Advertisement

ತೈಲ ಬೆಲೆ ಏರಿಕೆಗೆ ಡಿಕೆಶಿ ಆಕ್ರೋಶ

05:30 AM Jun 13, 2020 | Lakshmi GovindaRaj |

ಬೆಂಗಳೂರು: ಆರು ದಿನಗಳಿಂದ ನಿರಂತರವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಗಣನೀಯವಾಗಿ ಏರುತ್ತಲೇ ಬಂದಿದ್ದು ಕೋವಿಡ್‌ 19 ಸಂಕಷ್ಟ ಪರಿಸ್ಥಿತಿಯಲ್ಲಿ ನರಳುತ್ತಿರುವ ಜನಸಾಮಾನ್ಯರ ಮೇಲೆ ಹೊರೆ ಬೀಳುತ್ತಿರುವುದು  ಆತಂಕಕಾರಿ ಬೆಳವಣಿಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಳೆದ ಭಾನುವಾರದಿಂದ ಇವತ್ತಿನವರೆಗೂ ನಿತ್ಯ ಇಂಧನ ಬೆಲೆ ಏರಿಕೆಯಾಗುತ್ತಲೇ ಇದೆ. ಆರು  ದಿನಗಳಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ 3.31 ರೂ. ಹಾಗೂ ಡೀಸೆಲ್‌ ಪ್ರತಿ ಲೀಟರ್‌ಗೆ 3.42 ರೂ. ಹೆಚ್ಚಾಗಿದೆ.

Advertisement

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 76.57 ರೂ. ಹಾಗೂ ಡೀಸೆಲ್‌ ದರ 69.22 ರೂ. ಆಗಿದೆ. ಸಂಕಷ್ಟ ಸಮಯದಲ್ಲಿ ಜನರಿಗೆ ಸ್ಪಂದಿಸಬೇಕಾದ ಸರ್ಕಾರ ಅದರ ಬದಲು ಇಂಧನ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ದೂರಿದ್ದಾರೆ. 2011ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ  ತೈಲಬೆಲೆ ಪ್ರತಿ ಬ್ಯಾರೆಲ್‌ ಗೆ 110 ಅಮೆರಿಕನ್‌ ಡಾಲರ್‌ ಇತ್ತು. ಈಗ ಪ್ರತಿ ಬ್ಯಾರೆಲ್‌ ಗೆ 30 ಅಮೆರಿಕನ್‌ ಡಾಲರ್‌ ಮಾತ್ರ. ಇದೆ. ಪ್ರತಿ ಬ್ಯಾರೆಲ್‌ ಬೆಲೆ ಶೇ.70 ರಷ್ಟು ಅಂದರೆ 80 ಅಮೆರಿಕನ್‌ ಡಾಲರ್‌ ನಷ್ಟು ಇಳಿದಿದೆ.

ಆದರೆ ಗ್ರಾಹನಿಗೆ  ಸಿಗುತ್ತಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಮಾತ್ರ ಇಳಿದಿಲ್ಲ. ಆಗಲೂ ಪೆಟ್ರೋಲ್‌ ಬೆಲೆ 70 ರೂ. ಆಸುಪಾಸಿನಲ್ಲಿತ್ತು. ಈಗಲೂ ಅಷ್ಟೇ ಇದೆ. ಕಚ್ಚಾತೈಲ ಬೆಲೆ ಕುಸಿತದ ನಯಾ ಪೈಸೆ ಲಾಭ ಗ್ರಾಹಕನಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇಂಧನ ಬೆಲೆ ಏರಿಕೆ ಕೈಗಾರಿಕೆ, ಸಣ್ಣ ಹಾಗೂ ಮಧ್ಯಮ ಹಂತದ ಉದ್ದಿಮೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ತಕ್ಷಣವೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಅಂತಾರಾಷ್ಟ್ರೀಯ ತೈಲಬೆಲೆ  ಇಳಿಕೆ  ಪ್ರಮಾಣಕ್ಕೆ ಅನುಗುಣವಾಗಿ ಕಡಿಮೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next