Advertisement

ಸುಳ್ಳು ಸುದ್ದಿಗೆ ಭಯ ಪಡಬೇಡಿ: ಎಸ್ಪಿ ಮಾರ್ಟಿನ್‌

03:23 PM May 19, 2018 | Team Udayavani |

ಯಾದಗಿರಿ: ಜಿಲ್ಲೆಯಾದ್ಯಂತ ಮಕ್ಕಳನ್ನು ಕಳ್ಳತನ ಮಾಡುವ ತಂಡ ಬಂದಿದೆ ಎಂಬ ಸುದ್ದಿ ಹರಡಿ ಸಾರ್ವಜನಿಕರು ಭಯ ಪಡುವುದು ಕಂಡು ಬಂದಿದ್ದು, ಜಿಲ್ಲೆಯಲ್ಲಿ ಯಾವುದೇ ಮಕ್ಕಳನ್ನು ಕಳ್ಳತನ ಮಾಡುವ ತಂಡ ಎಲ್ಲಿಯೂ ಕಂಡು
ಬಂದಿಲ್ಲ ಎಂದು ಎಸ್ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದ್ದಾರೆ.

Advertisement

ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು,ಅಲ್ಲಿಯೂ ಸಹ
ಇಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದ್ದರಿಂದ ಇದು ಸುಳ್ಳು ಸುದ್ದಿ ಹರಡಿಸಲಾಗುತ್ತಿದ್ದು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 

ಜಿಲ್ಲೆಯಾದ್ಯಂತ ಪೊಲೀಸ್‌ ಇಲಾಖೆ ವತಿಯಿಂದ ಎಲ್ಲಾ ರೀತಿಯ ಸೂಕ್ತ ಕ್ರಮ ಹಾಗೂ ಠಾಣಾ ವ್ಯಾಪ್ತಿಯಲ್ಲಿ ಗಸ್ತನ್ನು ಹಾಗೂ ಚೆಕ್‌ ಪೋಸ್ಟ್‌ ಕರ್ತವ್ಯವನ್ನು ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರು ಸಾಮಾಜಿಕ ಜಾಲ ತಾಣದಲ್ಲಿ ಮಕ್ಕಳ ಅಪಹರಣದ ಬಗ್ಗೆ ಬರುವ ಮಾಹಿತಿಯನ್ನು ಮತ್ತು ಇಂತಹ ಯಾವುದೇ ಗಾಳಿ ಸುದ್ದಿಗಳಿಗೆ ಆಸ್ಪದ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಯಾವುದೇ ವ್ಯಕ್ತಿ ಮಕ್ಕಳ ಅಪಹರಣದ ಬಗ್ಗೆ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣವಾದ ವ್ಯಾಟ್ಸ್‌ಪ್‌ ಮತ್ತು ಫೇಸ್‌ಬುಕ್‌ಗಳಲ್ಲಿ ಹಬ್ಬಿಸಿದ್ದಲ್ಲಿ ಅಂತವರ ವಿರುದ್ಧ ಹಾಗೂ ಅಪರಚಿತರ ಮೇಲೆ ಹಲ್ಲೆ ನಡೆಸಿ ಕಾನೂನು ಕೈಗೆ ತೆಗೆದುಕೊಳ್ಳುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. 

ಸಾರ್ವಜನಿಕರಲ್ಲಿ ಒಂದು ವೇಳೆ ಇಂತಹ ಘಟನೆ ಅಥವಾ ಯಾವುದೇ ಮಾಹಿತಿ ನಿಮ್ಮ ಗಮನಕ್ಕೆ ಬಂದಲ್ಲಿ ತಕ್ಷಣ ಸಂಬಂಧಪಟ್ಟ ಪೊಲೀಸ್‌ ಠಾಣೆಗಳಿಗೆ ಅಥವಾ ಜಿಲ್ಲಾ ಪೊಲೀಸ್‌ ನಿಯಂತ್ರಣ ಕೋಣೆ ದೂರವಾಣಿ ಸಂಖ್ಯೆ 08472-253736, ಮೊ.ನಂ. 9480803600ಗೆ ಸಂಪರ್ಕಿಸಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಜಾಗೃತಿ: ಜಿಲ್ಲೆಯಲ್ಲಿ ಮಕ್ಕಳ ಕಳ್ಳತನ ಮಾಡುವ ತಂಡ ಬಂದಿದೆ ಎಂಬ ಸುದ್ದಿ ಹರಡಿ ಸಾರ್ವಜನಿಕರು ಭಯಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆಟೋ ಮೂಲಕ ಜಾಗೃತಿ ಮೂಡಿಸಲಾಯಿತು. ಜಿಲ್ಲೆಯಲ್ಲಿ ಯಾವುದೇ ಮಕ್ಕಳ ಕಳ್ಳತನ ಮಾಡುವ ತಂಡ ಬಂದಿಲ್ಲ. ಗಾಳಿ ಸುದ್ದಿಗೆ ಜನರು ಕಿವಿಗೂಡಬಾರದು. ಇನ್ನೂ ಕೂಲಿ ಕೆಲಸಕ್ಕಾಗಿ ಬಂದ ಅಪರಿಚಿತ ವ್ಯಕ್ತಿಗಳನ್ನು ಹಿಡಿದು ಅವರ ಮೇಲೆ ಹಲ್ಲೆ ನಡೆಸುವ ಮೂಲಕ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಇಂತಹ ಘಟನೆ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೊಲೀಸ್‌ ಇಲಾಖೆ ಎಚ್ಚರಿಸಿದೆ.

ನಗರದ ಹಳೆ ಬಸ್‌ ನಿಲ್ದಾಣ, ಸುಭಾಷ ವೃತ್ತ, ಶಾಸ್ತ್ರಿ ವೃತ್ತ, ಹೊಸ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಗಾಂಧಿ ವೃತ್ತ ಸೇರಿದಂತೆ ಯರಗೋಳ, ರಾಮಸಮುದ್ರ, ವಡಗೇರಾ ಇನ್ನಿತರ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ಮೌನೇಶ ಪಾಟೀಲ, ಪಿಐ ಜಯಶ್ರೀ, ಗ್ರಾಮೀಣ ಠಾಣೆ ಪಿಐ ಅಲೀಂ, ವಡಗೇರಾ ಪಿಎಸ್‌ಐ ಮಹಾದೇವ, ರವಿ ರಾಠೊಡ ಸೇರಿದಂತೆ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next