ಬೆಂಗಳೂರು: ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳು ವೀಣಾ ಟಿ. ನಿರ್ದೇಶಕರಾಗಿರುವ ಎಕ್ಸಾಲಾಜಿಕ್ ಸಲೂಷನ್ಸ್ ಐಟಿ ಕಂಪನಿಯ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ನೀಡುವ ಸೂಚನೆಯಂತೆ ಸದ್ಯ ಬಂಧನದಂತಹ ಬಲವಂತದ ಕ್ರಮ ಜರುಗಿಸಬಾರದು ಎಂದು ತನಿಖಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಈ ವಿಚಾರವಾಗಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ಪಿಣರಾಯಿ ಸಲ್ಲಿಸಿರುವ ಅರ್ಜಿಯು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತು. ಈ ಮಧ್ಯೆ ಕಂಪನಿಯ ಎಲ್ಲ ವ್ಯವಹಾರದ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಬೇಕು. ಆದರೆ, ಅಧಿಕಾರಿಗಳು ಅರ್ಜಿದಾರರನ್ನು ಬಂಧಿಸುವಂತಹ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸೂಚನೆ ನೀಡಿತು.
ಕಂಪನಿಯ ವಿರುದ್ಧ ಕೇಂದ್ರ ಕಾಪೋರೆಟ್ ವ್ಯವಹಾರಗಳ ಸಚಿವಾಲಯ ಕಂಪನಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ನಡೆಸುವಂತೆ ಜನವರಿ 31ರಂದು ಆದೇಶಿಸಿತ್ತು. ಕೇಂದ್ರ ಸರ್ಕಾರದ ಈ ಆದೇಶವು ದೋಷಪೂರಿತವಾಗಿದೆ. ಸೂಕ್ತ ಕಾರಣವಿಲ್ಲದೆ ತನಿಖೆಗೆ ಆದೇಶಿಸಿದ್ದು, ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ. ಜೊತೆಗೆ ಸಂವಿಧಾನದ ಪರಿಚ್ಛೇದ 14 ಮತ್ತು 21ಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕೊಚ್ಚಿನ್ ಮಿನರಲ್ಸ್ ರೂಟೈಲ್ ಲಿಮಿಟೆಡ (ಸಿಎಂಆರ್‌ಎಲ್) ಮತ್ತು ಅರ್ಜಿದಾರರ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ 2021ರಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಕಂಪನಿ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಬೆಂಗಳೂರಿನ ಕಂಪನಿ ರಿಜಿಸ್ಟ್ರಾರ್ ಅವರಿಂದ ಅರ್ಜಿದಾರರಿಗೆ ಪತ್ರ ಬರೆಯಲಾಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ್ದ ಅರ್ಜಿದಾರರು ಕಂಪೆನಿ ರಿಜಿಸ್ಟ್ರಾರ್ ಕೇಳಿದ್ದ ಎಲ್ಲ ಮಾಹಿತಿಗಳನ್ನು ದಾಖಲೆಗಳೊಂದಿಗೆ ಸಲ್ಲಿಸಿದ್ದರು. ಆದಾಗ್ಯೂ ಸಂಸ್ಥೆ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.