Advertisement

ತಡ ಮಾಡಬೇಡಿ; ಇವತ್ತೇ ಫೈಲ್‌ ಮಾಡಿ

06:07 PM Jul 09, 2018 | Team Udayavani |

ಆದಾಯ ತೆರಿಗೆ ಮಾಹಿತಿ ಸಲ್ಲಿಕೆಗೆ ಜುಲೈ 31 ಕೊನೆಯ ದಿನ. ಇನ್ನೂ 25 ದಿನಗಳು ಬಾಕಿ ಇವೆ ನಿಧಾನವಾಗಿ ಆ ಕೆಲಸ ಮಾಡಿದರಾಯ್ತು ಎಂದು ಯೋಚಿಸುವ ಜನ ನಮ್ಮೆಲ್ಲರ ನಡುವೆಯೇ ಇದ್ದಾರೆ. ಕೊನೆಯ ದಿನದವರೆಗೂ ಸುಮ್ಮನಿದ್ದು ಆಮೇಲೆ ಪರಿತಪಿಸುವ ಬದಲು, ಈಗಲೇ ಐಟಿ ರಿಟರ್ನ್ಸ್ ಫೈಲ್‌ ಮಾಡುವುದು ಜಾಣತನ.

Advertisement

ಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಕೆ ಮಾಡ್ಬೇಕು. ಅವಸರ ಇಲ್ಲ. ಅದಕ್ಕೆ ಜು.31 ಕೊನೆಯ ದಿನ. ತುಂಬಾ ಟೈಂ ಇದೆ. ಹಾಗಾಗಿ, ಅವಸರ ಇಲ್ಲ. ನಿಧಾನಕ್ಕೆ ಮಾಡಿದಾಯ್ತು. ಏನೂ ಪ್ಲಾಬ್ರೆಂ ಇಲ್ಲ. ಹೀಗೆಂದು ದಿನ ಕಳೆಯುವವ ಲಿಸ್ಟ್‌ನಲ್ಲಿ ನೀವೂ ಇದ್ದೀರಾ? ಹಾಗಿದ್ದರೆ ಕೊಂಚ ಯೋಚನೆ ಮಾಡಿಕೊಳ್ಳುವುದು ಒಳ್ಳೆಯದು. ಮನೆಗೆ ಬೆಂಕಿ ಬಿದ್ದಾಗ ಅದನ್ನು ನಂದಿಸಲು ನೀರಿಗಾಗಿ ಬಾವಿ ತೋಡುವುದು ಉತ್ತಮವೋ? ಅಥವಾ ಬೆಂಕಿಯಿಂದ ಅಪಾಯ ಬಾರದಂತೆ ತಡೆಗಟ್ಟುವುದು ಒಳ್ಳೆಯದೋ?

ಹಾಗಿದ್ದರೆ, ಬೆಂಕಿಯಿಂದ ಅಪಾಯ ಬಾರದಂತೆ ತಡೆಗಟ್ಟುವುದೇ ಉತ್ತಮ ಚಿಂತನೆ. ಹೌದು ತಾನೆ? ಅದೇ ನಿಲುವನ್ನೂ ವೈಯಕ್ತಿಕ ಆದಾಯ ತೆರಿಗೆ ಪಾವತಿ ಅಥವಾ ರಿಟರ್ನ್ಸ್ ಸಲ್ಲಿಕೆಗೆ ಸಂಬಂಧಿಸಿದಂತೆ ಹೊಂದಬೇಕಿರುವುದು ಈ ಕ್ಷಣದ ಅಗತ್ಯ ಕೊನೆಯ ದಿನಾಂಕಕ್ಕೆ ಕಾಯುವುದು ಬುದ್ಧಿವಂತಿಕೆಯ ಲಕ್ಷಣವಲ್ಲ. ಬೇಗ ಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಕೆಯಿಂದ ಅನುಕೂಲಗಳೂ ಇವೆ ಎನ್ನುವುದನ್ನು ನಾವು ನೀವೆಲ್ಲರೂ ಮನಗಾಣಬೇಕು.

2018 -19ನೇ ವಿತ್ತೀಯ ವರ್ಷಕ್ಕೆ ರಿಟರ್ನ್ಸ್ ಸಲ್ಲಿಕೆ ಮಾಡದೇ ಇದ್ದರೆ ಈ ವರ್ಷದಿಂದ 5 ಸಾವಿರ ರೂ. ದಂಡ ಪಾವತಿ ಮಾಡಬೇಕಾಗುತ್ತದೆ. ಶೀಘ್ರಾತಿ ಶೀಘ್ರವಾಗಿ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದರೆ ಉಂಟಾಗುವ ಅನುಕೂಲಗಳನ್ನು ಗಮನಿಸೋಣ.

1. ಶೀಘ್ರ ಮರು ಪಾವತಿ ಅಥವಾ ಪ್ರೊಸೆಸಿಂಗ್‌
ಇಲ್ಲಿ ಹೇಗೆಂದರೆ,  ಮೊದಲು ಬಂದವರಿಗೆ ಮೊದಲ ಆದ್ಯತೆ. ನಮ್ಮ ನಿಮ್ಮೆಲ್ಲರ ಕಚೇರಿಯಲ್ಲಿ ಫಾರಂ 16 ಅಥವಾ ಸಂಬಂಧಿಸಿದ ತೆರಿಗೆ ದಾಖಲೆಗಳ ಮೂಲಕ ಆದಾಯ ತೆರಿಗೆ ಇಲಾಖೆಗೆ ವಿವರ ಸಲ್ಲಿಸಿದಲ್ಲಿ ಶೀಘ್ರದಲ್ಲಿಯೇ ಅದು ಕಾನೂನಿಗೆ ಒಳಪಟ್ಟ ನಿಯಮಕ್ಕೆ ಅನುಸಾರವಾಗಿ ಪರಿಶೀಲನೆಗೆ ಒಳಗಾಗುತ್ತದೆ. ಹೀಗಾಗಿ, ತೆರಿಗೆ ಕ್ಲೇಮು ಮಾಡಿಕೊಳ್ಳುವುದಿದ್ದರೆ ಶೀಘ್ರವಾಗಿಯೇ ಅದು ನಮಗೆ ಜಮಾ ಆಗುತ್ತದೆ.

Advertisement

2. ಮರು ಪರಿಶೀಲನೆಗೆ ಅವಕಾಶ
ಕೆಲಸವನ್ನು ಕೊನೆಯ ಹಂತಕ್ಕೆ ಇರಿಸಿಕೊಂಡರೆ ಏನಾದರೊಂದು ಎಡವಟ್ಟು ಜೊತೆಯಾಗುವುದು ನಿಶ್ಚಿತ. ಹಣಕಾಸು ಮತ್ತು ತೆರಿಗೆಗೆ ಸಂಬಂಧಿಸಿದ ವಿಚಾರಗಳಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ತೆರಿಗೆ ರಿಟರ್ನ್ಸ್ ಮಾಡುವ ದಾಖಲೆಗಳನ್ನು ನಿಧಾನವಾಗಿ ಬರೆದು ಭರ್ತಿ ಮಾಡಬೇಕು. ಅವಸರವಾಗಿ ಇದ್ದರೆ ಏನೇನೋ ಬರೆದು ತಪ್ಪು ಮಾಹಿತಿ ದಾಖಲಾಗಿ ಹೋಗುತ್ತದೆ. ಜತೆಗೆ ಸಣ್ಣ ತಪ್ಪುಗಳೂ ನಡೆದು ಹೋಗುತ್ತವೆ. ರಿಟರ್ನ್ಸ್ ಸಲ್ಲಿಕೆ ನಂತರ ಅದರ ಪರಿಶೀಲನೆ ವೇಳೆ ತಪ್ಪುಗಳು ಕಂಡು ಬಂದರೆ ಅದನ್ನು ಪರಿಷ್ಕರಿಸಬೇಕಾಗುತ್ತದೆ. ಯಾವ ದಾಖಲೆಗಳು ಬೇಕು ಎಂದು ಕೂಲಂಕಷವಾಗಿ ಪರಿಶೀಲನೆಗೂ ಅವಕಾಶವಿರುತ್ತದೆ.

3. ನಷ್ಟ ತಪ್ಪಿಸಿಕೊಳ್ಳಲು ಅವಕಾಶ
ಉದ್ಯಮದಲ್ಲಿ ಲಾಭದ ಜತೆಗೆ ನಷ್ಟವೂ ಇರುತ್ತದೆ. ಅದೇ ರೀತಿ ವೈಯಕ್ತಿಕ ತೆರಿಗೆ ಪಾವತಿ ಮಾಡುವ ಸಂಬಳದಾರರಿಗೆ ಕೆಲವೊಂದು ಹಂತದಲ್ಲಿ ಯಾವುದೋ ಅಂಶ ಭರ್ತಿ ಮಾಡಲು, ದಾಖಲೆ ತೋರಿಸಲು ಬಿಟ್ಟು ಹೋಗಿರುತ್ತದೆ. ನಿಗದಿತವಾಗಿ ಮುಂದಿನ ವಿತ್ತೀಯ ವರ್ಷದಲ್ಲಿ ಬರುವ ಸಂಭಾವ್ಯ ಆದಾಯವನ್ನು ನಿರೀಕ್ಷಿಸಿ, ಆದಾಯ ತೆರಿಗೆ ಇಲಾಖೆಯಿಂದ ಸಿಗುವ ವಿನಾಯಿತಿಯನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ.

4. ದಂಡ ತಪ್ಪಿಸಿಕೊಳ್ಳಿ
ಆದಾಯ ತೆರಿಗೆಗೆ ಸಂಬಂಧಿಸಿದಂತೆ ವರ್ಷದಿಂದ ವರ್ಷಕ್ಕೆ ಕಾನೂನುಗಳು ಕಠಿಣವಾಗುತ್ತಲೇ ಇರುತ್ತವೆ. 2018-19ನೇ ಸಾಲಿನಿಂದ, ಅಂದರೆ ಹಾಲಿ ವಿತ್ತೀಯ ವರ್ಷದಿಂದ ನಿಗದಿತ ದಿನಾಂಕ (ಜು.31)ದ ಬಳಿಕ ರಿಟರ್ನ್ಸ್ ಸಲ್ಲಿಕೆ ಮಾಡಿದರೆ ಅದಕ್ಕೆ 5 ಸಾವಿರ ರೂ. ಜುಲ್ಮಾನೆ ವಿಧಿಸಲಾಗುತ್ತದೆ. ಜತೆಗೆ ಪ್ರತಿ ತಿಂಗಳು ಶೇ.1ರಂತೆ ಬಡ್ಡಿಯನ್ನೂ ಪಾವತಿ ಮಾಡಬೇಕಾಗುತ್ತದೆ. ತಪ್ಪಿದಲ್ಲಿ ಇಲಾಖೆಯಿಂದ ನೋಟಿಸ್‌ ಜಾರಿ ಮಾಡಲಾಗುತ್ತದೆ.

5. ಹೆಚ್ಚು ಸಮಯ ಬೇಕಾಗುತ್ತದೆ
ಕೊನೆಯ ದಿನಾಂಕಕ್ಕೆ 2-3 ದಿನಗಳು ಇರುವಾಗ ಆದಾಯ ತೆರಿಗೆ ಇಲಾಖೆ, ಚಾರ್ಟರ್ಡ್‌ ಅಕೌಂಟೆಂಟ್‌ಗಳ ಕಚೇರಿಗಳಲ್ಲಿ ತೆರಿಗೆ ಪಾವತಿದಾರರು ಸಾಲುಗಟ್ಟಿ ನಿಂತಿರುತ್ತಾರೆ. ಈಗ ಹೇಗಿದ್ದರೂ ಆನ್‌ಲೈನ್‌ನಲ್ಲಿ ರಿಟರ್ನ್ಸ್ ಸಲ್ಲಿಕೆ ಮಾಡಲು ಅವಕಾಶ ಇದೆ. ದೇಶಾದ್ಯಂತ ಲಕ್ಷ ಲಕ್ಷ ಮಂದಿ ಏಕಕಾಲಕ್ಕೆ ಆದಾಯ ತೆರಿಗೆ ವೆಬ್‌ಸೈಟ್‌ ಮೂಲಕ ರಿಟರ್ನ್ಸ್ ಸಲ್ಲಿಕೆ ಮಾಡಲು ಪ್ರಯತ್ನಿಸುತ್ತಿರುವಾಗ ವೆಬ್‌ಸೈಟ್‌ ನಿಧಾನವಾಗಿಯೇ ಸ್ಪಂದಿಸುತ್ತದೆ. ಅದೇ ದಿನ  ಬೇರೇನೋ ತುರ್ತು ಕೆಲಸವೂ ಇರುತ್ತದೆ. ಇವೆಲ್ಲಾ ಕಾರಣಗಳಿಂದ ಕೆಲವೊಮ್ಮೆ ಕಡೆಯ ದಿನ ಐಟಿ ರಿಟರ್ನ್ಸ್ ಫೈಲ್‌ ಮಾಡಲು ಆಗುವುದೇ ಇಲ್ಲ. ಆಗ, ಛೀ ಕೆಲಸವೇ ಆಗಲಿಲ್ಲ ಎಂದು ಅನಗತ್ಯವಾಗಿ ಪರಿತಪಿಸುವ ಪರಿಸ್ಥಿತಿಯನ್ನು ನಾವೇ ನಿರ್ಮಾಣ ಮಾಡಿಕೊಂಡಂತೆಯೂ ಆಗುತ್ತದೆ.

6. ಸಾಲ ಪಡೆಯಲು, ವೀಸಾಕ್ಕೆ ಅನುಕೂಲ
ವಾಹನ, ಗೃಹ ಸಾಲ ಪಡೆಯುವ ಇರಾದೆ ಇದ್ದರೆ ಬ್ಯಾಂಕ್‌ನಲ್ಲಿ ಮೊದಲು ಕೇಳುವುದೇ ಆದಾಯ ತೆರಿಗೆ ಸಲ್ಲಿಸಿದ ವಿವರ. ಇದರ ಜತೆಗೆ ವಿದೇಶ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ವೀಸಾ ನೀಡಿಕೆ ಸಂದರ್ಭದಲ್ಲಿಯೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ವಿವರಗಳನ್ನು ತಪ್ಪದೇ ಕೇಳುತ್ತಾರೆ. ಸರಿಯಾ ರೀತಿಯಲ್ಲಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದೀರಿ ಎಂದು ಗೊತ್ತಾಗುವುದೇ ಆದಾಯ ತೆರಿಗೆ ಇಲಾಖೆಯ ದಾಖಲೆಗಳ ಮೂಲಕ. ಹೀಗಾಗಿ, ಅದನ್ನು ದಾಖಲೆಯಲ್ಲಿ ಕಪ್ಪು ಚುಕ್ಕಿ ಇರಿಸಿಕೊಳ್ಳುವುದು ಉತ್ತಮವಲ್ಲ.

7. ಆಸ್ತಿ ನೋಂದಣಿಗೆ ಸಹಾಯಕ
ಜಮೀನಿನ ಮೇಲೆ ಹೆಚ್ಚಿನ ಸಂದರ್ಭಗಳಲ್ಲಿ ಹೂಡಿಕೆ ಮಾಡಿ ಕಪ್ಪುಹಣವನ್ನು ಕಾನೂನುಬದ್ಧಗೊಳಿಸುವ ಕಲೆಯನ್ನು ಕೆಲವರು ಮಾಡುತ್ತಾರೆ. ಹೀಗಾಗಿ, ಕೆಲವೊಂದು ರಾಜ್ಯಗಳಲ್ಲಿ ಜಮೀನು ಖರೀದಿ ಮಾಡಿ, ಅದನ್ನು ನೋಂದಣಿ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಮೂರು ವಿತ್ತೀಯ ವರ್ಷಗಳ ತೆರಿಗೆ ದಾಖಲೆಗಳನ್ನು ಕೇಳುತ್ತಾರೆ. ಹೀಗಾಗಿ, ಬೇಗ ಐಟಿ ರಿಟರ್ನ್ಸ್ ಸಲ್ಲಿಸಿದರೆ, ಅದರಿಂದ ಜಮೀನು ಖರೀದಿಗೂ ಅನುಕೂಲವಾಗುತ್ತದೆ.

ಸಂಬಳದಾರರೇ ಗಮನಿಸಿ
1. ತೆರಿಗೆ ಪಾವತಿ ಮಾಡುವವರಲ್ಲಿ ಸಂಬಳದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗಾಗಿ ಆದಾಯ ತೆರಿಗೆ ಇಲಾಖೆಯ ಹಲವು ಜನಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ಸಂಬಳದಾರರು ವೇತನವಲ್ಲದೆ ಇತರ ಮೂಲಗಳಿಂದ ಆದಾಯ ಪಡೆದುಕೊಳ್ಳುವುದಿದ್ದರೆ ಅದಕ್ಕೆ ಐಟಿಆರ್‌ ಫಾರಂ-1 (ಸಹಜ್‌) ಅನ್ನು ಬಳಕೆ ಮಾಡಬೇಕು. 2017-18ನೇ ವಿತ್ತೀಯ ವರ್ಷದಲ್ಲಿ ವೇತನದಾರನ ಆದಾಯ 50 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದರೆ ಸಹಜ್‌ ಮೂಲಕ ರಿಟರ್ನ್ಸ್ ಸಲ್ಲಿಕೆ ಮಾಡಲು ಅಸಾಧ್ಯ.

2. ಕಳೆದ ವಿತ್ತೀಯ ವರ್ಷದಲ್ಲಿ ಸಂಬಳದ ಮೂಲಕ ಆದಾಯ ಬಂದಿದ್ದರೆ,  ಷೇರು ಪೇಟೆ, ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆಗಳಿಂದ ಲಾಭ ಬಂದಿದ್ದರೆ ಅದಕ್ಕೆ ಐಟಿಆರ್‌-2 ಮೂಲಕ ರಿಟರ್ನ್ಸ್ ಸಲ್ಲಿಕೆ ಮಾಡಬೇಕು.

– ಸದಾಶಿವ ಕೆ.

Advertisement

Udayavani is now on Telegram. Click here to join our channel and stay updated with the latest news.

Next