ಹೊಸದಿಲ್ಲಿ: ದಿಲ್ಲಿಯಲ್ಲಿ ಅಧಿಕಾರಿಗಳು ಹಾಗೂ ಆಮ್ ಆದ್ಮಿ ಪಕ್ಷದ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಸರಕಾರದ ಮುಖ್ಯ ಕಾರ್ಯದರ್ಶಿ ಅನ್Ï ಪ್ರಕಾಶ್ ಮೇಲೆ ಆಪ್ ಶಾಸಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕುರಿತು ಸಿಎಂ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಾರ್ವಜನಿಕವಾಗಿ ಕ್ಷಮೆ ಕೋರದ ಹೊರತು ನಾವು ಅವರೊಂದಿಗೆ ಮೌಖೀಕವಾಗಿ ಸಂಭಾಷಣೆ ನಡೆಸುವುದಿಲ್ಲ. ಅಲ್ಲಿಯವರೆಗೆ ಎಲ್ಲ ಸಂವಹನವೂ ಲಿಖೀತ ರೂಪದಲ್ಲಷ್ಟೇ ನಡೆಯಲಿದೆ ಎಂದು ಐಎಎಸ್ ಹಾಗೂ ಇತರೆ ಅಧಿಕಾರಿಗಳು ಖಡಕ್ಕಾಗಿ ತಿಳಿಸಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ದಿಲ್ಲಿ ಸರಕಾರಿ ನೌಕರರ ಜಂಟಿ ವೇದಿಕೆ ಈ ನಿರ್ಣಯ ಕೈಗೊಂಡಿದೆ.
ಅಷ್ಟೇ ಅಲ್ಲ, ಸಚಿವ ರಾಜೇಂದರ್ ಪಾಲ್ ಗೌತಮ್ ಅವರ ಸಂಧಾನ ಮಾತುಕತೆಗೂ ಅಧಿಕಾರಿಗಳು ಒಪ್ಪಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೌತಮ್, ಅಧಿಕಾರಿಗಳ ಈ ವರ್ತನೆ ಸರಿಯಲ್ಲ. ಪ್ರಸ್ತುತ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಕ್ರಮಕ್ಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕು ಎಂದಿದ್ದಾರೆ.
ಇನ್ನೊಂದೆಡೆ, ತಮ್ಮ ಪಕ್ಷದ ನಾಯಕರಾದ ಇಮ್ರಾನ್ ಹುಸೇನ್ ಮತ್ತು ಆಶಿಷ್ ಖೇತಾನ್ ಅವರ ಮೇಲೂ ಹಲ್ಲೆ ನಡೆದಿತ್ತು ಎಂದು ಆರೋಪಿಸಿರುವ ಆಪ್, ಸೋಮವಾರ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರನ್ನು ಭೇಟಿಯಾಗಿ, ದೂರು ಸಲ್ಲಿಸಿದೆ. ಜತೆಗೆ, ಹಲ್ಲೆ ನಡೆದ ವಿಡಿಯೋ ಸಾಕ್ಷ್ಯಗಳನ್ನೂ ಒದಗಿಸಿದೆ.
ತಿರುಚಿದ ದೃಶ್ಯ: ಏತನ್ಮಧ್ಯೆ, ಪ್ರಕರಣ ಸಂಬಂಧ ಕೇಜ್ರಿವಾಲ್ ನಿವಾಸದಲ್ಲಿ ವಶಪಡಿಸಿಕೊಳ್ಳಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ತಿರುಚಲಾಗಿದೆ ಎಂದು ದಿಲ್ಲಿ ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿ ದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಟಿವಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ, ಇನ್ನು ಮುಂದೆ ನಡೆಯುವ ಎಲ್ಲ
ಅಧಿಕೃತ ಸಭೆಗಳನ್ನೂ ನೇರ ಪ್ರಸಾರ ಮಾಡುವ ಬಗ್ಗೆ ಆಪ್ ಸರಕಾರ ಚಿಂತನೆ ನಡೆಸಿದೆ.
ಸಭೆಯ ವಿಡಿಯೋಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಕುರಿತು ಚರ್ಚಿಸಲಾಗಿದೆ.