Advertisement

ಪ್ರಾಮಾಣಿಕತೆಗೆ ಧಕ್ಕೆ ತರಬೇಡಿ: ನರೇಂದ್ರಬಾಬು

11:04 AM Aug 07, 2018 | |

“ನಾನು ಯಾರಿಗೂ ಮೋಸ ಮಾಡಿಲ್ಲ. ಎಲ್ಲೂ ಅಡ್ಡದಾರಿ ಹಿಡಿದಿಲ್ಲ. ಸೃಜನಶೀಲ ಕೃತಿಗಳನ್ನ ಸಿನಿಮಾ ಮಾಡಬೇಕು ಅಂತ ಕನಸು ಕಟ್ಟಿಕೊಂಡು ಬಂದವನು …’ ಇದು ನಿರ್ದೇಶಕ ನರೇಂದ್ರ ಬಾಬು ಅವರ ಮಾತು. ಅವರು ಹೀಗೆ ಹೇಳ್ಳೋಕೆ ಕಾರಣ, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಪೋಸ್ಟ್‌ ಮಾರ್ಟಂ ರಿಪೋರ್ಟುಗಳು. ಚಿತ್ರದ ಕುರಿತು ಅನಂತ್‌ ನಾಗ್‌ ಅವರು ನೀಡಿದ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಯಿತು.

Advertisement

ಅದರ ಜೊತೆಗೆ, ನಿರ್ದೇಶಕ ನರೇಂದ್ರ ಬಾಬು ಅವರು ಒಂದು ಕೋಟಿ ಬಾಚಿಕೊಂಡು ಹೋಗಿದ್ದಾರೆ ಎಂಬಂತಹ ಸುದ್ದಿಗಳು ಹರಿದಾಡುತ್ತಿರುವುದರಿಂದ, ಸಹಜವಾಗಿಯೇ ನರೇಂದ್ರ ಬಾಬು ಬೇಸರಗೊಂಡಿದ್ದಾರೆ. ತಾವೆಲ್ಲೂ ಹೋಗಿಲ್ಲ ಎಂದು ತಿಳಿಸುವುದರ ಜೊತೆಗೆ, ಇದೆಲ್ಲದರಿಂದ ತಮ್ಮ ಪ್ರಾಮಾಣಿಕತೆಗೆ ಧಕ್ಕೆಯುಂಟಾಗಿದೆ ಎಂದು ತಿಳಿಸುವ ಸಲುವಾಗಿ ಸೋಮವಾರ ಬೆಳಿಗ್ಗೆ ನರೇಂದ್ರ ಬಾಬು, ಮಾಧ್ಯಮದವರನ್ನು ಭೇಟಿಯಾಗಿ ನಡೆದ ಸತ್ಯ ಸಂಗತಿಯನ್ನು ಬಿಚ್ಚಿಟ್ಟರು.

“ನನಗೆ ಅನಂತ್‌ ನಾಗ್‌ ಅವರ ಬಗ್ಗೆ ಅಪಾರ ಗೌರವ ಇದೆ. ಆವರನ್ನು ತುಂಬಾ ಎತ್ತರದಲ್ಲಿ ನೋಡುವಂತಹ ಸಮೂಹನೇ ಈ ಕರ್ನಾಟಕದಲ್ಲಿದೆ. ನಾನು ಈಗ ಕಣ್‌ ಬಿಡುತ್ತಿರುವ ನಿರ್ದೇಶಕನಷ್ಟೇ. ಇವತ್ತಿನವರೆಗೂ ಕಣ್‌ ಬಿಡೋಕೆ ಒದ್ದಾಡುತ್ತಲೇ ಇದ್ದೀನಿ. ಪ್ರಾಮಾಣಿಕವಾಗಿ ಹೇಳ್ತೀನಿ. ನಾನು ಯಾರಿಗೂ ಮೋಸ ಮಾಡಿಲ್ಲ. ಯಾವ ಅಡ್ಡದಾರಿಗೂ ಹೋಗಿಲ್ಲ. ಸೃಜನಶೀಲ ಕೃತಿಗಳನ್ನ ಸಿನಿಮಾ ಮಾಡಬೇಕು ಎಂದು ಕನಸು ಕಂಡುಕೊಂಡೇ ಇಲ್ಲಿಗೆ ಬಂದವನು.

ನಾನು ಅವರ ಬಳಿ ಹೋದಾಗ ಮೂರು ಸ್ವಮೇಕ್‌ ಕಥೆ ತೆಗೆದುಕೊಂಡು ಹೋಗಿದ್ದೆ. ಆದರೆ, ಕಥೆ ಕೇಳಿ ಅವರಿಗೆ ಯಾಕೋ ಧೈರ್ಯ ಸಾಲಲಿಲ್ಲ. ಕೊನೆಗೆ ಈ ಮೂರು ಕಥೆಗಳಲ್ಲಿ ನಿರ್ಮಾಪಕರಿಗೆ ಯಾವುದು ಇಷ್ಟ ಆಗಿದೆ ಅಂತ ಕೇಳಿದರು. ನಾನು, ನಿರ್ಮಾಪಕರು ಇಂಗ್ಲೀಷ್‌ ಚಿತ್ರವೊಂದರ ಸಿಡಿ ಕೊಟ್ಟಿದ್ದಾರೆ ಅಂದೆ. ಅದರ ಒನ್‌ಲೈನ್‌ ಹೇಳಿದೆ. ಆಗ ಅವರು ಓಕೆ, ಚೆನ್ನಾಗಿದೆ ಮಾಡೋಣ ಎಂದರು. ಅವರಿಗೆ ಏನೂ ಗೊತ್ತಿಲ್ಲ ಅಂತಲ್ಲ, ಎಲ್ಲವೂ ಗೊತ್ತಿದೆ.

ಮೊದಲೇ ಸ್ಕ್ರಿಪ್ಟ್ ಕೊಟ್ಟಿದ್ದೆ. ಇಂಗ್ಲೀಷ್‌ ಚಿತ್ರದ ಸಿಡಿ ಕೊಡಲು ಹೋದಾಗ, ಬೇಡ ಅಂದಿದ್ದರು. ನನಗಂತೂ ರೀಮೇಕ್‌ ಮಾಡುವ ಮನಸ್ಥಿತಿಯೇ ಇರಲಿಲ್ಲ. ಆದರೆ, ಆರ್ಥಿಕ ಒತ್ತಡವಿತ್ತು. ಅದರಿಂದ ಹೊರಬರಬೇಕಿತ್ತು. ಹಾಗಾಗಿ ಒಪ್ಪಿಕೊಂಡು ಚಿತ್ರ ಮಾಡಿದೆ. ಚಿತ್ರ ಬಿಡುಗಡೆಯಾದ ನಂತರ ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ನಡೆಯುತ್ತಿದೆ. ಕೋಟಿ ದುಡ್ಡು ಹೊತ್ಕೊಂಡ್‌ ಹೋಗಿಬಿಟ್ಟ ಅಂತೆಲ್ಲಾ ಸುದ್ದಿಯಾಗಿದೆ.

Advertisement

ಇದು ಸುಳ್ಳು. ಅನಂತ್‌ ನಾಗ್‌ ಅವರು ಹೇಳಿದ ಮಾತನ್ನು ಬೇರೆ ರೀತಿ ಅರ್ಥೈಸಿಕೊಂಡು ಚಾನೆಲ್‌ವೊಂದರಲ್ಲಿ ನನ್ನ ಬಗ್ಗೆ ಕೇವಲವಾಗಿ ವರದಿ ಮಾಡಲಾಗಿದೆ. ಅದು ಬೇಸರ ತಂದಿದೆ. ಅನಂತ್‌ ನಾಗ್‌ ಅವರ ಬಗ್ಗೆ ಬೇಸರವಿಲ್ಲ. ಆದರೆ, ನನ್ನ ಪ್ರಾಮಾಣಿಕತೆಗೆ ಧಕ್ಕೆ ತರುವಂತಹ ಸುದ್ದಿ ಮಾಡಿದವರ ಬಗ್ಗೆ ಬೇಸರವಿದೆ’ ಎನ್ನುತ್ತಾರೆ ನರೇಂದ್ರ ಬಾಬು.

ತೆಲುಗು ಕಾದಂಬರಿಯ ಕನ್ನಡ ಚಿತ್ರ: ನರೇಂದ್ರ ಬಾಬು ಈಗ ಇನ್ನೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಅದು ತೆಲುಗಿನ “ಮೆರುಪುಲ ಮರಕಲು’ (ಮಿಂಚಲ್ಲಿ ಕರೆಗಳು) ಕಾದಂಬರಿ ಆಧಾರಿತ ಚಿತ್ರ. ಇದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗಲಿದೆ. ತೆಲುಗಿನ ತ್ರಿಪುರನೇನಿ ಗೋಪಿಚಂದ್‌ ಬರೆದಿರುವ “ಮೆರುಪುಲ ಮರಕಲು’ ಕಾದಂಬರಿ ಇಟ್ಟುಕೊಂಡು ಸಿನಿಮಾ ಮಾಡಲು ಅಣಿಯಾಗಿರುವ ನರೇಂದ್ರ ಬಾಬು, ಅದಕ್ಕೆ ಕನ್ನಡದಲ್ಲಿ “ಚೌಪದಿ’ ಎಂದು ಹೆಸರಿಡುವ ಯೋಚನೆ ಮಾಡಿದ್ದಾರೆ. ತೆಲುಗಿನಲ್ಲಿ “ಪದ್ಯಂ’ ಎಂಬ ಹೆಸರಿಟ್ಟು ನಿರ್ದೇಶಿಸಲಿದ್ದಾರೆ.

ಇದೊಂದು ಮಹಿಳಾ ಪ್ರಧಾನವಾಗಿರುವ ಕಥೆ. ಅದಕ್ಕೆ “ಟಗರು’ ಖ್ಯಾತಿಯ ಕಾನ್‌ಸ್ಟೆಬಲ್‌ ಸರೋಜ ಪಾತ್ರ ನಿರ್ವಹಿಸಿದ್ದ ತ್ರಿವೇಣಿ ರಾವ್‌ ಅವರನ್ನು ಸಂಪರ್ಕಿಸಿದ್ದಾರೆ. ಒಂದು ಸುತ್ತು ಮಾತುಕತೆಯೂ ನಡೆದಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಅಕ್ಟೋಬರ್‌ನಲ್ಲಿ ಚಿತ್ರ ಶುರುವಾಗಲಿದೆ. ವಿಜಯವಾಡ ಮೂಲದ ನಿರ್ಮಾಪಕರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು, ಜನವರಿ ನಂತರ ಶಿವರಾಜಕುಮಾರ್‌ ಅಭಿನಯದ “ಸಾರಂಗ’ ಚಿತ್ರ ಶುರುವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next