ಹೆತ್ತವರು ತುಂಬಾ ಪ್ರೀತಿಯಿಂದ ಸಾಕುವ ಮಕ್ಕಳು ಕೆಲವೊಮ್ಮೆ ಅವರಿಗೆ ಮುಳುವಾಗಿ ಬಿಡುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಸ್ವಾರ್ಥ ಮನೋಭಾವವೇ ಇದಕ್ಕೆ ಕಾರಣ. ಹೆತ್ತವರು ಮಕ್ಕಳ ಮೇಲಿರುವ ಕಾಳಜಿಯಿಂದ ಬೆಳೆಸಿ ಮುಂದೆ ನಮಗೆ ವಯಸ್ಸಾದಾಗ ನೋಡಿಕೊಳ್ಳುತ್ತಾರೆ ಎಂಬ ಸಹಜ ಆಕಾಂಕ್ಷೆ ಇರುತ್ತದೆ. ಆದರೆ ಮಕ್ಕಳು ಸ್ವಾರ್ಥಿಗಳಾಗಿ ಹೆತ್ತವರನ್ನು ಬೀದಿಗೆ ತಳ್ಳುವ ಅದೆಷ್ಟೋ ಸಂಗತಿಗಳನ್ನು ನೋಡಿದ್ದೇವೆ, ಕೇಳಿದ್ದೇವೆ.
ತಂದೆ ತಾಯಿಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಅದೆಷ್ಟೋ ಕನಸುಗಳನ್ನು ಹೆಣೆದಿರುತ್ತಾರೆ. ವಿದ್ಯಾಭ್ಯಾಸ ವಿಚಾ ರದಲ್ಲಿ ತಂದೆ-ತಾಯಿ ತೆಗೆದುಕೊಳ್ಳುವ ನಿರ್ಧಾರಗಳು ಮಕ್ಕಳ ಜೀವನವನ್ನೇ ರೂಪಿ ಸುತ್ತವೆ. ಅದೆಷ್ಟೋ ತಂದೆ ತಾಯಂದಿರು ತಮ್ಮ ಹೊಟ್ಟೆಗೆ ಅನ್ನ ಇಲ್ಲದಿದ್ದರೂ ಮಕ್ಕಳ ಹೊಟ್ಟೆಗೆ ಅನ್ನ ನೀಡಬೇಕೆಂದು ಶ್ರಮಿಸುತ್ತಾರೆ. ಎಲ್ಲೋ ಕೇಳಿದ ಮಾತು. “ಜೀವನದಲ್ಲಿ ಆಸ್ತಿ ಮಾಡಿ. ಆದರೆ ನಿಮ್ಮ ಕೊನೆಗಾಲದಲ್ಲಿ ನಿಮ್ಮ ಮಕ್ಕಳು ಡಾಕ್ಟರ್‌ಗೆ ಫೋನ್ ಮಾಡುವ ಬದಲು, ಲಾಯರ್‌ಗೆ ಫೋನ್ ಮಾಡುವಷ್ಟು ಆಸ್ತಿ ಮಾಡಬೇಡಿ.’ ಇದು ಸತ್ಯ.
ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಕೆಲಸ ಸಿಗುವವರೆಗೂ ಬೆನ್ನೆಲುಬಾಗಿ ನಿಲ್ಲುವ ಹೆತ್ತವರು ಅದೆಷ್ಟೋ ನೋವನ್ನು ಅನುಭವಿಸಿ, ಆ ನೋವು ನಮ್ಮ ಮಕ್ಕಳಿಗೆ ಬಾರದಿರಲಿ ಅನ್ನುವ ಉದ್ದೇಶದಿಂದ ಹಗಲು ರಾತ್ರಿಯೆನ್ನದೆ ಕಷ್ಟ ಪಡುತ್ತಾರೆ. ಆದರೆ ನಾವು ಅಮ್ಮ ನೀನು ಮಾಡಿದ ಅಡುಗೆ ಚೆನ್ನಾಗಿಲ್ಲ, ಅಪ್ಪ ನೀನು ತಂದ ಬಟ್ಟೆ ಚೆನ್ನಾಗಿಲ್ಲ, ಅಂತ ಸಣ್ಣ ಪುಟ್ಟ ವಿಚಾರಕ್ಕೆ ಹೆತ್ತವರನ್ನು ದೂರುತ್ತೇವೆ.
ಪರೀಕ್ಷೆ ಸಮಯದಲ್ಲಿ ಮಕ್ಕಳು ನಿದ್ದೆ ಬಿಡುವುಕ್ಕಿಂತ ಹೆಚ್ಚು ಹೆತ್ತವರು ನಿದ್ದೆ ಬಿಡುತ್ತಾರೆ. ಪರೀಕ್ಷೆ ಫಲಿ ತಾಂಶ ದಿನದಂದು ಮಕ್ಕಳಿಗಿಂತ ಹೆಚ್ಚು ಹೆತ್ತವರು ಆತಂಕಪಡುತ್ತಾರೆ. ಇಷ್ಟೆಲ್ಲಾ ಕರುಣೆ ತೋರಿದ ಹೆತ್ತವರನ್ನ ಕೊನೆಗಾಲದಲ್ಲಿ ಆಶ್ರಮಕ್ಕೆ ಸೇರಿಸುವ ಮಕ್ಕಳಿದ್ದಾರೆ. ಮಕ್ಕಳ ಬದುಕನ್ನು ರೂಪಿಸುವ ಹೆತ್ತವರನ್ನು ಸ್ಮರಿಸೋಣ. ಹೆತ್ತವರು ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯಾಗಿಸಿ… ಜೀವನವನ್ನು ಹಸನಾಗಿಸೋಣ.
ಭರತ್ ಕುಮಾರ್ ಶೆಟ್ಟಿ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು.