Advertisement
15 ಕ್ಷೇತ್ರಗಳ ಪೈಕಿ ಹಳೇ ಮೈಸೂರು ಭಾಗದ ಏಳು ಕ್ಷೇತ್ರಗಳಲ್ಲಿ ಒಕ್ಕಲಿಗ ಪ್ರಾಬಲ್ಯವಿದ್ದು ಅಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದರೆ ಬಿಜೆಪಿಗೆ ಅನುಕೂಲ. ಇದನ್ನು ತಪ್ಪಿಸಲು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡರೆ ಸೂಕ್ತ ಎಂಬುದು ಡಿ.ಕೆ.ಶಿವಕುಮಾರ್ ಲೆಕ್ಕಾಚಾರ ಎಂದು ಹೇಳಲಾಗಿದೆ.
Related Articles
Advertisement
ಉಳಿದಂತೆ ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆ. ಇಲ್ಲಿಯೂ ಎರಡೂ ಪಕ್ಷಗಳು ಒಮ್ಮತದ ಅಭ್ಯರ್ಥಿ ಹಾಕಿದರೆ ಬಿಜೆಪಿಯನ್ನು ಎದುರಿಸ ಬಹುದು. ಜತೆಗೆ, ಕಾಗವಾಡ, ಅಥಣಿ, ಗೋಕಾಕ್, ರಾಣಿಬೆನ್ನೂರು, ವಿಜಯನಗರ, ಹಿರೇಕೆರೂರು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲ ಪಡೆಯಬಹುದು ಎಂದು ಸಂದೇಶ ರವಾನಿ ಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರ ಬೆಂಬಲವೂ ಇದೆ ಎಂದು ಹೇಳಲಾಗಿದೆ.
ಜೆಡಿಎಸ್‌ನಿಂದ ಕಾಂಗ್ರೆಸ್ ಅಂತರ ಕಾಯ್ದು ಕೊಂಡರೆ ಬಿಜೆಪಿಯವರು ಜೆಡಿಎಸ್‌ಗೆ ಹತ್ತಿರ ವಾಗಬಹುದು. ಆಗ, ಬಿಜೆಪಿ ಬೆಳೆಯಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅದರ ಬದಲು ತೀರಾ ಸೀಟು ಹಂಚಿಕೆ ಇಲ್ಲದಿ ದ್ದರೂ ಮೌಖೀಕ ಹೊಂದಾಣಿಕೆಯಡಿ ಹೋದರೆ ಬಿಜೆಪಿ ಕಟ್ಟಿ ಹಾಕಬಹುದು ಎಂಬುದು ಇವರ ಲೆಕ್ಕಾಚಾರ. ಉಪ ಚುನಾವಣೆಯಲ್ಲಿ ಒಂದೊಮ್ಮೆ ಬಿಜೆಪಿ ಕಡಿಮೆ ಸ್ಥಾನ ಗೆದ್ದರೆ ಮತ್ತೆ ಜೆಡಿಎಸ್-ಕಾಂಗ್ರೆಸ್ ಒಂದಾಗಬಹುದು ಎಂಬ ಆಸೆಯೂ ಕೆಲವು ಕಾಂಗ್ರೆಸ್ ನಾಯಕರಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ ಎಂದು ನೋಡಬೇಕಾಗಿದೆ.
ರಾಜಕೀಯ ಕಾರ್ಯತಂತ್ರ ಏನು?: ಯಶವಂತಪುರದಲ್ಲಿ ಎಸ್.ಟಿ.ಸೋಮೇಶರ್, ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ, ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್, ಹುಣಸೂರಿನಲ್ಲಿ ಎಚ್.ವಿಶ್ವನಾಥ್, ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್, ಹೊಸಕೋಟೆಯಲ್ಲಿ ಎಂ.ಟಿ.ಬಿ.ನಾಗರಾಜ್, ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಗೋಪಾಲಯ್ಯ, ವಿಜಯನಗರದಲ್ಲಿ ಆನಂದ್‌ಸಿಂಗ್ ಕ್ಷೇತ್ರಗಳಲ್ಲಿ ಅನರ್ಹತೆಗೊಂಡವರಿಗೆ “ಟಕ್ಕರ್’ ನೀಡುವುದು ವೈಯಕ್ತಿಕವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಪ್ರಶ್ನೆ. ಇಲ್ಲಿ ಜೆಡಿಎಸ್‌ನ ಸಹಕಾರ ಪಡೆದರೆ ತಮ್ಮ ಗುರಿ ಸಾಧನೆ ಸುಲಭ ಎಂಬುದು ಅವರ ಕಾರ್ಯತಂತ್ರ. ಹೀಗಾಗಿಯೇ ಈ ಕುರಿತು ಜೆಡಿಎಸ್‌ನ ಮಾಜಿ ಸಚಿವರ ಜತೆ ರಹಸ್ಯ ಮಾತುಕತೆ ನಡೆಸಿ ಅಲ್ಲಿಂದಲೇ ದೇವೇಗೌಡರು ಹಾಗೂ ಕುಮಾರಸ್ವಾಮಿಯವರನ್ನು ಸಂಪರ್ಕಿಸಿದ್ದಾರೆಂದು ಹೇಳಲಾಗಿದೆ.
ಜೆಡಿಎಸ್ ಜತೆ ಮೈತ್ರಿಗೆ ಆಕ್ಷೇಪವಿಲ್ಲಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನ ಮಾಡಿದರೆ ಆಕ್ಷೇಪವಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆಯಾಗಿಲ್ಲ. ಆ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗಾಗಲೇ ಮೈತ್ರಿ ಮಾಡಿಕೊಂಡಾಗ ಆಗಿರುವ ಬೆಳವಣಿಗೆಗಳನ್ನು ಪಕ್ಷದ ಹೈಕಮಾಂಡ್ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತದೆ. ಹೀಗಾಗಿ ಈ ಬಗ್ಗೆ ನನ್ನ ವೈಯಕ್ತಿಯ ಅಭಿಪ್ರಾಯ ಮುಖ್ಯವಾಗುವುದಿಲ್ಲ ಎಂದು ಹೇಳಿದರು. ಇದೇ ವೇಳೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಾವು ಬಿಜೆಪಿ ಸೇರುವ ಬಗ್ಗೆ ಪ್ರಸ್ತಾಪ ಮಾಡಿರುವುದನ್ನು ತಳ್ಳಿ ಹಾಕಿರುವ ಅವರು, ಗಾಳಿ ಸುದ್ದಿಗಳನ್ನು ನಂಬುವುದು ಬೇಡ. ಯೋಗೇಶ್ವರ್ ಜತೆ ಸ್ನೇಹ ಇರುವುದು ನಿಜ. ಅವರ ಜೊತೆ ಚಹಾ, ತಿಂಡಿ ತಿಂದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಾವು ಕಾಂಗ್ರೆಸ್ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರಾದರೂ ಬಂದರೆ ಸ್ವಾಗತಿಸುತ್ತೇವೆ ಎಂದರು. ಉಪ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಬೆಂಬಲ ಕೋರುತ್ತೇವೆ. ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರು ಸುಮಲತಾ ಪರವಾಗಿ ಕೆಲಸ ಮಾಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಕೇಳುತ್ತೇವೆಂದು ಹೇಳಿದರು. * ಎಸ್. ಲಕ್ಷ್ಮಿನಾರಾಯಣ