ಬನಹಟ್ಟಿ: ವಿದ್ಯಾರ್ಥಿಗಳು ದೃಢ ಮನಸ್ಸಿನಿಂದ ಅಭ್ಯಾಸದಲ್ಲಿ ತೊಡಗಬೇಕು. ಶಾಲಾ ಅವಧಿಯಲ್ಲಿ ಕೇವಲ ಓದು, ಬರಹಕ್ಕೆ ಮಾತ್ರ ಮಹತ್ವ ಕೊಡದೆ ವ್ಯಾಯಾಮಗಳನ್ನು ಮಾಡುವುದರ ಜೊತೆಗೆ ಉತ್ತಮ ದೇಹವನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಸೋಮವಾರ ತಾಲ್ಲೂಕಿನ ಯಲ್ಲಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ನಿಮಿತ್ತವಾಗಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕೋವಿಡ್ ಬಗ್ಗೆ ಯಾವುದೆ ಆತಂಕ ಬೇಡ. ಆತ್ಮ ಸ್ಥೈರ್ಯ ಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ಯಾವುದೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಕೇವಲ ೯ ಮತ್ತು ೧೦ ನೇ ತರಗತಿಗಳನ್ನು ಆರಂಭಿಸಿದೆ. ಆದ್ದರಿಂದ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗುಂಪು ಗುಂಪಾಗಿ ನಿಂತುಕೊಳ್ಳಬಾರದು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಅವರಿಗೆ ಮಕ್ಕಳು ಸಹೋದರತೆಯ ಸಾಕ್ಷಿಯಾದ ರಾಖಿ ಕಟ್ಟಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸದಾಶಿವ ಸಂತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾಂತೇಶ ಮಾಳಗೌಡ, ಮಹಾದೇವ ಮೋಪಗಾರ, ಅಶೋಕ ಕಿತ್ತೂರ, ಸಿದ್ದು ತೇಲಿ, ಬಿ.ಡಿ.ಝಳಕಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರವೀಂದ್ರ ಸಂಪಗಾವಿ, ಮುಖ್ಯ ಶಿಕ್ಷಕ ಎಸ್.ಆರ್.ಮರೆಗುದ್ದಿ, ಶ್ರೀಶೈಲ ಕಾಂಬಳೆ, ಎಸ್.ಎಂ.ನಾವಿ, ಪಮ್ಮನ್ನ ಬಳಿಗಾರ ಸೇರಿದಂತೆ ಅನೇಕರು ಇದ್ದರು.