ಶಹಾಬಾದ: ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಕೊಟ್ಟ ಮೀಸಲಾತಿಗೆ ಮಾತ್ರ ದಲಿತರಾಗುವುದು ಬೇಡ. ಅಂಬೇಡ್ಕರ್ ಕರುಣಿಸಿದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ಡಾ| ಬಿ.ಆರ್. ಅಂಬೇಡ್ಕರ್ ಅವರ 127ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಂವಿಧಾನ, ಶಿಕ್ಷಣ, ಮತದಾನ, ನಾಯಕತ್ವ ಪರ ನಡೆಸಿದ ಹೋರಾಟ, ಮೂಢನಂಬಿಕೆ ವಿರುದ್ಧ ಅರಿವು ಜಾಗೃತಿ ಮೂಡಿಸಿದ ಬಗೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಚಾತುರ್ವರ್ಣ ವಿರುದ್ಧ ಹೋರಾಟ ಮಾಡಲು ಅರಮನೆ ತೊರೆದ ಬುದ್ಧ, ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ಸಿಡಿದೆದ್ದು ಮನೆ ತೊರೆದು ಬಂದ ಬಸವಣ್ಣ, ದಲಿತರ ಹಕ್ಕು ಪ್ರತಿಪಾದಿಸಲು ಹುಟ್ಟಿ ಬಂದ ಅಂಬೇಡ್ಕರ್ ದೇಶದ ನಿಜವಾದ ಪ್ರವಾದಿಗಳು ಎಂದರು. ಅಂಬೇಡ್ಕರ್ ಅವರ ಬದುಕು, ಬರಹ ಹಾಗೂ ಭಾಷಣಗಳನ್ನು ಓದಬೇಕು.
ಅದರಂತೆ ನಡೆಯಲು ಪ್ರಯತ್ನಿಸಬೇಕು ಎಂದು ಹೇಳಿದರು. ಮುಖ್ಯ ಭಾಷಣಕಾರರಾಗಿದ್ದ ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಧಕ್ಕೆ ಬಂದಿರುವ ಈ ದಿನಮಾನಗಳಲ್ಲಿ ಎಲ್ಲ ಪ್ರಜಾಪ್ರಭುತ್ವವಾದಿಗಳು ಒಂದಾಗಿ “ನಮ್ಮ ನಡೆ ಅಂಬೇಡ್ಕರ್ ಕಡೆ’ ಎನ್ನುವ ಘೋಷ ವಾಕ್ಯದೊಂದಿಗೆ ಮುನ್ನಡೆದು ಕೋಮುವಾದ ಮತ್ತು ಉಗ್ರವಾದವನ್ನು ಹಿಮ್ಮೆಟ್ಟಿಸಬೇಕಿದೆ ಎಂದು ಕರೆ ನೀಡಿದರು.
ಹಿರಿಯ ದಲಿತ ಮುಖಂಡ ವಿಠuಲ್ ದೊಡ್ಡಮನಿ ಉದ್ಘಾಟಿಸಿದರು. ಅಣದೂರು ವರಜ್ಯೋತಿ ಬಂತೇಜಿ ಬುದ್ಧ ವಂದನೆ ನೆರವೇರಿಸಿದರು. ನಗರಸಭೆ ಸದಸ್ಯ ಗಿರೀಶ ಕಂಬಾನೂರ ಅಧ್ಯಕ್ಷತೆ ವಹಿಸಿದ್ದರು. ಜೇವರ್ಗಿ ಬಸವ ಕೇಂದ್ರದ ಶರಣಬಸವ ಕಲ್ಲಾ, ಸೂರ್ಯಕಾಂತ ನಿಂಬಾಳಕರ್, ನಗರಸಭೆ ಧ್ಯಕ್ಷೆ ಗೀತಾ ಸಾಹೇಬಗೌಡ ಬೋಗುಂಡಿ, ಉಪಾಧ್ಯಕ್ಷೆ ಲಕ್ಷೀಬಾಯಿ ಕುಸಾಳೆ, ಡಾ| ರಶೀದ ಮರ್ಚಂಟ್, ಮರಿಯಪ್ಪ ಹಳ್ಳಿ, ಹಾಷಮ್ ಖಾನ,
ಸುರೇಶ ಮೆಂಗನ್, ನಿಂಗಣ್ಣ ಹುಳಗೋಳಕರ್, ಸತೀಶ ಕಂಬಾನೂರ, ಶರಣು ಪಗಲಾಪುರ, ಕಾಶಿನಾಥ ಜೋಗಿ ಹಾಜರಿದ್ದರು. ಪ್ರವೀಣ ರಾಜನ್ ನಿರೂಪಿಸಿದರು. ಲೋಹಿತ್ ಕಟ್ಟಿ ಸ್ವಾಗತಿಸಿದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸ್ನೇಹಿಲ್ ಜಾಹಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಯೋಗಿ ಕಟ್ಟಿ ವಂದಿಸಿದರು. ಸುಧಾರಾಣಿ ಸಜ್ಜನ್ ಪ್ರಾರ್ಥಿಸಿದರು. ಶಂಕರ ಜಾನಾ, ಗುರುನಾಥ ಪೋತನಕರ್ ಹಾಗೂ ಸಂಗಡಿಗರು ಕ್ರಾಂತಿಗೀತೆಗಳನ್ನು ಹಾಡಿದರು.