ತುರುವೇಕೆರೆ: ರೈತರ ಪಾಲಿಗೆ ಕಾಮಧೇನುಗಳಾಗಿರುವ ಜಾನುವಾರುಗಳಿಗೆ ತಪ್ಪದೇ ವಿಮೆ ಮಾಡಿಸಬೇಕು ಎಂದು ಶಾಸಕ ಮಸಾಲಾ ಜಯರಾಮ್ ರೈತರಿಗೆ ಸಲಹೆ ನೀಡಿದರು.ತಾಲೂಕಿನ ಲೋಕಮ್ಮನಹಳ್ಳಿಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ನಡೆದ ಜಾನುವಾರುಗಳ ಗುಂಪು ವಿಮಾ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನುವಾರುಗಳು ಈಗ ರೈತರ ಕುಟುಂಬದ ಆಧಾರ ಸ್ತಂಭವಾಗಿದೆ ಎಂದರು.
ಹೆಚ್ಚು ಹಾಲು ಶೇಖರಣೆ: ಒಂದೆರೆಡುರಾಸುಗಳನ್ನು ಸಾಕಿದಲ್ಲಿ ಕುಟುಂಬದ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ. ಕೋವಿಡ್ ಹೆಚ್ಚಾದ ಕಾರಣಕ್ಕೆ ಬೆಂಗಳೂರಿನಿಂದ ಹಲವು ಮಂದಿ ತಮ್ಮ ಗ್ರಾಮಗಳಿಗೆ ಹಿಂತಿರುಗಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ಹೈನೋದ್ಯಮಕ್ಕೆ ಮುಂದಾಗಿದ್ದಾರೆ. ಪರಿಣಾಮವಾಗಿ ಹೆಚ್ಚು ಹಾಲು ಶೇಖರಣೆಯಾಗುತ್ತಿದೆ ಎಂದು ಹೇಳಿದರು.
ತಾಳ್ಮೆ ಅಗತ್ಯ: ಜನವರಿ ಅಂತ್ಯಕ್ಕೆ ಕೋವಿಡ್ ಆರ್ಭಟ ಅಂತ್ಯವಾಗುವ ಸಾಧ್ಯತೆ ಇದೆ. ತದ ನಂತರ ದೇಶದ ಆರ್ಥಿಕ ವ್ಯವಸ್ಥೆ ಸರಿ ಹೋಗಲಿದೆ.ಅಲ್ಲಿಯವರೆಗೂ ತಾಳ್ಮೆಯಿಂದ ಕಾಯುವುದು ಅಗತ್ಯ. ಅಲ್ಲಿಯ ತನಕ ಯಾವ ಅಭಿವೃದ್ಧಿ ಕೆಲಸಗಳೂ ಆಗುವುದಿಲ್ಲ ಎಂದು ತಿಳಿಸಿದರು.
ತಾಲೂಕಿನಲ್ಲಿ ಶೇ.80 ರಷ್ಟು ಕೆರೆಗಳು ಭರ್ತಿ: ತಾಲೂಕಿನಲ್ಲಿ ಮಳೆ ಉತ್ತಮವಾಗಿದೆ. ಹೇಮಾವತಿ ನಾಲಾ ನೀರು ಕಾಲುವೆ ಮೂಲಕ ಹಾದು ಹೋಗಿ ತಾಲೂಕಿನ ಶೇ.80 ರಷ್ಟು ಕೆರೆಗಳು ಭರ್ತಿಯಾಗಿವೆ. ಸಿಎಸ್ ಪುರ ಮತ್ತು ಮಾಯಸಂದ್ರದ ಕೆಲವು ಕೆರೆಗಳು ಭರ್ತಿಯಾಗಬೇಕಿದೆ. ಅವುಗಳನ್ನು ಶೀಘ್ರದಲ್ಲೇ ತುಂಬಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.
ಸಂಕಷ್ಟದಲ್ಲಿರುವ ಹಾಲು ಒಕ್ಕೂಟ: ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಮಾತನಾಡಿ, ಕೋವಿಡ್ ದಿಂದ ಜಿಲ್ಲಾ ಹಾಲು ಒಕ್ಕೂಟ ಬಹಳ ನಷ್ಟದಲ್ಲಿದೆ. ಆದಾಗ್ಯೂ ಸಹ ರೈತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಉತ್ಪಾದಿಸುತ್ತಿರುವ ಎಲ್ಲಾ ಹಾಲುಗಳನ್ನು ಒಕ್ಕೂಟ ಖರೀದಿಸುತ್ತಿದೆ. ಹಾಲಿನ ಮಾರಾಟ ಬಹಳ ಕಡಿಮೆಯಾಗಿದೆ. ಹಾಲಿನ ಪೌಡರ್ ಮತ್ತು ಬೆಣ್ಣೆಶೇಖರಣೆಯಾಗುತ್ತಿದೆ. ಇವುಗಳ ದಾಸ್ತಾನಿನ ಮೇಲೆ ಹಾಲು ಒಕ್ಕೂಟ ಸಾಲ ಪಡೆದು ರೈತರಿಗೆ ನೀಡುತ್ತಿದೆ ಎಂದು ಹೇಳಿದರು.
ರಾಸುಗಳ ವಿಮೆಗೆ ಆದ್ಯತೆ ನೀಡಿ: ರೈತರು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸುವುದು ತಮ್ಮ ಮೊದಲ ಆದ್ಯತೆಯಾಗಬೇಕು. ಜೀವನ ನಿರ್ವಹಣೆಗೆ ದಾರಿಯಾಗಿರುವ ರಾಸುಗಳನ್ನು ಬಹಳ ಮುತುವರ್ಜಿಯಿಂದ ಸಾಕಬೇಕು. ಹಾಗಾಗಿ ವಿಮೆ ಮಾಡಿಸಿದಲ್ಲಿ ಕುಟುಂಬಕ್ಕೆತೊಂದರೆಯಾಗದು ಎಂದು ತಿಳಿಸಿದರು.ಲೋಕಮ್ಮನಹಳ್ಳಿ ಹಾಲು ಸಹಕಾರ ಸಂಘದ ಅಧ್ಯಕ್ಷಎಲ್.ಆರ್.ಅಶೋಕ್, ಉಪಾಧ್ಯಕ್ಷೆ ಲಕ್ಷ್ಮೀ ದೇವಮ್ಮ, ನಿರ್ದೇಶಕರಾದ ಎಂ.ಡಿ. ಹರೀಶ್, ಅಲ್ಲೇಗೌಡ, ಚಂದ್ರಶೇಖರಯ್ಯ, ಧರೇಶ್, ಚಿಕ್ಕಣ್ಣ, ಬೆಟ್ಟಯ್ಯ, ಕಾರ್ಯದರ್ಶಿ ಜಿ.ಕೆ. ಲೋಕೇಶ್, ವಿಸ್ತೀರಣಾಧಿಕಾರಿಗಳಾದ ಕಿರಣ್ ಕುಮಾರ್ ಮತ್ತು ದಿವಾಕರ್ ಉಪಸ್ಥಿತರಿದ್ದರು.