ಕಲಬುರಗಿ: ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ನನ್ನ ಮಿತ್ರ ಅಲ್ಲ. ಒಂದು ಪಕ್ಷದ ಅಧ್ಯಕ್ಷ ಅಷ್ಟೇ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷ ಬೇರೆ, ಅವರ (ಡಿಕೆಶಿ) ಪಕ್ಷ ಬೇರೆ. ಪ್ರತಿಜ್ಞಾ ಕಾರ್ಯಕ್ರಮಕ್ಕೆ ಮಹತ್ವ ಕೊಡಬೇಕಿಲ್ಲ. ಡಿಕೆಶಿ ಶಕ್ತಿ ಏನಿದೆ ಅಂತಾ ನನಗೆ ಗೊತ್ತಿದೆ ಎಂದರು.
ನಾನು ಉಪ ಮುಖ್ಯಮಂತ್ರಿ ಹುದ್ದೆ ಕೇಳಿಲ್ಲ. ಅದರ ಬೇಡಿಕೆಯೂ ಇಟ್ಟಿಲ್ಲ. ಎಲ್ಲವೂ ಮಾಧ್ಯಮಗಳ ಸೃಷ್ಟಿ. ಚಿಕ್ಕಮಗಳೂರಿನಲ್ಲಿ ಸಚಿವರು ರಹಸ್ಯ ಸಭೆ ಮಾಡಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಆರ್. ಅಶೋಕ ಜನ್ಮದಿನಕ್ಕಾಗಿ ಕೆಲವರು ಸೇರಿದ್ದರು. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಮ್ಮ ಮನೆಯ ಕಾಂಪೌಂಡ್ ಒಳಗೆ ಕುಳಿತು ಊಟ ಮಾಡಲು ಕರ್ಫ್ಯೂ ಅನ್ವಯವಾಗಲ್ಲ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗಿದೆ. ಇನ್ನೂ ಮೂರು ವರ್ಷಗಳ ಕಾಲ ಅವರೇ ಮುಂದುವರಿಯುತ್ತಾರೆ ಎಂದರು.
ಆಲಮಟ್ಟಿ ಡ್ಯಾಂ ಎತ್ತರವನ್ನು 519.60 ಮೀಟರ್‌ದಿಂದ 524.26 ಮೀಟರ್‌ಗೆ ಎತ್ತರಿಸುವ ಕುರಿತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಕೋರಲಾಗಿದೆ. ಶೀಘ್ರವೇ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಲಾಗುವುದು. ಮಹದಾಯಿ ಯೋಜನೆಯ ಕಾಮಗಾರಿಯ ಡಿಪಿಆರ್ ಅನುಮೋದನೆಗೂ ಕೇಂದ್ರಕ್ಕೆ ಕಳುಹಿಸಿ ಕೊಡಲಾಗಿದೆ. ಕೋವಿಡ್ 19 ಹಾವಳಿ ಕಡಿಮೆ ಆದ ಮೇಲೆ ದೆಹಲಿಗೆ ತೆರಳಿ ಅನುಮೋದನೆಗೆ ಮನವಿ ಸಲ್ಲಿಸಲಾಗುವುದು.
-ರಮೇಶ ಜಾರಕಿಹೊಳಿ, ಜಲ ಸಂಪನ್ಮೂಲ ಸಚಿವ