Advertisement

ಭಯ ಬೇಡ, ಎಚ್ಚರ ಇರಲಿ

01:03 AM Mar 21, 2020 | Lakshmi GovindaRaj |

ವಿಧಾನ ಪರಿಷತ್‌: ಕೊರೊನಾದಿಂದ ದಿಢೀರ್‌ ಸಾವು ಸಂಭವಿಸುವುದಿಲ್ಲ. ಹೀಗಾಗಿ, ಆತಂಕ ಪಡುವುದಕ್ಕಿಂತ ಅಗತ್ಯ ಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಕೊರೊನಾ ನಿಯಂತ್ರಣಕ್ಕೆ ಸರ್ಕಾರದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.

Advertisement

ಕೊರೊನಾದ ಕುರಿತು ಮಾಹಿತಿ ನೀಡಿದ ಸಚಿವರು, ಸದ್ಯ ರಾಜ್ಯದಲ್ಲಿ ಕೊರೊನಾ 2ನೇ ಹಂತದಲ್ಲಿದೆ. ಇದು 3 ಮತ್ತು 4ನೇ ಹಂತಕ್ಕೆ ತಲುಪಿದರೆ, ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟ. 2ನೇ ಹಂತದಲ್ಲಿಯೇ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಸ್ಪಂದಿಸಬೇಕು ಎಂದರು.

ಗಡಿಯಲ್ಲಿ ಥರ್ಮಲ್‌ ಪರೀಕ್ಷೆ: ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶಿಸುವ ಎಲ್ಲ ಗಡಿ ಭಾಗಗಳಲ್ಲೂ ಕಡ್ಡಾಯವಾಗಿ ಥರ್ಮಲ್‌ ಪರೀಕ್ಷೆಗೆ ಸೂಚನೆ ನೀಡಿದ್ದೇವೆ. ಮಂಗಳೂರಿಗೆ ಕೇರಳದಿಂದ ಬರುವವರ ಸಂಖ್ಯೆ ಹೆಚ್ಚಿದೆ. 27 ಪ್ರಮುಖ ಮಾರ್ಗಗಳನ್ನು ಗುರುತಿಸಿದ್ದು, ಆ ಎಲ್ಲ ಮಾರ್ಗಗಳಲ್ಲೂ ಥರ್ಮಲ್‌ ತಪಾಸಣೆ ನಡೆಸಲು ಮಂಗಳೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಗೋವಾ, ಮಹಾರಾಷ್ಟ್ರ ಗಡಿಗಳಲ್ಲೂ ತಪಾಸಣೆ ನಡೆಯಲಿದೆ ಎಂದರು.

ಎನ್‌ಡಿಆರ್‌ಎಫ್ನಿಂದ 184 ಕೋಟಿ: ಕೊರೊನಾ ದಿಂದ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿರು ವುದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ(ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿಯನ್ನು (ಎಸ್‌ಡಿಆರ್‌ಎಫ್)ಬಳಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ 184 ಕೋಟಿ ರೂ. ನಮ್ಮ ಬಳಿ ಲಭ್ಯವಿದೆ. ಅಲ್ಲದೆ, ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕನಿಷ್ಠ 5 ಕೋಟಿ ರೂ. ಇದಕ್ಕಾಗಿ ಮೀಸಲಿಟ್ಟಿದ್ದೇವೆ ಎಂದರು.

ಕೊರೊನಾ ಕಸಿವಿಸಿ
-ಕೊರೊನಾ ಮುಂಜಾಗ್ರತಾ ಕ್ರಮವಾಗಿ ಮಾ.17ರಿಂದ 22ರವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಚಿತ್ರದುರ್ಗ ಜಿಲ್ಲಾ ಧಿಕಾರಿ ಆರ್‌. ವಿನೋತ್‌ ಪ್ರಿಯಾ ಬುಧವಾರ ಆದೇಶ ಹೊರಡಿಸಿದ್ದಾರೆ.

Advertisement

-ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಮುಂದಾಗಿರುವ ರೈಲ್ವೆ ಇಲಾಖೆ ರಾಯಚೂರು ಹಾಗೂ ಉಡುಪಿ ನಗರದ ಪ್ಲಾಟ್‌ಫಾರ್ಮ್ ಟಿಕೆಟ್‌ ದರವನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಪ್ರತಿ ವ್ಯಕ್ತಿಗೆ 10 ರೂ. ಇದ್ದ ದರವನ್ನು 50 ರೂ.ಗೆ ಹೆಚ್ಚಿಸಲಾಗಿದೆ. ಇದು ತಾತ್ಕಾಲಿಕ. ಪರಿಸ್ಥಿತಿ ತಿಳಿಯಾದ ಕೂಡಲೇ ಮೊದಲಿನ ದರ ನಿಗದಿ ಮಾಡಲಾಗುವುದು ಎಂದು ರೈಲ್ವೆ ನಿಲ್ದಾಣದ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.

-ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ವತಿಯಿಂದ ಮಾ.27ರ ಬೆಳಗ್ಗೆ ಧನ್ವಂತರಿ ಯಾಗವನ್ನು ಆಯೋಜಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆಯನ್ನು ಸಾಂಪ್ರದಾಯಿಕವಾಗಿ ನಡೆಸಲು ಮ.ಮ.ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

-ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡಿನ ಯುವಕನಲ್ಲಿ ಕೊರೊನಾ ವೈರಸ್‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನ ಸಹ ಪ್ರಯಾಣಿಕರನ್ನು ಪತ್ತೆ ಮಾಡಿ ಮನೆಯಲ್ಲೇ ನಿಗಾದಲ್ಲಿಡಲು ಮತ್ತು ಅವರ ಮನೆಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ದ.ಕ.ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಸೂಚಿಸಿದೆ.

-ಮುನ್ನೆಚ್ಚರಿಕೆ ಕ್ರಮವಾಗಿ ದ.ಕ.ಜಿಲ್ಲೆಯಾದ್ಯಂತ ಯಕ್ಷಗಾನ ಕಾರ್ಯಕ್ರಮಗಳನ್ನು ಮುಂದೂಡಬೇಕೆಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next