ಕೊಪ್ಪಳ: ‘ನಾನೂ ಕರಸೇವಕ, ನನ್ನನ್ನೂ ಬಂಧಿಸಿ’ ಎಂದು ಪ್ರತಿಭಟನೆ ನಡೆಸುತ್ತಿದ್ದ ಸಿ.ಟಿ ರವಿ ವಿರುದ್ಧ ಕಾಂಗ್ರೆಸ್, ‘ಅಪಘಾತ’ದ ವಿಚಾರವಾಗಿ ಟೀಕೆ ಮಾಡಿದೆ. ಇದಕ್ಕೆ ಸಿ.ಟಿ ರವಿ ತಿರುಗೇಟು ನೀಡಿದ್ದು, ಈ ಪ್ರಕರಣದ ಸಿಸಿ ಕ್ಯಾಮರಾ ಪರಿಶೀಲಿಸಬೇಕು. ಸರ್ಕಾರ ಸುಳ್ಳುಗಳನ್ನು ಪತ್ತೆ ಮಾಡುವ ಫ್ಯಾಕ್ಟ್ ಚೆಕ್ ತಂಡಕ್ಕೆ ವಹಿಸಬೇಕು. ಸರಕಾರದ 14 ಕೋಟಿ ರೂಪಾಯಿ ಸರಕಾರದ ಹಣ ಖರ್ಚು ಮಾಡುತ್ತಿದ್ದಿರಿ. ನನ್ನ ಕಾರ್ ಅಪಘಾತದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪೋಸ್ಟ್ ಚೆಕ್ ಮಾಡಬೇಕು. ಇದು ಸುಳ್ಳು ಎಂದಾದರೆ ನಿಮ್ಮ ಮೇಲೆ ಕೇಸ್ ದಾಖಲಿಸುತ್ತೇನೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಲ್ಲಿ ಹಿಂದೂ ವಿರೋಧಿ ಡಿಎನ್ಎ ಮನೋಭಾವವಿದೆ. ಹಿಂದೂ ಕಾರ್ಯಕರ್ತರಲ್ಲಿ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ಶ್ರೀಕಾಂತ್ ಪೂಜಾರಿ ಏನು ಅತ್ಯಾಚಾರ, ಕಳ್ಳತನ ಮಾಡಿದ್ದಾನೆಯೇ? 31 ವರ್ಷದ ಬಳಿಕ ಬಂಧನ ಏಷ್ಟು ಸರಿ ಎಂದು ಪ್ರಶ್ನಿಸಿದರು.
ದೇಶದ ಕಾನೂನು ಎಲ್ಲರಿಗೂ ಒಂದೇ ಎನ್ನುವ ಡಾ. ಜಿ ಪರಮೇಶ್ವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಾಗಾದರೆ ಈಗ ಜ್ಞಾನೋದಯವಾಯಿತೆ? ಡಿ ಕೆ ಶಿವಕುಮಾರ್ ಪ್ರಕರಣ ದಾಖಲಿಸಿದ್ದಾಗ ರಾಜ್ಯದಾದ್ಯಂತ ಯಾಕೆ ಹೋರಾಟ ಮಾಡಿದರು ಎಂದರು.
ಗೋಧ್ರಾ ಹತ್ಯೆಯಂಥಹ ಪ್ರಕರಣ ನಡೆಯಬಹುದು ಎಂದು ಹರಿಪ್ರಸಾದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹರಿಪ್ರಸಾದ ಹಿರಿಯರಿದ್ದಾರೆ. ಈ ರೀತಿ ಘಟನೆ ನಡೆಯುತ್ತಿದ್ದರೆ ಮೊದಲು ಪೊಲೀಸರಿಗೆ ತಿಳಿಸಬೇಕಿತ್ತು. ಹರಿಪ್ರಸಾದ ಹೇಳಿಕೆ ನಂತರ ರಾಮಭಕ್ತರಿಗೆ ರಕ್ಷಣೆ ಬೇಕಿದೆ. ರಾಮಮಂದಿರಕ್ಕಾಗಿ ಹಿಂದೂ ಪರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಕರಸೇವೆ ಮಾಡಿದ್ದು ಹಿಂದೂ ಕಾರ್ಯಕರ್ತರು. ಕಾಂಗ್ರೆಸ್ ನವರು ಕರಸೇವೆಯಲ್ಲಿದ್ದರಾ? ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡೋದು ಕಾಂಗ್ರೆಸ್ ನೀತಿಯೇ? ಈ ಕೆಟ್ಟ ನೀತಿಯಿಂದ ದೇಶದಲ್ಲಿ 40 ಸೀಟು, ರಾಜ್ಯದಲ್ಲಿ ಈಗ ಒಂದೇ ಲೋಕಸಭಾ ಸ್ಥಾನ ಗೆದ್ದಿದೆ. ನಮ್ಮ ತಪ್ಪಿನಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ನೀತಿ ಮುಂದುವರಿಸಿದರೆ ಲೋಕಸಭೆಯಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲುವುದಿಲ್ಲ ಎಂದರು.
ಲೋಕಸಭೆಗೆ ಸ್ಪರ್ಧಿಸುವ ವಿಚಾರಕ್ಕೆ ಕೇಳಿದ ಪ್ರಶ್ನಗೆ ಉತ್ತರಿಸಿದ ಅವರು, ಎಲ್ಲವನ್ನೂ ಪಾರ್ಟಿ ನಿರ್ಧರಿಸುತ್ತದೆ. ನಾನು ಏನನ್ನು ಬಯಸಿಲ್ಲ. ಪಕ್ಷ ಸೂಚಿಸಿದಂತೆ ಕೆಲಸ ಮಾಡುತ್ತೇನೆ ಎಂದರು.
ಅಯೋಧ್ಯೆ ಮಾದರಿಯಲ್ಲಿ ಅಂಜನಾದ್ರಿ ಅಭಿವೃದ್ದಿ ಆಗಲಿದೆ. ಹಿಂದಿನ ಸರಕಾರದಲ್ಲಿ 121 ಕೋಟಿ ರೂಪಾಯಿ ಮಂಜೂರು ಮಾಡಿದೆ. ಈಗಿನ ಸರಕಾರ ಸ್ಥಳೀಯ ಪಾಲುದಾರಿಕೆಯಲ್ಲಿ ಅಭಿವೃದ್ದಿ ಪಡಿಸಬೇಕು ಎಂದರು.