ಚೆನ್ನೈ: ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಡಿಎಂಕೆ ಪಕ್ಷದ ಕಾರ್ಯಕರ್ತನನ್ನು ಬಂಧಿಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಕಣ್ಣನ್ ಬಂಧಿತ ಡಿಎಂಕೆಯ ಪಕ್ಷದ ಕಾರ್ಯಕರ್ತ.
ಇತ್ತೀಚೆಗೆ ಚೆನ್ನೈನ ಕೊಯಂಬೆಡು ಪ್ರದೇಶದ ಅಂಗಲಾ ಪರಮೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ ಉತ್ಸವವೊಂದರ ನಡೆದಿದೆ. ಈ ವೇಳೆ ಭಕ್ತರು ದೇವರಿಗೆ ಕಾಣಿಕೆಯಾಗಿ ಕೆಂಡದ ಮೇಲೆ ನಡೆಯುತ್ತಾರೆ. ಮಹಿಳಾ ಭಕ್ತರ ರಕ್ಷಣೆಗೆ ಸ್ಥಳದಲ್ಲಿ ಹತ್ತಾರು ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಸಶಸ್ತ್ರ ಮೀಸಲು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರಿಗೆ ವ್ಯಕ್ತಿಯೊಬ್ಬ ಲೈಂಗಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದಾನೆ.
ಕುಡಿದ ಮತ್ತಿನಲ್ಲಿದ್ದ ಕಣ್ಣನ್ ಎಂಬಾತ ಮಹಿಳಾ ಪೊಲೀಸ್ ಅಧಿಕಾರಿಗೆ ಲೈಂಗಿಕವಾಗಿ ಕಿರುಕುಳ ನೀಡಿ, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಗಮನಿಸಿದ ಇತರ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದಾರೆ. ಈ ವೇಳೆ ಡಿಎಂಕೆ ಪಕ್ಷದ ಇತರೆ ಕಾರ್ಯಕರ್ತರು ಅಡ್ಡಿ ಬಂದಿದ್ದಾರೆ. ಪೊಲೀಸರು ಮೊದಲು ಕಣ್ಣನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆ ಬಳಿಕ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 353, 354, ಮತ್ತು ತಮಿಳುನಾಡಿನ ಮಹಿಳೆಯರ ವಿರುದ್ಧ ಕಿರುಕುಳದ ಸಂರಕ್ಷಣೆ ಕಾಯಿದೆಯ ಸೆಕ್ಷನ್ 4 ರ ಅಡಿಯಲ್ಲಿ ದೂರು ದಾಖಲಿಸಿ ಬಂಧಿಸಿದ್ದಾರೆ.