ಒಕ್ಕೂಟದ ಅಧ್ಯಕ್ಷ ತನ್ವೀರ್ ಪಾಷಾ ಹಾಗೂ ಸದಸ್ಯ ಅಶೋಕ್‌ಕುಮಾರ್‌ಗೆ ತತ್‌ಕ್ಷಣ ನೋಟೀಸ್ ಜಾರಿಗೊಳಿಸಿ, ಮುಂದಿನ 8 ವಾರಗಳ ಕಾಲ ಮಧ್ಯಂತರ ಆದೇಶ ನೀಡಿದರು. ಚಾಲಕರಿಗೆ ಪ್ರೋತ್ಸಾಹಧನ ಹೆಚ್ಚಳ,ಏಕಾಏಕಿ ಕೆಲಸದಿಂದ ವಜಾಗೊಳಿಸುವ ಕ್ರಮ ಕೈ ಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಓಲಾ, ಊಬರ್ ಚಾಲಕರ ಒಕ್ಕೂಟದ ಸದಸ್ಯರು,
ಇತ್ತೀಚೆಗೆ ಎಚ್‌ಬಿಆರ್ ಲೇಔಟ್‌ನ ಊಬರ್ ಕಚೇರಿಯಲ್ಲಿ ಪೀಠೊಪಕರಣಗಳನ್ನು ಧ್ವಂಸ ಮಾಡಿದ್ದರು. ಅಲ್ಲದೆ ಬಲವಂತವಾಗಿ ಚಾಲಕರಿಗೆ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಯುಂಟಾಗುತ್ತಿದೆ ಎಂದು ಆರೋಪಿಸಿ ಊಬರ್ ಸಂಸ್ಥೆ ಸಿವಿಲ್ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.
ನಾವು ಸ್ವಯಂ ಪ್ರೇರಿತವಾಗಿ ಮತ್ತು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದೊಂದು ಅಹಿಂಸಾತ್ಮಕ ಹೋರಾಟ. ಹೀಗಾಗಿ, ಇದಕ್ಕೆ ನ್ಯಾಯಾಲಯ ಅಡ್ಡಿಪಡಿಸಿಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಒತ್ತಾಯಪೂರ್ವಕವಾಗಿ ಟ್ಯಾಕ್ಸಿಗಳ ಸಂಚಾರಕ್ಕೆ ತಡೆಯೊಡ್ಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ.
-ಪ್ರತಿಭಟನಾಕಾರರು