ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಗಾದಿ ಯಾರ ಪಾಲಾಗುವುದೋ ಎಂದು ಎದುರು ನೋಡುತ್ತಿದ್ದ ಜೆಡಿಎಸ್‌ಗೆ, ಡಿ.ಕೆ.ಶಿವಕುಮಾರ್‌ಗೆ ಪಟ್ಟ ದೊರೆತಿ ರುವುದು ಸ್ವಲ್ಪ ಮಟ್ಟಿಗೆ ಆತಂಕ ಮೂಡಿಸುವುದರ ಜತೆಗೆ ಪಕ್ಷ ಸಂಘಟನೆಗೆ ಬದಲಿ ಕಾರ್ಯತಂತ್ರ ರೂಪಿಸಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ಸಿಕ್ಕಿರುವುದರಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಭದ್ರಕೋಟೆ ಕಾಯ್ದುಕೊಳ್ಳುವ ಸವಾಲು ಎದುರಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿದ್ದವರ ನೇತೃತ್ವದಲ್ಲಿ ವಿಧಾನಸಭೆ ಚುನಾವಣೆಗೆ ಹೋಗಿ ಬಹುಮತ ಬಂದರೆ ಸಹಜವಾಗಿ ಮುಖ್ಯಮಂತ್ರಿ ರೇಸ್‌ನಲ್ಲಿ ಅವರೂ ಸ್ಪರ್ಧಿಯಾಗುವುದರಿಂದ ಜೆಡಿಎಸ್‌ಗೆ ಇದೀಗ ಸಮುದಾಯದ ಮತ “ಶಿಫ್ಟ್’ ಆಗುತ್ತಾ ಎಂಬ ಆತಂಕ ಕಾಡುವಂತಾಗಿದೆ. ಹಳೇ ಮೈಸೂರು ಭಾಗದಲ್ಲಿ ಅದರಲ್ಲೂ, ಪ್ರಬಲ ಒಕ್ಕಲಿಗ ಸಮುದಾಯದ ಇಡಗಂಟು ಬೆಂಬಲ ದಿಂದ ಕಿಂಗ್ ಮೇಕರ್ ಆಗುತ್ತಿದ್ದ ಜೆಡಿಎಸ್‌ಗೆ, ಒಕ್ಕಲಿಗ ಸಮುದಾಯದವರೇ ಆದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹೊಸ ತಂತ್ರಗಾರಿಕೆಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗ ಳೂರು ನಗರ , ಗ್ರಾಮಾಂತರ, ಬಿಬಿಎಂಪಿ, ತುಮ ಕೂರು, ಮಂಡ್ಯ, ಮೈಸೂರು, ಚಾಮರಾಜನಗರ , ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಒಕ್ಕಲಿಗರ ಪ್ರಭಾವ ಇರುವುದರಿಂದ ಆ ಭಾಗಗಳಲ್ಲಿ ಜೆಡಿಎಸ್‌ಗೆ ಸವಾಲು ಎದುರಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪೈಕಿ ಯಾವ ಕಡೆಗೆ ಹೋಗಬೇಕು ಎಂದು ಮುಖ ಮಾಡಿದ್ದ ಜೆಡಿಎಸ್ ಶಾಸಕರು, ಇದೀಗ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್‌ನ್ನು ಆಯ್ಕೆ ಮಾಡಿಕೊಂಡರೆ, ಜೆಡಿಎಸ್‌ಗೆ ತಮ್ಮವರನ್ನು ಹಿಡಿದಿಟ್ಟುಕೊಳ್ಳಬೇಕಾಗುತ್ತದೆ.
ಹೀಗಾಗಿ, ಪಕ್ಷ ಸಂಘಟನೆಗಾಗಿ ಜೆಡಿಎಸ್ ಕಾರ್ಯತಂತ್ರ ಬದಲಿಸಿಕೊಳ್ಳಲು ಇತರ ಸಮುದಾಯಗಳತ್ತ ಚಿತ್ತ ಹರಿಸಬೇಕಾಗಿದೆ. ಹೊಣೆಗಾರಿಕೆ ವಿಚಾರದಲ್ಲೂ ನಿಲುವು ಬದಲಾಯಿಸಿಕೊಳ್ಳಬೇಕಿದೆ. ಈಗಾಗಲೇ ಶಾಸಕ ಜಿ.ಟಿ.ದೇವೇಗೌಡ ಪಕ್ಷ ದಿಂದ ಮಾನಸಿಕವಾಗಿ ದೂರವೇ ಸಾಗಿದ್ದಾರೆ. ಮಧು ಬಂಗಾರಪ್ಪ ಪಕ್ಷ ಬಿಡುವ ಯೋಚನೆಯಲ್ಲಿ ದ್ದಾರೆ. ಇಂತಹ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿವ ಹಿನ್ನೆಲೆಯಲ್ಲಿ ಪಕ್ಷದ ಒಕ್ಕಲಿಗ ಮುಖಂಡರು ಕಾಂಗ್ರೆಸ್‌ನತ್ತ ಕಣ್ಣು ಹಾಯಿಸಿದರೆ ಕಷ್ಟವಾಗಬಹುದು.
ಜೋಡೆತ್ತು ಜಿದ್ದಾಜಿದ್ದಾ?: ಕಳೆದ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್-ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ನಂತರ ಅವರ ಸಂಪುಟದಲ್ಲಿ ಡಿ.ಕೆ.ಶಿವಕುಮಾರ್ ಸಚಿವ ರಾಗಿ ಕೆಲಸ ಮಾಡಿದರು. ನಂತರ ಎದುರಾದ ಉಪ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಜೋಡೆತ್ತುಗಳ ರೀತಿ ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದರು. ಸಮ್ಮಿಶ್ರ ಸರ್ಕಾರ ಪತನದ ನಂತರವೂ ಇಬ್ಬರ ಬಾಂಧವ್ಯ ಮುಂದುವರಿ ದಿತ್ತು. ಇದೀಗ ಕೆಪಿಸಿಸಿ ಅಧ್ಯಕ್ಷ ಪಟ್ಟ ಶಿವಕುಮಾರ್‌ಗೆ ಒಲಿದಿರುವುದರಿಂದ ಮುಂದೆ ಇಬ್ಬರ ರಾಜಕೀಯ ಹೋರಾಟ ಜಿದ್ದಾಜಿದ್ದಿನ ಸ್ವರೂಪ ಪಡೆಯುತ್ತಾ ಅಥವಾ ಮುಂದುವರಿ ಯುತ್ತಾ ಎಂದು ನೋಡಬೇಕಾಗಿದೆ.
* ಎಸ್. ಲಕ್ಷ್ಮಿನಾರಾಯಣ