Advertisement

ಎಲ್ಲ ಸೋಂಕಿತರಿಗೂ ಉಚಿತ ಚಿಕಿತ್ಸೆಗೆ ಡಿಕೆಶಿ ಆಗ್ರಹ

07:33 AM Jun 26, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ವಿಚಾರದಲ್ಲಿ ಬಡವರು, ಶ್ರೀಮಂತರು, ಅಧಿಕಾರಿಗಳು, ಸಾಮಾನ್ಯ ಜನರು ಎಂದು ಭೇದ-ಭಾವ ಮಾಡದೇ ಎಲ್ಲರಿಗೂ ಸಮಾನವಾಗಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌  ಸರಕಾರಕ್ಕೆ ಆಗ್ರಹಿಸಿದ್ದಾರೆ. ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಸಿಗಬೇಕು ಎಂಬ ದೃಷ್ಟಿಯಿಂದ ಆರೋಗ್ಯ ಕರ್ನಾಟಕ ಯೋಜನೆಯನ್ನು  ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿತ್ತು.

Advertisement

ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತ ಯೋಜನೆ ತಂದಿದೆ. ಇವೆಲ್ಲ ಇದ್ದರೂ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ 19 ಚಿಕಿತ್ಸೆಗೆ ದರ ನಿಗದಿ ಮಾಡಿದೆ. ಸರ್ಕಾರ ಶಿಫಾರಸು ಮಾಡುವ  ಸೋಂಕಿತರಿಗೆ ವೆಂಟಿಲೇಟರ್‌ ರಹಿತ ಐಸಿಯು ವಾರ್ಡ್‌ಗೆ 8500, ವೆಂಟಿಲೇಟರ್‌ ಇರುವ ವಾರ್ಡ್‌ಗೆ 10 ಸಾವಿರ ಜತೆಗೆ ವೈಯಕ್ತಿಕ ವಾರ್ಡ್‌ಗೆ ಶೇ.25 ರಷ್ಟು ಹೆಚ್ಚುವರಿ ಶುಲ್ಕ ನಿಗದಿಪಡಿಸಿದೆ. ಇನ್ನು ಖಾಸಗಿ ಆಸ್ಪತ್ರೆಗೆ ನೇರ ದಾಖಲಾಗುವ  ರೋಗಿಗಳಿಗೆ 25 ಸಾವಿರ ನಿಗದಿ ಮಾಡಿದೆ. ಮೊದಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಜನ ಈ ಹಣವನ್ನು ಎಲ್ಲಿಂದ ತರಬೇಕು? ಸರಕಾರ ಅವರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿದೆ ಎಂದು ವಾಗ್ಧಾಳಿ ನಡೆಸಿದರು.

ಬೀದಿಗಿಳಿದು  ಹೋರಾಟ: ಸರ್ಕಾರ ಲಾಕ್‌ ಡೌನ್‌ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿ ಇದುವರೆಗೂ ಪರಿಹಾರ ನೀಡಿಲ್ಲ. ಮಕ್ಕಳಿಗೆ ಆನ್‌ ಲೈನ್‌ ಶಿಕ್ಷಣ ನೀಡುವ ವಿಚಾರದಲ್ಲಿ ಸರ್ಕಾರದಲ್ಲಿನ  ಗೊಂದಲದಿಂದ ಪಾಲಕರು ಚಿಂತಿತರಾಗಿದ್ದಾರೆ. ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ.

ಹೀಗಾಗಿ ಸರ್ಕಾರದ ವಿರುದಟಛಿ ಜೂನ್‌ 29 ರಂದು ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಹೇಳಿದರು.  ಸರ್ಕಾರ ಕೇಳಿರುವ ದಾಖಲೆ ಒದಗಿಸಲು ಸಾಧ್ಯವಾಗದೆ ಆಟೋ, ಟ್ಯಾಕ್ಸಿ ಚಾಲಕರು ಪರದಾಡುತ್ತಿದ್ದಾರೆ. ಇವರ ಸಂಕಷ್ಟಕ್ಕೆ ಹಾಗೂ ಅವರ ಕುಂದು ಕೊರತೆಗೆ ಧ್ವನಿಯಾಗಲು ಬ್ಲಾಕ್‌ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕಾಂಗ್ರೆಸ್‌ ಪಕ್ಷದಿಂದ ವಿಶೇಷ ಘಟಕ ಆರಂಭಿಸಲು  ತೀರ್ಮಾನಿಸಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next