ಬೆಂಗಳೂರು: ಕೆಪಿಸಿಸಿ ಅಧ್ಯಕ್ಷಗಾದಿಗಾಗಿ ಸಿದ್ದರಾಮಯ್ಯ ಬಣದಿಂದ ಸಾಕಷ್ಟು ಹೋರಾಟ ಮಾಡಿ ಲಿಂಗಾಯತ ಸಮುದಾಯದ ಮೇಲೆ ಪ್ರಭಾವ ಬೀರಿದ್ದ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ನಿವಾಸಕ್ಕೆ ತೆರಳಿ ಕೆಪಿಸಿಸಿ ನಿಯೋಜಿತ ಅಧ್ಯಕ್ಷ. ಡಿ.ಕೆ. ಶಿವಕುಮಾರ್ ಐಕ್ಯತೆಯ ಮಂತ್ರ ಪಠಿಸಿದರು. ನಮ್ಮಲ್ಲಿನ ಗುಂಪುಗಾರಿಕೆಗೆ ಇತಿಶ್ರೀ ಹಾಡಿ ಪಕ್ಷ ಸಂಘಟನೆಗೆ ಒತ್ತು ಕೊಡುತ್ತೇವೆ ಎಂದು ಇಬ್ಬರೂ ನಾಯಕರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಎಂ.ಬಿ. ಪಾಟೀಲ್, ಡಿ.ಕೆ.ಶಿವಕುಮಾರ್‌ಗೆ ಪೈಪೋಟಿ ನೀಡಿದ್ದರಾದರೂ ಅದು ಫಲ ನೀಡಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ತಮಗೆ ಪೈಪೋಟಿ ನೀಡಿದವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ. ಹೀಗಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಎಲ್ಲಾ ನಾಯಕರ ಅಭಿಪ್ರಾಯ ಸಂಗ್ರಹ ಹಾಗೂ ವಿಶ್ವಾಸ ಗಳಿಕೆಗೆ ಕಸರತ್ತು ನಡೆಸಿರುವ ಅವರು ಸೋಮವಾರ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ಭೇಟಿ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂ.ಬಿ.ಪಾಟೀಲ್, ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕಗೊಂಡಿದ್ದಾರೆ. ಇಂದು ನಮ್ಮ ನಿವಾಸಕ್ಕೆ ಆಗಮಿಸಿದ್ದು, ಇದೊಂದು ಸೌಹಾರ್ದಯುತ ಭೇಟಿಯಾಗಿದೆ. ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಲು ಸಹಕಾರ ಕೇಳಿದ್ದಾರೆ. ಶಿವಕುಮಾರ್‌ಗೆ ಸಂಪೂರ್ಣ ಸಹಕಾರ ನೀಡಿ ಒಟ್ಟಾಗಿ ಕೂಡಿ ಪಕ್ಷವನ್ನು ಬಲಗೊಳಿಸುವುದಾಗಿ ಹೇಳಿದರು.
ಪಕ್ಷದಲ್ಲಿನ ಗುಂಪುಗಾರಿಕೆ ತಡೆಯುವ ನಿಟ್ಟಿನಲ್ಲಿ ಈ ಭೇಟಿ ಅನುಕೂಲವಾಗಲಿದೆ. ಭೇಟಿಯಿಂದ ಕಾರ್ಯಕರ್ತರಿಗೂ ಉತ್ತಮ ಸಂದೇಶ ಕೊಟ್ಟಂತಾಗುತ್ತದೆ. ಶಿವಕುಮಾರ್ ಸೌಹಾರ್ದಯುತವಾಗಿ ತಮ್ಮನ್ನು ಭೇಟಿ ಮಾಡಿದ್ದಾರೆ. ನಮ್ಮ ಸಹಕಾರ ಇದ್ದು ಎಲ್ಲರೂ ಒಗ್ಗಟ್ಟಾಗಿ ದುಡಿದು ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮೆಲ್ಲರ ಉದ್ದೇಶ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ನಾಯಕರಿದ್ದು, ಎಲ್ಲರೂ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಪಕ್ಷ ಸಂಘಟನೆಗೆ ಹೆಚ್ಚು ಬಲ ನೀಡಬೇಕಿದೆ. ನಾನು ಹಾಗೂ ಸತೀಶ್ ಜಾರಕಿಹೊಳಿ ಸೇರಿ ಎಲ್ಲರೂ ಒಟ್ಟಾಗಿ ಪಕ್ಷವನ್ನು ಬಲಗೊಳಿಸುತ್ತೇವೆ ಎಂದು ಎಂ.ಬಿ.ಪಾಟೀಲ್ ಹೇಳಿದರು. ಡಿ.ಕೆ.ಶಿವಕುಮಾರ್ ಮಾತನಾಡಿ, ನಾನು, ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಎಂ.ಬಿ.ಪಾಟೀಲ್ ನನ್ನ ಪರವಾಗಿಯೇ ಬೆಂಬಲಿಸಿದ್ದರು.
ನಮಗೆ ವ್ಯಕ್ತಿಗತ ಭಿನ್ನಾಭಿಪ್ರಾಯಗಳಿಲ್ಲ. ವೈಯಕ್ತಿಕ ಏನೇ ಇರಲಿ, ಎಲ್ಲವನ್ನೂ ಬದಿಗೊತ್ತಿ ಪಕ್ಷ ಕಟ್ಟುತ್ತೇವೆ. ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶ ಎಂದು ಹೇಳಿದರು. ಇದೇ ವೇಳೆ, ಪದಗ್ರಹಣ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಇನ್ನೂ ಚರ್ಚೆಯಾಗಬೇಕಿದೆ ಎಂದು ಶಿವಕುಮಾರ್ ಹೇಳಿದರು. ಸಂಜೆ ರಾಮಲಿಂಗಾ ರೆಡ್ಡಿ, ಎಂ.ಕೃಷ್ಣಪ್ಪ ಅವರ ಮನೆಗಳಿಗೂ ತೆರಳಿ ಅಭಿನಂದನೆ ಸಲ್ಲಿಸಿದರು.