Advertisement

ಭಯ ಬೇಡ, ಜಾಗೃತಿ ಇರಲಿ: ಸ್ವಯಂ ಚಿಕಿತ್ಸೆಗಿಂತ ವೈದ್ಯರ ಸಂಪರ್ಕಿಸಿ

03:42 PM Jun 05, 2017 | Team Udayavani |

ಪುತ್ತೂರು: ಮಳೆಗಾಲ ಪ್ರಾರಂಭಗೊಂಡಿದೆ. ಅದರೊಂದಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುವುದು ಸಹಜ. ಈ ಬಾರಿಯೂ ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ವಿವಿಧೆಡೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಜನರು ಎಚ್ಚರ ವಹಿಸುವುದು ಅತ್ಯಗತ್ಯ.

Advertisement

ಪ್ರತಿ ವರ್ಷ ಮಳೆಗಾಲದಲ್ಲಿ ಹೊಸ-ಹೊಸ ಸಾಂಕ್ರಾಮಿಕ ರೋಗಗಳು ಜಿಲ್ಲೆಯ ಜನರನ್ನು ಹೈರಣಾಗಿಸುತ್ತಿವೆ. ಅನೇಕರು ರೋಗ ಬಾಧೆ ಯಿಂದ ವರ್ಷಾನುಗಟ್ಟಲೇ ತತ್ತರಿಸಿದರೆ, ಕೆಲವರು ಪ್ರಾಣವನ್ನು ತೆತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಡೆಂಗ್ಯೂ, ಚಿಕುನ್‌ ಗುನ್ಯಾ
ಐದಾರು ವರ್ಷಗಳ ಕಾಲ ಮಳೆಗಾಲದಲ್ಲಿ  ಜನಜೀವನವನ್ನೇ ತತ್ತರಿಸಿದ ಸಾಂಕ್ರಾಮಿಕ ರೋಗವಿದು. ಸೊಳ್ಳೆಯಿಂದ ಹಬ್ಬುವ ಈ ಎರಡು ಕಾಯಿಲೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತನ್ನ ಪರಿಮಿತಿಯೊಳಗೆ ಪ್ರಯತ್ನಿಸಿದ್ದರೂ ನಿರ್ದಿಷ್ಟ ಮದ್ದಿಲ್ಲದೆ, ರೋಗ ಹಬ್ಬುವ ಸೊಳ್ಳೆ ನಿಯಂತ್ರಣ ಸಾಧ್ಯವಾಗದ ಕಾರಣ, ಜ್ವರ ಬಾಧೆಯಿಂದ ಜನರಿಗೆ ಮುಕ್ತಿ ಸಿಗಲಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ, ಚಿಕುನ್‌ ಗುನ್ಯಾ ರೋಗಕ್ಕೆ ಸಂಬಂಧಿಸಿ 796 ಪ್ರಕರಣ ದಾಖಲಾಗಿದೆ.

ಕಳೆದ ವರ್ಷದ ಅಂಕಿ ಅಂಶ
ಜಿಲ್ಲಾ  ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ 2016 ರಲ್ಲಿ ಮಲೇರಿಯಾಕ್ಕೆ ಸಂಬಂಧಿಸಿ 6,409 ಪ್ರಕರಣ, 486 ಡೆಂಗ್ಯೂ ಪ್ರಕರಣ, ಚಿಕುನ್‌ಗುನ್ಯಾ-1, ಜೆಇ -3 ಪ್ರಕರಣ ಪತ್ತೆಯಾಗಿತ್ತು. ತಾಲೂಕುವಾರು ಅಂಕಿ ಅಂಶ ಆಧಾರದಲ್ಲಿ ಜ್ವರದಲ್ಲಿ ದಾಖಲಾದವರ ವಿವರ ಹೀಗಿದೆ.

ಮಂಗಳೂರು ನಗರ: ಮಲೇರಿಯಾ- 5,828, ಡೆಂಗ್ಯೂ- 64,ಮಂಗಳೂರು ಗ್ರಾಮಾಂತರ: ಮಲೇರಿಯಾ- 381, ಡೆಂಗ್ಯೂ – 56, ಪುತ್ತೂರು: ಮಲೇರಿಯಾ – 68, ಡೆಂಗ್ಯೂ- 116, ಬೆಳ್ತಂಗಡಿ: ಮಲೇರಿಯಾ – 21, ಡೆಂಗ್ಯೂ-77, ಸುಳ್ಯ: ಮಲೇರಿಯಾ -12, ಡೆಂಗ್ಯೂ-70, ಬಂಟ್ವಾಳ: ಮಲೇರಿಯಾ- 99, ಡೆಂಗ್ಯೂ-105, ಚಿಕನ್‌ ಗುನ್ಯಾ-1 ಪ್ರಕರಣ ಪತ್ತೆಯಾಗಿತ್ತು. 

Advertisement

ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿ 3 ಮಂದಿ ಮೃತಪಟ್ಟಿದ್ದಾರೆ ಅನ್ನುವುದು ಆರೋಗ್ಯ ಇಲಾಖೆಯ ಮಾಹಿತಿ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಹೊರ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆದವರೂ ಸಂಖ್ಯೆ ಇದರಲ್ಲಿ ಸೇರದ ಕಾರಣ ಒಟ್ಟು ಸಂಖ್ಯೆ ಇನ್ನು ಹೆಚ್ಚಾಗಲಿದೆ.

2017ನೇ ವರ್ಷದಲ್ಲಿ ಜನವರಿಯಿಂದ ಎಪ್ರಿಲ್‌ 30 ತನಕ ದಾಖಲಾದ ವಿವರ ಹೀಗಿದೆ. ಮಲೇರಿಯಾ-787, ಡೆಂಗ್ಯೂ-8 ಮತ್ತು ಚಿಕುನ್‌ ಗುನ್ಯಾ-1 ಪ್ರಕರಣ ದಾಖಲಾಗಿದೆ. ತಾಲೂಕುವಾರು ಅಂಕಿ-ಅಂಶದಲ್ಲಿ ಮಂಗಳೂರು ನಗರ- ಮಲೇರಿಯಾ-682, ಡೆಂಗ್ಯೂ- 1, ಮಂಗಳೂರು ಗ್ರಾಮಾಂತರ : ಮಲೇರಿಯಾ-51, ಡೆಂಗ್ಯೂ-4, ಪುತ್ತೂರು : ಮಲೇರಿಯಾ-30, ಡೆಂಗ್ಯೂ-2, ಬೆಳ್ತಂಗಡಿ : ಮಲೇರಿಯಾ-12, ಡೆಂಗ್ಯೂ-0, ಸುಳ್ಯ: ಮಲೇರಿಯಾ -0, ಡೆಂಗ್ಯೂ-3, ಬಂಟ್ವಾಳ: ಮಲೇರಿಯಾ-12, ಡೆಂಗ್ಯೂ-7 ಪ್ರಕರಣ ಪತ್ತೆಯಾಗಿದೆ.

ಹೆಚ್ಚಿದ ಸೊಳ್ಳೆ ಕಾಟ
ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆ ಕಾಟವೂ ಆರಂಭಗೊಂಡಿದೆ. ಮಳೆ ನೀರಿನ ಶೇಖರಣೆಯ ಸ್ಥಳ, ಅಡಿಕೆ, ರಬ್ಬರ್‌ ಸೇರಿದಂತೆ ಕೃಷಿ ತೋಟಗಳಲ್ಲಿ ಸೊಳ್ಳೆ ವಿಪರೀತ ಪ್ರಮಾಣದಲ್ಲಿ  ಕಾಣಿಸಿಕೊಂಡಿದೆ. 

ಮನೆ ಪರಿಸರದಲ್ಲಿ ರಾತ್ರಿ ವೇಳೆ ಸೊಳ್ಳೆ ಕಾಟ ಹೆಚ್ಚಾಗಿದೆ. ದೀರ್ಘ‌ ಬಿಸಿಲು ಅಥವಾ ನಿರಂತರ ಮಳೆ ಬಂದು ಹೊಂಡ ಗಳಿಂದ ನೀರು ಹರಿದು ಹೋದಲ್ಲಿ ಸೊಳ್ಳೆ ಉತ್ಪಾದನೆಗೆ ಕಡಿವಾಣ ಬೀಳುತ್ತದೆ. ಆಗ ಸೊಳ್ಳೆ ಕಾಟ ನಿಯಂತ್ರಣಕ್ಕೆ ಬರಲಿದೆ ಅನ್ನುತ್ತದೆ ಆರೋಗ್ಯ ಇಲಾಖೆ.

ಭಯ ಬೇಡ, ಜಾಗೃತಿ ಸಾಕು
ರೋಗ ಬಂದ ಅನಂತರ ಯೋಚಿಸುವ ಬದಲು, ಬಾರದಂತೆ ತಡೆಗಟ್ಟಲು ಇರುವ ಮಾರ್ಗಗಳ ಬಗ್ಗೆ ಯೋಚಿಸುವುದು ಒಳಿತು ಅನ್ನುವುದು ಆರೋಗ್ಯ ಇಲಾಖೆಯ ಸಂದೇಶ. ಮನೆ ಪರಿಸರ ಸುತ್ತ ಸ್ವತ್ಛತೆ, ದೀರ್ಘ‌ ಕಾಲ ನೀರು ಶೇಖರಣೆ, ಹೊಂಡಗಳಲ್ಲಿ ನೀರು ತುಂಬಿರುವುದು ಇಂತಹ ರೋಗ ಹರಡಬಲ್ಲ ತಾಣಗಳ ನಿಯಂತ್ರಣದ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು.

ಕೃಷಿ ತೋಟಗಳಲ್ಲಿ, ರಾತ್ರಿ ಹೊತ್ತು ಸೊಳ್ಳೆ ಕಾಟದಿಂದ ಪಾರಾಗುವ ನಿಟ್ಟಿನಲ್ಲಿ ಸೊಳ್ಳೆ ಪರದೆಯಂತಹ ರಕ್ಷಣಾ ಕ್ರಮ ಬಳಸಲು ಗಮನ ಹರಿಸಬೇಕಿದೆ.

ಸ್ವಯಂ ಚಿಕಿತ್ಸೆ ಬೇಡ
ಜ್ವರ ಬಂದ ಸಂದರ್ಭ ಸ್ವಯಂ ಚಿಕಿತ್ಸೆಗೆ ಒಳಗಾಗುವುದರಿಂದ ರೋಗ ಉಲ್ಬಣಗೊಂಡು ಪ್ರಾಣಕ್ಕೆ ಎರವಾದ ಉದಾಹರಣೆಗಳಿವೆ. ಹಾಗಾಗಿ ರೋಗ ಬಂದ ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಂಡು ಔಷಧ ಪಡೆದುಕೊಳ್ಳಬೇಕು. ಅಗತ್ಯ ಬಿದ್ದರೆ ರಕ್ತ ತಪಾಸಣೆ ಮಾಡಿಸಬೇಕು. ಹೊರತು ಯಾವುದೇ ಕಾರಣಕ್ಕೂ ಸ್ವಯಂ ಚಿಕಿತ್ಸೆಗೆ ಒಳಗಾಗಬಾರದು.

ಆರೋಗ್ಯ ಇಲಾಖೆಯಿಂದ ಜಾಗೃತಿ
ಎರಡು ವರ್ಷಗಳ ಪರಿಸ್ಥಿತಿ ಅರಿತಿರುವ ಆರೋಗ್ಯ ಇಲಾಖೆ ಈಗಾಗಲೇ ಸಾಂಕ್ರಾಮಿಕ ರೋಗ ತಡೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಲ್ಲಲ್ಲಿ ಜಾಥಾ, ಆಶಾ ಕಾರ್ಯ ಕರ್ತರ ಮುಖೇನ ಮನೆ-ಮನೆ ಭೇಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಮುನ್ನೆಚ್ಚೆರಿಕೆಯ ಕರಪತ್ರ ಇತ್ಯಾದಿ ಕ್ರಮಕ್ಕೆ ಮುಂದಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಸ್ಥಳೀಯಾಡಳಿತದ ಸಹಕಾರ ಪಡೆದು ಫಾಗಿಂಗ್‌ ಮೊದಲಾದ ನಿಯಂತ್ರಣ ಕ್ರಮಕ್ಕೆ ಯೋಜನೆ ರೂಪಿಸಿದೆ.

ಜಾಗೃತಿ ಕಾರ್ಯಕ್ರಮ
ಈಗಾಗಲೇ ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚೆರಿಕೆ ಕ್ರಮಗಳ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಮನೆ-ಮನೆ ಭೇಟಿ ನೀಡಿ ರೋಗ ಬಾರದಂತೆ ವಹಿಸಬೇಕಾದ ಮುನ್ನೆಚ್ಚೆರಿಕೆ ಕ್ರಮದ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಾರೆ. ರೋಗ ನಿಯಂತ್ರಣಕ್ಕೆ ಸಂಬಂಧಿಸಿ ಆರೋಗ್ಯ ಇಲಾಖೆ ಸಿದ್ಧವಾಗಿದೆ.

– ಡಾ | ರಾಮಕೃಷ್ಣ ರಾವ್‌,
ಡಿಎಚ್‌ಒ, ದ.ಕ. ಜಿಲ್ಲೆ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next