Advertisement
ಎಸ್‌ಐಟಿ ಅಧಿಕಾರಿಗಳು ಗುರುವಾರ 42ನೇ ಎಸಿಎಂಎಂ ಕೋರ್ಟ್‌ಗೆ ಶಾಸಕ ಮುನಿರತ್ನ ಅವರನ್ನು ಹಾಜರುಪಡಿಸಿದರು. ಮುನಿರತ್ನ ಅವರನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ನ್ಯಾಯಾ ಲಯಕ್ಕೆ ಮನವಿ ಕೇಳಿದರು. ಈ ನಡುವೆ “ಪೊಲೀಸರಿಂದ ಏನಾದರೂ ಸಮಸ್ಯೆ ಆಯಿತಾ’ ಎಂದು ಮುನಿ ರತ್ನರನ್ನು ನ್ಯಾಯಾಧೀಶರು ಕೇಳಿದರು. “ಯಾವುದೇ ಸಮಸ್ಯೆ ಇಲ್ಲ. ಆದರೆ, ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ’ ಎಂದು ಮುನಿರತ್ನ ಮತ್ತೆ ಹಿಂದಿನ ಅಳಲನ್ನೇ ತೋಡಿಕೊಂಡರು. ನಂತರ ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯವು ಅನುಮತಿ ನೀಡಿತು. ಮುನಿರತ್ನರ ರಕ್ತದ ಮಾದರಿ ಸಂಗ್ರಹಿಸುವ ಉದ್ದೇಶದಿಂದ ಎಸ್‌ಐಟಿ ತಂಡವು ವೈದ್ಯರನ್ನೂ ಕೋರ್ಟ್‌ಗೆ ಕರೆತಂದಿದ್ದರು. ಈ ವೇಳೆ ಮುನಿರತ್ನ ಅವರು, ತಮ್ಮ ವಕೀಲರ ಸಮ್ಮುಖದಲ್ಲಿ ರಕ್ತದ ಮಾದರಿ ತೆಗೆದುಕೊಳ್ಳಬೇಕೆಂದು ಕೋರ್ಟ್ ಮುಂದೆ ಕೇಳಿಕೊಂಡರು. ಇದಕ್ಕೆ ಒಪ್ಪಿದ ಕೋರ್ಟ್, ವಕೀಲರು ಬಂದ ಮೇಲೆ ಸ್ಯಾಂಪಲ್ಸ್ ತೆಗೆದುಕೊಳ್ಳಲು ಎಸ್‌ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Related Articles
Advertisement
ಅತ್ಯಾಚಾರ ಕೇಸ್: ಗೋದಾಮಿನಲ್ಲಿ ಮಹಜರು
ಶಾಸಕ ಮುನಿರತ್ನ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಹಲವು ಮಾಹಿತಿ ಕಲೆ ಹಾಕಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ವು ಸಂತ್ರಸ್ತೆಯನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದು ಗುರುವಾರ ಮಹಜರು ನಡೆಸಿದೆ. ಮುನಿರತ್ನ ಅತ್ಯಾಚಾರ ನಡೆಸಿದ್ದರು ಎನ್ನಲಾದ ಜೆಪಿ ಪಾರ್ಕ್ ಬಳಿಯ ಗೋದಾಮಿಗೆ ಎಸ್‌ಐಟಿ ಅಧಿಕಾರಿಗಳು ಗುರುವಾರ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು ನಡೆಸಿದ್ದಾರೆ. ಜೊತೆಗೆ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಪಿ ಪಾರ್ಕ್‌ನ ಬಾಡಿಗೆ ಮನೆಯೊಂದರಲ್ಲಿ ಮಹಜರು ನಡೆಸಿದ್ದಾರೆ. ಪ್ರಭಾವಿಗಳನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮಹಜರು ನಡೆಸಿ ಸಂತ್ರಸ್ತೆಯ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ.
ಸಂತ್ರಸ್ತೆಯ ಮೊಬೈಲ್ ಜಪ್ತಿ ಮಾಡಿರುವ ಎಸ್‌ಐಟಿ ಅಧಿಕಾರಿಗಳು ಅದನ್ನು ರೀಟ್ರೈವ್ ಮಾಡಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಎಲ್) ರವಾನಿಸಿದ್ದಾರೆ. ಸಂತ್ರಸ್ತೆ ಕೆಲ ವಿಡಿಯೋ ಹಾಗೂ ಕೆಲ ದಾಖಲೆಗಳನ್ನು ಎಸ್‌ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಮಾಜಿ ಕಾರ್ಪೊರೇಟರ್‌ವೊಬ್ಬರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಇದಲ್ಲದೇ, ಮುನಿರತ್ನ ಆಪ್ತ ಸಹಾಯಕನ ವಿಚಾರಣೆ ನಡೆಸಲಾಗಿದೆ. ಇನ್ನು ಪ್ರಕರಣದಲ್ಲಿ ಶಾಸಕ ಮುನಿರತ್ನ ಸೇರಿ ಒಟ್ಟು 7 ಆರೋಪಿಗಳ ಹೆಸರನ್ನು ಕಗ್ಗಲೀಪುರದಲ್ಲಿ ದಾಖಲಾದ ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ. ಮುನಿರತ್ನ ಹೊರತುಪಡಿಸಿ ಇನ್ನುಳಿದ 6 ಆರೋಪಿಗಳಿಗೆ ಎಸ್‌ಐಟಿ ಶೋಧ ನಡೆಸುತ್ತಿದೆ. ಇನ್ನು ಮುನಿರತ್ನರ ವಿಚಾರಣೆಯನ್ನು ಎಸ್‌ಐಟಿ ಮುಂದುವರಿಸಿದೆ.