ಲಕ್ಷ್ಮೇಶ್ವರ: ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರು ತಮ್ಮ ಹುಟ್ಟುಹಬ್ಬದ ನಿಮಿತ್ತ ಬುಧವಾರ ಇಲ್ಲಿನ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿ, ಲಿಂ.ಜ.ವೀರಗಂಗಾಧರರ ಕತೃì ಗದ್ದುಗೆಯ ದರ್ಶನ ಪಡೆದರು.
ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಡೊಳ್ಳು ವಾದ್ಯಗಳ ಮೆರವಣಿಗೆಯೊಂದಿಗೆ ನೂರಾರು ಅಭಿಮಾನಿಗಳು, ಮುಖಂಡರು ಡಿಕೆಶಿಯನ್ನು ಬರಮಾಡಿಕೊಂಡರು. ಪಟ್ಟಾಧ್ಯಕ್ಷರಾದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಸಚಿವರನ್ನು ಸ್ವಾಗತಿಸಿದರು.
ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯ ಮುಗಿಸಿ, 15 ನಿಮಿಷ ಜ್ಞಾನಾಸಕ್ತರಾಗಿ ಕತೃ ಗದ್ದುಗೆ ಮುಂದೆ ಕುಳಿತರು. ಬಳಿಕ, ಮುಕ್ತಿಮಂದಿರ ಪಟ್ಟಾಧ್ಯಕ್ಷರು, ಸಚಿವರಿಗೆ ಹುಟ್ಟುಹಬ್ಬದ ಕಾಣಿಕೆಯಾಗಿ ಚಿನ್ನದ ಉಂಗುರ ತೊಡಿಸಿ, ಶುಭ ಹಾರೈಸಿದರು.
ನಂತರ ಶ್ರೀಗಳೊಂದಿಗೆ ತ್ರೀಕೋಟಿ ಲಿಂಗ ಸ್ಥಾಪನೆ ಪ್ರದೇಶ ವೀಕ್ಷಿಸಿದರು. ತ್ರಿಕೋಟಿ ಲಿಂಗ ಸ್ಥಾಪನೆಗೆ ಎಲ್ಲ ರೀತಿ ಸಹಾಯ, ಸಹಕಾರ ನೀಡುವುದಾಗಿ ಡಿಕೆಶಿ ಭರವಸೆ ನೀಡಿದರು. ನಂತರ, ಡಿಕೆಶಿ ಅಭಿಮಾನಿಗಳು ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು.
ಈ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿ, “ಇದು ನನ್ನ ಇಷ್ಟದ ಕ್ಷೇತ್ರವಾಗಿದ್ದು, ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡಿದ್ದೇನೆ. ಉಪ ಚುನಾವಣೆ ನಡೆದಿರುವ ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರದಲ್ಲಿ ಮತದಾರರು ನಮ್ಮನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಎರಡೂ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿ ಶಾಲಿಗೆ ಹತ್ತಿದ ದೀಪ: ಈ ಮಧ್ಯೆ, ಡಿಕೆಶಿಯವರು ಗದ್ದುಗೆಗೆ ಬಿಲ್ವಾರ್ಚನೆ ಮಾಡಿ, ದೀಪ ಬೆಳಗುವ ಸಂದರ್ಭದಲ್ಲಿ ಗದ್ದುಗೆ ಮೇಲೆ ಹಚ್ಚಿಟ್ಟಿದ್ದ ಸಾಲು ದೀಪದ ಮೇಲೆ ಸಚಿವರ ಶಾಲು ಬಿತ್ತು. ಈ ಸಂದರ್ಭದಲ್ಲಿ ಶಾಲಿಗೆ ಸಣ್ಣ ಪ್ರಮಾಣದಲ್ಲಿ ಕಿಡಿ ಹೊತ್ತಿತು. ಇದನ್ನು ಗಮನಿಸಿದ ಅಭಿಮಾನಿಗಳು ಕೂಗುತ್ತಿದ್ದಂತೆಯೇ ಎಚ್ಚೆತ್ತ ಸಚಿವರು ಶಾಲು ಮೇಲೆತ್ತಿ ಹಿಂದೆ ಸರಿದು ಕುಳಿತು ಪ್ರಾರ್ಥಿಸಿದರು.