Advertisement

ಡಿಕೆಶಿ ಬಂಧನ: ಬಿಜೆಪಿ ತಟಸ್ಥ ಧೋರಣೆ

11:42 PM Sep 13, 2019 | Team Udayavani |

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನ ನಂತರದ ಬೆಳವಣಿಗೆ ಹಾಗೂ ಇತ್ತೀಚೆಗೆ ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟ ನಡೆಸಿದ ಬೃಹತ್‌ ಪ್ರತಿಭಟನಾ ರ್ಯಾಲಿಯ ಪರಿಣಾಮವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ರಾಜ್ಯ ಬಿಜೆಪಿಯು ಸದ್ಯ ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಟಸ್ಥವಾಗಿ ಉಳಿಯಲು ನಿರ್ಧರಿಸಿದೆ.

Advertisement

ಪ್ರತಿಭಟನಾ ರ್ಯಾಲಿಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ನ ಪ್ರಭಾವಿ ನಾಯಕರು, ಪ್ರಮುಖ ಸ್ವಾಮೀಜಿಗಳ ಗೈರು ಹಾಜರಿಯನ್ನು ಗಮನಿಸಿರುವ ರಾಜ್ಯ ಬಿಜೆಪಿ ನಾಯಕರು ಈ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡದಿರಲು ಚಿಂತಿಸಿದ್ದಾರೆ. ಆ ಮೂಲಕ ಪಕ್ಷದ ವರ್ಚಸ್ಸಿಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಎಚ್ಚರಿಕೆಯ ನಡೆ ಅನುಸರಿಸಲು ಮುಂದಾಗಿದೆ.

ದೆಹಲಿಯಲ್ಲಿ ಪತ್ತೆಯಾದ ಹಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸುತ್ತಿದ್ದಂತೆ ಅವರ ಬೆಂಬಲಿಗರು, ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಪ್ರಕರಣ ಸಂಬಂಧ ಇಡಿ ಕಾರ್ಯ ವೈಖರಿಯನ್ನು ಖಂಡಿಸುವ ಜತೆಗೆ ಕೇಂದ್ರ ಸರ್ಕಾರ, ಪ್ರಧಾನಿ, ಕೇಂದ್ರ ಗೃಹ ಸಚಿವರ ವಿರುದ್ಧವೂ ಆರೋಪ ಮಾಡುವ ಮೂಲಕ ಬಂಧನ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಸಹ ಇದೇ ರೀತಿಯ ಆರೋಪ ಮುಂದುವರಿಸುವ ಮೂಲಕ ಜನಾಂದೋಲನ ರೂಪಿಸುವ ಪ್ರಯತ್ನ ನಡೆಸಿದ್ದರು.

ಹಳೇ ಮೈಸೂರು ಭಾಗದ ಕಾಂಗ್ರೆಸ್‌, ಜೆಡಿಎಸ್‌ ನಾಯಕರನ್ನೇ ಸೆಳೆದು ಪಕ್ಷ ಸಂಘಟನೆಗೆ ಒತ್ತು ನೀಡಿರುವ ಬಿಜೆಪಿಯು ಬದಲಾದ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರವೂ ಪತನವಾಗಿದ್ದು, ಬಿಜೆಪಿ ಸರ್ಕಾರ ರಚನೆಯಾಗಿದೆ. ಆ ಮೂಲಕ ಒಕ್ಕಲಿಗ ಮುಖ್ಯಮಂತ್ರಿಯಿದ್ದ ಸರ್ಕಾರ ಪತನಗೊಳಿಸಿದ ಅಪಖ್ಯಾತಿಯೂ ಬಿಜೆಪಿಗೆ ತಟ್ಟಲಿದೆ ಎಂಬ ಮಾತು ಪಕ್ಷದ ವಲಯದಲ್ಲೂ ಕೇಳಿಬಂದಿತ್ತು. ಅದರ ಬೆನ್ನಿಗೇ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ ಬಂಧನವಾಗಿದೆ. ಹಾಗಾಗಿ ರಾಜ್ಯದಲ್ಲಿ ಒಕ್ಕಲಿಗ ಸಮುದಾಯವನ್ನೇ ಕೇಂದ್ರ ಸರ್ಕಾರ ಗುರಿಯಾಗಿಸಿಕೊಂಡಿದೆ ಎಂಬ ಮಾತು ವ್ಯಾಪಕವಾಗಿ ಕೇಳಿಬಂದಿತ್ತು.

ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ರಾಮನಗರ, ಕನಕಪುರ ಸೇರಿ ಕೆಲವೆಡೆ ಪ್ರತಿಭಟನೆ ನಡೆದರೂ ಬಿಜೆಪಿ ಹೆಚ್ಚಿನ ಮಹತ್ವ ನೀಡಿರಲಿಲ್ಲ. ಯಾವಾಗ ಈ ಬೆಳವಣಿಗೆಗೆ ರಾಜಕೀಯ, ಜಾತಿ ಬಣ್ಣ ಆವರಿಸುತ್ತಿದ್ದಂತೆ ಬೇರೆ ಸ್ವರೂಪ ಪಡೆದುಕೊಳ್ಳಲಾರಂಭಿಸಿತು. ಡಿ.ಕೆ.ಶಿವಕುಮಾರ್‌ ಅವರನ್ನು ಬಂಧಿಸಿದ ಇಡಿ ಕಾರ್ಯವೈಖರಿ ಖಂಡನೆ ಜತೆಗೆ ಬಿಜೆಪಿ ರಾಷ್ಟ್ರೀಯ ನಾಯಕರ ಹೆಸರನ್ನು ಪ್ರಸ್ತಾಪಿಸಿ ಪ್ರತಿಭಟನೆ ನಡೆಸಲಾರಂಭಿಸುತ್ತಿದ್ದಂತೆ ಬಿಜೆಪಿಯು ಎಚ್ಚೆತ್ತುಕೊಂಡಿತು.

Advertisement

ತೀವ್ರತೆ ತಗ್ಗಿಸಲು ಪ್ರತಿ ಹೇಳಿಕೆ: ಬಿಜೆಪಿ ರಾಷ್ಟ್ರೀಯ ನಾಯಕರ ವಿರುದ್ಧ ಪ್ರತಿಪಕ್ಷಗಳ ನಾಯಕರು ಆರೋಪ ಮಾಡುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಆರೋಪಗಳಿಗೆ ಪ್ರತಿ ಹೇಳಿಕೆ ನೀಡುವಂತೆ ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ. ಅದರ ಬೆನ್ನಲ್ಲೇ ಬಿಜೆಪಿಯ ಒಕ್ಕಲಿಗ ನಾಯಕರು ತುಟಿ ಬಿಚ್ಚಲಾರಂಭಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸಚಿವರಾದ ಆರ್‌.ಅಶೋಕ್‌, ಸಿ.ಟಿ.ರವಿ ಅವರು ಪ್ರತಿ ಹೇಳಿಕೆ ನೀಡಿ ಡಿ.ಕೆ.ಶಿವಕುಮಾರ್‌ ಬಂಧನಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂಬುದನ್ನು ಪುನರುಚ್ಚರಿಸಿದರು. ಅದರಲ್ಲೂ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ತೀವ್ರ ವಾಗ್ಧಾಳಿ ನಡೆಸಿ ಪಕ್ಷದ ಪರ ನಿಂತರು. ಟ್ವಿಟ್ಟರ್‌ನಲ್ಲೂ ಟ್ವೀಟ್‌ ಸಂದೇಶದ ಮೂಲಕ ಚರ್ಚೆ ಹುಟ್ಟು ಹಾಕಿದರು. ಪ್ರತಿ ಹೇಳಿಕೆಗಳ ಮೂಲಕವೇ ಆರೋಪಗಳ ತೀವ್ರತೆ ತಗ್ಗಿಸುವಲ್ಲಿ ಬಿಜೆಪಿ ತುಸು ಯಶಸ್ವಿಯಾದಂತಾಯಿತು.

ತಟಸ್ಥ ಧೋರಣೆ: ಡಿ.ಕೆ.ಶಿವಕುಮಾರ್‌ ಬಂಧನ ಹಾಗೂ ನಂತರದ ಬೆಳವಣಿಗೆಗೆ ಸಂಬಂಧಪಟ್ಟಂತೆ ಸದ್ಯ ತಟಸ್ಥ ಧೋರಣೆ ಮುಂದುವರಿಸಲಾಗುವುದು. ಬಂಧನ ಖಂಡಿಸಿ ನಡೆದ ಪ್ರತಿಭಟನೆಯಿಂದ ಕಾಂಗ್ರೆಸ್‌, ಜೆಡಿಎಸ್‌ನ ಹಿರಿಯ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಜತೆಗೆ ಸಮುದಾಯದ ಪ್ರಮುಖ ಸ್ವಾಮೀಜಿಗಳು, ರಾಜ್ಯ ಒಕ್ಕಲಿಗ ಸಂಘವೂ ದೂರ ಉಳಿದಿದೆ. ಒಕ್ಕಲಿಗ ಸಮುದಾಯದಲ್ಲೂ ಈ ಬಗ್ಗೆ ಭಿನ್ನ ನಿಲುವಿದೆ. ಹಾಗಾಗಿ ಈ ಬೆಳವಣಿಗೆಯಿಂದ ಪಕ್ಷದ ವರ್ಚಸ್ಸಿಗೆ ಯಾವುದೇ ಹಾನಿಯಾಗದು ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟ ಕಾನೂನಾತ್ಮಕ ವಿಚಾರಗಳಲ್ಲಿ ರಾಜಕೀಯ, ಜಾತಿ ತರುವುದು ಸರಿಯಲ್ಲ. ಬದಲಿಗೆ ಕಾನೂನಾತ್ಮಕ ಹೋರಾಟ ಮಾಡಬೇಕು. ಈ ರೀತಿಯ ಒತ್ತಡಗಳಿಗೆ ಯಾರೂ ಬಗ್ಗುವುದಿಲ್ಲ. ಹಿಂದೆಯೂ ಸಾಕಷ್ಟು ಮಂದಿಯ ಬಂಧನ, ವಿಚಾರಣೆಯಾಗಿದೆ. ಅದಕ್ಕೆಲ್ಲಾ ಹಿಂದಿನ ಪ್ರಧಾನಿಗಳು ಇತರೆ ನಾಯಕರ ಮೇಲೆ ಆರೋಪ ಹೊರಿಸುವುದು ಸರಿ ಎನಿಸದು. ಜನರು ಮೂರ್ಖರಲ್ಲ. ಜನರಿಗೆ ವಾಸ್ತವದ ಅರಿವಿದೆ.
-ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next