Advertisement

ರಾಜಕೀಯ ಸಲಹೆಗಾರರ ಮಾತು ಕೇಳಬೇಡಿ

06:20 AM Mar 29, 2018 | Team Udayavani |

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ರಾಜಕೀಯ ಸಲಹೆಗಾರರ ಮಾತುಗಳನ್ನು ಯಾರೂ ಕೇಳುವ ಅವಶ್ಯಕತೆ ಇರುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ತಿಳಿಸಿದ್ದಾರೆ.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಸ್ಪಷ್ಟನೆ ನೀಡಿದರು. ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರು ಈಗಲೂ ಪೊಲೀಸ್‌ ಇಲಾಖೆಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ ಎಂಬ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಪಾದನೆ ಬಗ್ಗೆ ಕೇಳಿದ್ದಕ್ಕೆ, ಈ ವಿಚಾರವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ರಾಜಕೀಯ ಸಲಹೆಗಾರರ ಸಲಹೆ-ಸೂಚನೆಗಳನ್ನು ಮಾನ್ಯ ಮಾಡಬೇಕಿಲ್ಲ. ಅಷ್ಟಕ್ಕೂ ಸಲಹೆಗಾರರ ನೇಮಕಾತಿ ಸರ್ಕಾರಿ ನೇಮಕಾತಿಯೋ ಅಥವಾ ರಾಜಕೀಯ ನೇಮಕಾತಿಯೋ ಅನ್ನುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತುಮಕೂರು ಹಾಗೂ ದಾವಣಗೆರೆ ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡಿ ಮಂಗಳವಾರ ರಾಜ್ಯಪಾಲರು ಆದೇಶ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ನೀತಿ ಸಂಹಿತೆ ಜಾರಿಯಲ್ಲಿರುವಾಗ ನೇಮಕಾತಿ, ವರ್ಗಾವಣೆ ಯಾವುದಕ್ಕೂ ಅವಕಾಶ ಇಲ್ಲ. ಕುಲಪತಿಗಳ ನೇಮಕಾತಿ ಬಗ್ಗೆ ಮಾಹಿತಿ ತರಿಸಿಕೊಂಡು, ಒಂದು ವೇಳೆ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಆ ನೇಮಕಾತಿಗಳು ಆಗಿದ್ದರೆ ಅದನ್ನು ತಡೆಹಿಡಿಯಲಾಗುವುದು ಎಂದರು. ಹಿಂದಿನ ಎರಡು ಸಚಿವ ಸಂಪುಟ ಸಭೆಗಳ ನಿರ್ಣಯಗಳನ್ನು ತಡೆ ಹಿಡಿಯಬೇಕು ಎಂಬ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಕ್ಕೆ, ಈ ವಿಚಾರದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಚುನಾವಣಾ ರಾಯಭಾರಿ ರಾಹುಲ್‌ ದ್ರಾವಿಡ್‌
ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಉತ್ತೇಜನ ನೀಡಲು, ಮತದ ಮಹತ್ವ -ಮೌಲ್ಯ ಸಾರಲು ಮತ್ತು ವಿಶೇಷವಾಗಿ ಯುವ ಮತದಾರರನ್ನು ಮತಗಟ್ಟೆಗಳಿಗೆ ಆಕರ್ಷಿಸಲು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕನ್ನಡಿಗ ರಾಹುಲ್‌ ಡ್ರಾವಿಡ್‌ ಅವರು 2018ರ ರಾಜ್ಯ ವಿಧಾನಸಭಾ ಚುನಾವಣೆಗೆ “ಬ್ರಾಂಡ್‌ ಐಕಾನ್‌’ ಆಗಿ (ರಾಯಭಾರಿ) ಅಭಿಯಾನ ನಡೆಸಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ತಿಳಿಸಿದರು.

ಮತದಾನದ ಬಗ್ಗೆ ರಾಹುಲ್‌ ಡ್ರಾವಿಡ್‌ ಅವರ ವಿಡಿಯೋ ಸಂದೇಶಗಳ 60 ಸೆಕೆಂಡ್‌ನ‌ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯ ತುಣುಕುಗಳನ್ನು ಮಲ್ಟಿಪ್ಲೆಕ್ಸ್‌, ಚಿತ್ರಮಂದಿರ, ಟಿವಿ ಮತ್ತಿತರ ಕಡೆ ಪ್ರಸಾರ ಮಾಡಲಾಗುವುದು. ಅಲ್ಲದೆ, ಸಂದೇಶ ಹೊತ್ತ ಪೋಸ್ಟರ್‌ಗಳನ್ನು ರಾಜ್ಯಾದ್ಯಂತ ಬಿತ್ತರಿಸಲಾಗುವುದು ಎಂದು ಹೇಳಿದರು.

Advertisement

ಕೇಂದ್ರ ಚುನಾವಣಾ ಆಯೋಗದ ಕೋರಿಕೆಯಂತೆ ಬ್ರಾಂಡ್‌ ಐಕಾನ್‌ ಆಗಲು ರಾಹುಲ್‌ ಡ್ರಾವಿಡ್‌ ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ಸ್ವಯಂಪ್ರೇರಣೆಯಿಂದ ಐಕಾನ್‌ಗಳಾಗಲು ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ಅವರ ಹೆಸರುಗಳನ್ನು ಸಹ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ, ರಾಹುಲ್‌ ಡ್ರಾವಿಡ್‌ ಅವರ ಸಂದೇಶ ಹೊತ್ತ ವಿಡಿಯೋ ತುಣುಕು, ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಭಟ್ಟರ ಚುನಾವಣಾ ಗೀತೆ
ಮತದಾರರಲ್ಲಿ ಜಾಗೃತಿ ಮೂಡಿಸಲು ಚಿತ್ರ ನಿರ್ದೇಶಕ ಯೋಗರಾಜ್‌ ಭಟ್‌, “ಪ್ರಜಾಪ್ರಭುತ್ವ ನಮ್ಮ ಹೆಮ್ಮೆ’ ಎಂಬ ಕಲ್ಪನೆಯಲ್ಲಿ ಚುನಾವಣಾ ಗೀತೆ ರಚಿಸಿದ್ದಾರೆ. ಇದಕ್ಕಾಗಿ 30 ಜಿಲ್ಲೆಗಳ ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ನಾಲ್ಕು ನಿಮಿಷಗಳ ಈ ಹಾಡಿಗೆ ಹರಿಕೃಷ್ಣ ಸಂಗೀತ ನೀಡಿದ್ದು, ವಿಜಯ ಪ್ರಕಾಶ್‌ ಹಾಡಿದ್ದಾರೆ. ವಾರದಲ್ಲಿ ಹಾಡಿನ ಬಿಡುಗಡೆಯಾಲಿದೆ ಎಂದು ಸಂಜೀವ್‌ಕುಮಾರ್‌ ತಿಳಿಸಿದರು.

ರಾಹುಲ್‌ ದ್ರಾವಿಡ್‌ ವಿಡಿಯೋ ಸಂದೇಶ
“ಎಲ್ಲರೂ ಚೆನ್ನಾಗಿ ಆಡಿದರೆ ನಾವು ಮ್ಯಾಚ್‌ ಗೆಲ್ತಿàವಿ. ನೀವು ಎಲ್ಲರೂ ಓಟ್‌ ಮಾಡಿದರೆ ಡೆಮಾಕ್ರಸಿ ಗೆಲ್ಲುತ್ತೆ. ಕ್ರಿಕೆಟ್‌ ಮ್ಯಾಚ್‌ನಲ್ಲಿ ಪ್ರತಿಯೊಬ್ಬ ಆಟಗಾರ ಮುಖ್ಯ. ಅದೇ ರೀತಿ ಡೆಮಾಕ್ರಸಿಯಲ್ಲಿ ಪ್ರತಿ ಓಟು ಮುಖ್ಯ. ನಾನು ಓಟ್‌ ಮಾಡ್ತೀನಿ. ನೀವೂ ಓಟ್‌ ಹಾಕಿ ಡೆಮಾಕ್ರಸಿ ಗೆಲ್ಲಿಸಿ’.

ಪೋಸ್ಟರ್‌ ಮೆಸೇಜ್‌
“ನಿಮ್ಮ ಮತ ಚಲಾಯಿಸಿ, ಕರ್ನಾಟಕವನ್ನು ಗೆಲ್ಲಿಸಿ’
“ನಾವೆಲ್ಲರೂ ಪ್ರಜಾಪ್ರಭುತ್ವ ಗೆಲ್ಲಲು ಆಡೋಣ, ನೈತಿಕ ಚುನಾವಣೆಗಳಿಗೆ ಬೆಂಬಲಿಸೋಣ’

Advertisement

Udayavani is now on Telegram. Click here to join our channel and stay updated with the latest news.

Next