ಬೆಂಗಳೂರು: ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆ ಭಾಗದ ಜನರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ತೀವ್ರಗೊಳ್ಳುತ್ತಿರುವ ಪ್ರತ್ಯೇಕ ರಾಜ್ಯ ಬೇಡಿಕೆ ವಿಚಾರದಲ್ಲಿ ಇದೀಗ ಸರ್ಕಾರದ ನೆರವಿಗೆ ಬಂದಿರುವ ಉತ್ತರ ಕರ್ನಾಟಕ ಭಾಗದ ಸಚಿವ ಬೆಂಡೆಪ್ಪ ಕಾಶೆಂಪೂರ, ವಿವಾದಕ್ಕೆ ತೇಪೆ ಹಚ್ಚುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಜೋರಾದ ಬಳಿಕ ಇದೇ ಮೊದಲ ಬಾರಿ ಜೆಡಿಎಸ್ ಸಚಿವರೊಬ್ಬರು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಮ್ಮಿಶ್ರ ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದಾರೆ. ಮುಖ್ಯಮಂತ್ರಿ ಅಥವಾ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ಒಂದೊಮ್ಮೆ ಅನ್ಯಾಯವಾಗಿದ್ದರೆ ಚರ್ಚೆ ನಡೆಸಿ ಅನ್ಯಾಯ ಸರಿಪಡಿಸೋಣ. ಅದು ಬಿಟ್ಟು ಪ್ರತ್ಯೇಕ ರಾಜ್ಯದ ಬೇಡಿಕೆ ಸರಿಯಲ್ಲ. ಅಖಂಡ ಕರ್ನಾಟಕ ಎಲ್ಲರ ಜವಾಬ್ದಾರಿಯಾಗಬೇಕು ಎಂದು ಹೇಳಿದ್ದಾರೆ.
ವಿಕಾಸಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ, ವಿಜಯಪುರ ಭಾಗದ ಕೆಲವು ರೈತರು ಇದೀಗ ಪ್ರತ್ಯೇಕ ರಾಜ್ಯದ ಕೂಗು ಹಾಕುತ್ತಿದ್ದಾರೆ. ಆದರೆ, ಸಮ್ಮಿಶ್ರ ಸರ್ಕಾರವಾಗಲೀ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಾಗಲೀ ಉತ್ತರ ಕರ್ನಾಟಕದ ಬಗ್ಗೆ ಯಾವತ್ತೂ ನಿರ್ಲಕ್ಷ್ಯ ಮಾಡಿಲ್ಲ. ಇದಕ್ಕೆ ದಾಖಲೆಗಳೇ ಇವೆ. ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸಿದರು. ಸುವರ್ಣ ಸೌಧಕ್ಕೆ ಅಡಿಗಲ್ಲು ಹಾಕಿ ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಬೆಳೆಸಿದರು. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ತಂದು ಪ್ರತಿ ವರ್ಷ 1500 ಕೋಟಿ ರೂ. ಒದಗಿಸಲು ನಿರ್ಧರಿಸಿದರು. ಇದಲ್ಲದೆ, ದೇವೇಗೌಡರು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಆ ಭಾಗದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದರು. ಇದೆಲ್ಲವನ್ನೂ ಪ್ರತ್ಯೇಕ ರಾಜ್ಯದ ಕೂಗು ಹಾಕುವವರು ಗಮನಿಸಬೇಕು ಎಂದರು.
ಅಲ್ಲದೆ, ಸಮ್ಮಿಶ್ರ ಸರ್ಕಾರ ಮಾಡಿದ ರೈತರ ಸಾಲ ಮನ್ನಾದ ಹೆಚ್ಚು ಅನುಕೂಲ ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತದೆ. ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಘೋಷಿಸಿದ ಕ್ಲಸ್ಟರ್‌ಗಳ ಪೈಕಿ ಐದು ಕ್ಲಸ್ಟರ್‌ಗಳು ಆ ಭಾಗದಲ್ಲೇ ಸ್ಥಾಪನೆಯಾಗಿದೆ. ಹೀಗಿರುವಾಗ ಬಜೆಟ್‌ನಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸುವುದು ಸರಿಯಲ್ಲ. ಈ ಬಗ್ಗೆ ಚರ್ಚೆಗೆ ಬರುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗಾಗಲೇ ಕರೆ ಕೊಟ್ಟಿದ್ದಾರೆ. ಆದ್ದರಿಂದ ಪ್ರತ್ಯೇಕತೆಯ ಕೂಗು ಬಿಟ್ಟು ಅಖಂಡ ಕರ್ನಾಟಕ ಎಂಬ ಅಭಿಪ್ರಾಯದೊಂದಿಗೆ ಆ ಭಾಗದ ಜನ ಚರ್ಚೆಗೆ ಬರಲಿ. ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸೋಣ ಎಂದು ಹೇಳಿದರು.