ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ, ಡಿಎಂಕೆ ಮುಖಂಡ ಸ್ಟಾಲಿನ್ ಪ್ರಚಾರಕ್ಕೆ ಬೆನ್ನೆಲುಬಾಗಿರುವ ಮಾಜಿ ಸಚಿವ ಇ.ವಿ. ವೇಲು ಅವರ ಮೇಲೆ “ಐಟಿ’ ಅಸ್ತ್ರ ಪ್ರಯೋಗವಾಗಿದೆ.
ತಿರುವಣ್ಣಾಮಲೈನಲ್ಲಿರುವ ವೇಲು ಅವರ ನಿವಾಸ ಮತ್ತು ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗಳು, ಇತರ 10 ಸ್ಥಳಗಳಲ್ಲಿ ಗುರುವಾರ ಐಟಿ ತಲಾಶ್ ನಡೆಸಿದೆ. ಡಿಎಂಕೆ ನಾಯಕ ಸ್ಟಾಲಿನ್ ತಂಗುತ್ತಿದ್ದ ಗೆಸ್ಟ್‌ಹೌಸ್‌ನಲ್ಲೂ ಅಧಿಕಾರಿಗಳು ಹುಡುಕಾಡಿದ್ದಾರೆ.
ಐಟಿ ದಾಳಿಯನ್ನು ಬಲವಾಗಿ ಖಂಡಿಸಿರುವ ಡಿಎಂಕೆ, “ಎಐಎಡಿಎಂಕೆ ಮತ್ತು ಬಿಜೆಪಿ ವ್ಯವಸ್ಥಿತವಾಗಿ ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದೊಂದು ರಾಜಕೀಯ ಪ್ರೇರಿತ ದಾಳಿ’ ಎಂದು ಆರೋಪಿಸಿದೆ.
ಹಳೇ ಇವಿಎಂ ಯಂತ್ರ ಬೇಡ: ಎಪ್ರಿಲ್ 6ರ ತಮಿಳುನಾಡು ಮತದಾನದ ವೇಳೆ 15 ವರ್ಷ ಮೇಲ್ಪಟ್ಟ ಇವಿಎಂ ಯಂತ್ರಗಳನ್ನು ಬಳಸಬಾರದು ಎಂದು ಕೋರಿ ಡಿಎಂಕೆ ಮದ್ರಾಸ್ ಹೈಕೋರ್ಟ್‌ನ ಮೆಟ್ಟಿಲೇರಿದೆ. ಪಕ್ಷದ ಸಂಘಟನ ಕಾರ್ಯದರ್ಶಿ ಆರ್.ಎಸ್. ಭಾರತಿ ಈ ಕುರಿತು ಅರ್ಜಿ ಸಲ್ಲಿಸಿದ್ದು, ಮತದಾನದ ಎಲ್ಲ ಬೂತ್‌ಗಳಲ್ಲೂ ಸಿಸಿಟಿವಿ ಅಳವಡಿಸಿ, ನೇರಪ್ರಸಾರದ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ವಲಯಾರ್ ಸಂತ್ರಸ್ತೆಯರ ತಾಯಿಗೆ “ಫ್ರಾಕ್’ ಚಿಹ್ನೆ : ಧರ್ಮದಾಮ್‌ನಲ್ಲಿ ಪಿಣರಾಯಿ ವಿಜಯನ್ ವಿರುದ್ಧ ಸ್ಪರ್ಧಿಸುತ್ತಿರುವ ವಲಯಾರ್‌ನ ಮೃತ ಸಂತ್ರಸ್ತೆಯರ ತಾಯಿಗೆ ಚುನಾವಣ ಆಯೋಗ “ಫ್ರಾಕ್’ ಚಿಹ್ನೆ ನೀಡಿದೆ. ತಮ್ಮ ಇಬ್ಬರು ಹೆಣ್ಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದ ಆರೋಪಿಗಳನ್ನು ಬಂಧಿಸಿಲ್ಲ ಎಂದು ಕೇರಳ ಸರಕಾರದ ವಿರುದ್ಧ ಇವರು ಅಸಮಾಧಾನಗೊಂಡಿದ್ದರು. ಈ ಕಾರಣಕ್ಕಾಗಿ ಸಿಎಂ ವಿರುದ್ಧ ಸೆಣಸುತ್ತಿದ್ದಾರೆ.
ಅಭ್ಯರ್ಥಿ ಹೆಸರಲ್ಲಿ ಮೂರು ಕಾರ್ಡ್ : ಅಕ್ರಮ ಮತದಾನ ಕಾರ್ಡ್‌ಗಳ ಹೆಚ್ಚಳ ವಿರುದ್ಧ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಚುನಾವಣ ಆಯೋಗಕ್ಕೆ ದೂರು ನೀಡಿದ್ದರು. ಆದರೆ ಈಗ ಯುಡಿಎಫ್ ಅಭ್ಯರ್ಥಿಯ ಹೆಸರಿನಲ್ಲೇ 3 ನಕಲಿ ಮತದಾನ ಕಾರ್ಡ್ ಇರುವುದನ್ನು ಎಲ್‌ಡಿಎಫ್ ಸಾಕ್ಷ್ಯ ಸಮೇತ ಜನತೆ ಮುಂದಿಟ್ಟಿದೆ. ಕೈಪಮಂಗಲಂ ಕ್ಷೇತ್ರದ ಅಭ್ಯರ್ಥಿ ಸೋಬಾ ಸುಬಿನ್, 3 ಕಾರ್ಡ್ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ.
ಚಾಂಡಿಗೆ ಕ್ಲೀನ್‌ಚಿಟ್: ಸೋಲಾರ್ ಹಗರಣದಲ್ಲಿ ಸಿಲುಕಿ ತನಿಖೆ ಎದುರಿಸುತ್ತಿದ್ದ ಕಾಂಗ್ರೆಸ್ ಮುಖಂಡ ಊಮನ್ ಚಾಂಡಿಗೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಜ್ಯ ಕ್ರೈಂ ಬ್ರ್ಯಾಂಚ್ ಕ್ಲೀನ್‌ಚಿಟ್ ನೀಡಿದೆ. ಸಾಕ್ಷ್ಯಾಧಾರ ಕೊರತೆಯಿಂದ ಆರೋಪಮುಕ್ತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.