Advertisement

ರೈತರಿಂದ ಬಲವಂತದಿಂದ ಸಾಲ ವಸೂಲಿ ಬೇಡ; ನೆರವಿಗೆ ಸರಕಾರ

12:48 AM Jul 27, 2023 | Team Udayavani |

ಬೆಂಗಳೂರು: ಗ್ರಾಮ ಲೆಕ್ಕಿಗರಿಂದ ಹಿಡಿದು ಜಿಲ್ಲಾಧಿಕಾರಿವರೆಗಿನ ಸಂಬಂಧಪಟ್ಟ ಅಧಿಕಾರಿಗಳೆಲ್ಲ ಕಾರ್ಯಸ್ಥಾನಗಳಲ್ಲೇ ಇರಬೇಕು. ನಿಮಗೆ ಬಿಡುವಾದಾಗ ಜನರಿಗೆ ಸಿಗುವುದಲ್ಲ; ಜನರ ಸಮಯಕ್ಕೆ ನೀವು ಲಭ್ಯ ವಾಗಬೇಕು. ಈ ಹಿನ್ನೆಲೆಯಲ್ಲಿ ತಮ್ಮ ಲಭ್ಯತೆ ಮತ್ತು ಸಂಪರ್ಕ ಸಂಖ್ಯೆ ಸಹಿತ ಮಾಹಿತಿ ಪುಸ್ತಕ ಪ್ರಕಟಿಸಿ ಸ್ಥಳೀಯರಿಗೆ ವಿತರಿಸಬೇಕು. ಜತೆಗೆ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವವರ ವಿರುದ್ಧ ಪೊಲೀಸ್‌ ನೆರವಿನೊಂದಿಗೆ ಕ್ರಮ ಕೈಗೊಳ್ಳಬೇಕು…

Advertisement

– ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಧಿಕಾರಿಗಳಿಗೆ ನೀಡಿದ ಖಡಕ್‌ ಸೂಚನೆ.

ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ರಾಜ್ಯದ ಹವಾಮಾನ ಮತ್ತು ಮಳೆ-ಬೆಳೆಯ ಸ್ಥಿತಿಗತಿಗಳ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಅವರು ಈ ಸೂಚನೆ ನೀಡಿದರು.

ರಾಜ್ಯಾದ್ಯಂತ ಧಾರಾಕಾರವಾಗಿ ಸುರಿಯು ತ್ತಿರುವ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಒಂದು ವಾರ ಭಾರೀ ಮಳೆಯ ಮುನ್ಸೂಚನೆ ಇದೆ. ಹಾಗಾಗಿ ಪಂಚಾ ಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರಾಮ ಲೆಕ್ಕಿಗ, ತಹಶೀಲ್ದಾರ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಸಹಿತ ಎಲ್ಲರೂ ತಮ್ಮ ಕಾರ್ಯಸ್ಥಾನಗಳಲ್ಲೇ ಇರಬೇಕು. ಸಕಾಲದಲ್ಲಿ ಜನರಿಗೆ ಸುಲಭವಾಗಿ ಸಿಗುವುದರ ಜತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸ ಬೇಕು ಎಂದು ಸಿಎಂ ನಿರ್ದೇ ಶಿಸಿದರು.

ಡಿ.ಕೆ. ಶಿವಕುಮಾರ್‌ ಮಾತನಾಡಿ, ರಾಮನಗರದಲ್ಲಿ ಅಧಿಕಾರಿಗಳಿಗೆ ಕಾರ್ಯಸ್ಥಾನ ಬಿಡ ದಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಪಂಚಾಯತ್‌ನಿಂದ ಜಿಲ್ಲಾಮಟ್ಟದವರೆಗಿನ ಎಲ್ಲ ಅಧಿಕಾರಿಗಳ ಮಾಹಿತಿಯನ್ನು ಒಳಗೊಂಡ ಪುಸ್ತಕ ಪ್ರಕಟಿಸಿ ಸ್ಥಳೀಯವಾಗಿ ವಿತರಿಸಲಾಗುತ್ತಿದೆ. ಇದೇ ಮಾದರಿಯನ್ನು ರಾಜ್ಯದ ಇತರ ಜಿಲ್ಲೆಗಳೂ ಅನುಸರಿಸಬೇಕು ಎಂದು ಹೇಳಿದ್ದು, ಇದಕ್ಕೆ ಮುಖ್ಯಮಂತ್ರಿಗಳೂ ದನಿಗೂಡಿಸಿದರು.

Advertisement

ಮುನ್ನೆಚ್ಚರಿಕೆ ವಹಿಸಿ
ಭೂಕುಸಿತ ಆಗಬಹುದಾದ ಸ್ಥಳಗಳ ಬಗ್ಗೆ ಒಂದು ಹಂತಕ್ಕೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇರುತ್ತದೆ. ಪೊಲೀಸ್‌, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮಧ್ಯೆ ಸಮನ್ವಯವಿದ್ದರೆ ಸಾಕಷ್ಟು ಜೀವಹಾನಿ ತಪ್ಪಿಸಬಹುದು.

ಕರಾವಳಿ: ಇಂದು ರೆಡ್‌, ಆರೆಂಜ್‌ ಅಲರ್ಟ್‌
ಮಂಗಳೂರು/ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರವೂ ಮಳೆ ಮುಂದುವರಿದಿದೆ. ಹಲವೆಡೆ ಕೃತಕ ನೆರೆ ಉಂಟಾಗಿದೆ.
ಕರಾವಳಿ ಭಾಗದಲ್ಲಿ ಜು. 27ರಂದು ಬೆಳಗ್ಗೆ 8 ಗಂಟೆಯವರೆಗೆ “ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ 204.5 ಮಿ.ಮೀ.ಗಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಜು. 27ರಂದು ಬೆಳಗ್ಗೆ 8 ಗಂಟೆಯಿಂದ “ಆರೆಂಜ್‌ ಅಲರ್ಟ್‌’ ಘೋಷಣೆ ಮಾಡಲಾಗಿದ್ದು, ಜು. 29 ಮತ್ತು ಜು. 30ರ ವರೆಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಕೊಲ್ಲೂರಿನ ಅರಶಿನಗುಂಡಿ ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿರುವ ಭದ್ರಾವತಿಯ ಶರತ್‌ ಕುಮಾರ್‌ ಅವರಿಗಾಗಿ ಬುಧವಾರವೂ ಶೋಧ ಮುಂದುವರಿದ್ದರೂ ಯಾವುದೇ
ಸುಳಿವು ಪತ್ತೆಯಾಗಿಲ್ಲ.

ಕಿರುಕುಳ ನೀಡಿದರೆ ಕಠಿನ ಕ್ರಮ
ಪ್ರವಾಹದ ಸಂದರ್ಭದಲ್ಲಿ ರೈತರಿಂದ ಬಲವಂತದ ಸಾಲ ವಸೂಲು ಮಾಡಬಾರದು. ತಪ್ಪಿದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ ನೀಡಿದರು.

ದಿನದ ಅಥವಾ ವಾರದ ಬಡ್ಡಿದರದಲ್ಲಿ ರೈತರಿಗೆ ಖಾಸಗಿಯವರು ಸಾಲ ನೀಡಿರುತ್ತಾರೆ. ಪ್ರವಾಹದಿಂದ ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಕಿರುಕುಳ ನೀಡಬಾರದು. ಈ ನಿಟ್ಟಿನಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಬಿತ್ತನೆಯಾಗಿದ್ದು, ಬೀಜ, ಗೊಬ್ಬರ ಹಾಗೂ ಔಷಧ ಕೊರತೆಯಾಗ ದಂತೆ ನೋಡಿಕೊಳ್ಳಬೇಕು. ಮಳೆ ಬಾರದೆ ಬಿತ್ತನೆ ಹಾಳಾಗಿರುವ ಜಿಲ್ಲೆಗಳಲ್ಲಿ ರೈತರಿಗೆ ಬಿತ್ತನೆ ಬೀಜ ನೀಡಬೇಕು. ಕರ್ತವ್ಯಲೋಪ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next