Advertisement

ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬೇಡಿ

12:41 AM Sep 30, 2019 | Team Udayavani |

ಗುಂಡ್ಲುಪೇಟೆ: ವನ್ಯಜೀವಿಗಳು ದೇಶದ ಸಂಪತ್ತಾಗಿದ್ದು ಯಾವುದೇ ಕಾರಣಕ್ಕೂ ಕೇರಳದ ಟಿಂಬರ್‌ ಲಾಬಿಗೆ ಮಣಿದು ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಕನ್ನಡ ಚಳವಳಿ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್‌ ನಾಗರಾಜು ಆಗ್ರಹಿಸಿದರು. ತಾಲೂಕಿನ ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 766ರ ಮದ್ದೂರು ಅರಣ್ಯ ಚೆಕ್‌ ಪೋಸ್ಟ್‌ ಎದುರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಂಡೀಪುರ ರಾಷ್ಟ್ರೀಯ ಉದ್ಯಾನದ ವನ್ಯಜೀವಿಗಳ ಸಹಜ ಜೀವನಕ್ಕೆ ಅಡ್ಡಿಯಾಗದಂತೆ ಸುಪ್ರೀಂಕೋರ್ಟ್‌ ರಾತ್ರಿ ಸಂಚಾರ ನಿಷೇಧಿಸಿದೆ. ಆದರೆ ಕೇರಳ ಸರ್ಕಾರ ರಾತ್ರಿ ಸಂಚಾರ ತೆರವು, ಮೇಲ್ಸೇತುವೆ ನಿರ್ಮಾಣ, ಸುರಂಗ ಮಾರ್ಗ, ರೈಲು ಮಾರ್ಗ ನಿರ್ಮಾಣಕ್ಕೆ ಅವಕಾಶ ನೀಡುವಂತೆ ರಾಜ್ಯ-ಕೇಂದ್ರ ಸರ್ಕಾರದ ಮೇಲೆ ಪದೇ ಪದೇ ಒತ್ತಡ ಹೇರುತ್ತಿದೆ.

ಇದಕ್ಕಾಗಿ ಭಾರೀ ಪ್ರಮಾಣದ ಹಣವನ್ನೂ ಮೀಸಲಿರಿಸಿ ಎಲ್ಲಾ ವೆಚ್ಚವನ್ನೂ ತಾನೇ ಭರಿಸುವ ಮಾತನ್ನಾಡುತ್ತಿದೆ. ಇದರಿಂದ ಸಾವಿರಾರು ಮರಗಿಡ, ವನ್ಯಜೀವಿಗಳು ನಾಶವಾಗುತ್ತವೆ. ಇದಕ್ಕಾಗಿ ಪರ್ಯಾಯ ಮಾರ್ಗ ನಿರ್ಮಾಣ ಮಾಡಿದರೆ ಅಪಾರ ಪ್ರಮಾಣದ ಮರಗಿಡಗಳು ನಾಶವಾಗಲಿದೆ. ಇದರ ಹಿಂದೆ ಕೇರಳದ ಟಿಂಬರ್‌ ಲಾಬಿ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಯಾವುದೇ ಕಾರಣಕ್ಕೂ ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದರೆ ಕನ್ನಡ ಚಳವಳಿ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಕ್ಷಗಳ ದಸರಾ: ವಿಶ್ವವಿಖ್ಯಾತ ದಸರೆ ನಾಡಿನ ಹೆಮ್ಮೆ. ನಾಡಿನ ಅದಿದೇವತೆ ಪೂಜಾ ಮಹೋತ್ಸವ. ಆದರೆ ಇತ್ತೀಚೆಗೆ ಇದು ಮೈಸೂರಿಗೆ ಮಾತ್ರ ಸೀಮಿತವಾಗುತ್ತಿದೆ. ಅಲ್ಲದೆ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ದಸರೆಯಾಗಿದೆ ಎಂದು ವ್ಯಂಗ್ಯವಾಡಿದರು.

ನೆರೆ ಸಂಸ್ರಸ್ತರಿಗೆ ನೆರವು ನೀಡಿ: ಅತ್ತ ಉತ್ತರ ಕರ್ನಾಟಕದ ಜನತೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೆ ಇವರಿಗೆ ನೆರವಾಗಬೇಕಾಗಿದ್ದ ರಾಜ್ಯ ಸಂಪುಟ ಹಾಗೂ ಕೇಂದ್ರ ಸಚಿವರು, ಅಧಿಕಾರಿಗಳು ಮೈಸೂರಿನಲ್ಲಿದ್ದಾರೆ. ಇಲ್ಲಿ ರಾಜಕಾರಣಿಗಳು ದರ್ಬಾರ್‌ ನಡೆಸುವ ಬದಲು ಉತ್ತರ ಕರ್ನಾಟಕದ ಜನತೆಗೆ ನೆರವಾಗಬಹುದಾಗಿತ್ತು. ರಾಜ್ಯದಲ್ಲಿ ಅತಿ ಹೆಚ್ಚು ಸಂಸದರನ್ನು ಗೆಲ್ಲಿಸಿದರೂ ನೆರೆಪೀಡಿತರಿಗೆ ಬಿಡಿಗಾಸು ಪರಿಹಾರ ನೀಡದೆ ತಿರುಗಿನೋಡದ ಪ್ರಧಾನ ಮಂತ್ರಿ ನರೇಂದ್ರಮೋದಿ ರಾಜ್ಯದ ಜನರನ್ನು ಗುಲಾಮರಂತೆ ನೋಡುತ್ತಿದ್ದಾರೆ ಎಂದು ಕಿಡಿಕಾರಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಾಟಾಳ್‌, ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪ, ಈಶ್ವರಪ್ಪ ಅವರನ್ನು ಮೂಲೆ ಗುಂಪು ಮಾಡಿದರೆ ಬಿಜೆಪಿ ನಿರ್ನಾಮವಾಗುವುದರಲ್ಲಿ ಸಂಶಯವಿಲ್ಲ ಎಂದರು.

Advertisement

ತರಕಾರಿ ಖರೀದಿಸಿದ ವಾಟಾಳ್‌:  ತಾಲೂಕಿನ ಮಲ್ಲಯ್ಯನಪುರ ಸಮೀಪ ರಸ್ತೆ ಬದಿಗಳಲ್ಲಿ ರೈತರೇ ಮಾರಾಟ ಮಾಡುವ ಮಳಿಗೆಗೆ ತೆರಳಿದ ವಾಟಾಳ್‌, ಟೊಮೆಟೋ, ಬೀನ್ಸ್‌, ಮೂಲಂಗಿ ಹಾಗೂ ಹಸಿ ಕಾಳು ಖರೀದಿಸಿದರು.

ಸೆಲ್ಫಿ: ಸಾರ್ವಜನಿಕರು ಹಾಗೂ ವಾಹನ ಸವಾರರು ಕುತೂಹಲದಿಂದ ವಾಟಾಳ್‌ರ ಜತೆ ಸೆಲ್ಫಿ ತೆಗೆದು ಕೊಳ್ಳಲು ಮುಂದಾದರು. ಇದಕ್ಕೆ ಸ್ಪಂದಿಸಿದ ವಾಟಾಳ್‌, ಸೆಲ್ಫಿಗೆ ಫೋಸ್‌ ಕೊಟ್ಟರು. ಇದೇ ವೇಳೆ ಹಲವರು ರಸ್ತೆ ಬಂದ್‌ ಆದರೆ ನಮ್ಮ ವ್ಯಾಪಾರಕ್ಕೆ ಕಷ್ಟಕ್ಕೆ ನೀವಾದರೂ ಸ್ಪಂದಿಸಿ ಎಂದರು.

ಈ ಸಂದರ್ಭದಲ್ಲಿ ಸುಮಾರು ಒಂದು ಗಂಟೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಪಟ್ಟಣ ಠಾಣೆ ಪಿಎಸ್‌ಐ ಲತೇಶ್‌ ಕುಮಾರ್‌, ವಾಟಾಳ್‌ ನಾಗರಾಜ್‌ ಅವರನ್ನು ವಶಕ್ಕೆ ಪಡೆದು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ನಂತರ ವಾಟಾಳ್‌ರನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಕನ್ನಡ ಚಳವಳಿ ಮುಖಂಡರಾದ ಮೃತ್ಯುಂಜಯ, ಪಾರ್ಥಸಾರಥಿ, ಶಿವಲಿಂಗು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next