ಬೆಂಗಳೂರು: ಐಟಿ ದಾಳಿ ವೇಳೆ ದೆಹಲಿಯ ಮನೆಗಳಲ್ಲಿ ಸಿಕ್ಕ ಬೇನಾಮಿ 8.69 ಕೋಟಿ ರೂ. ಹಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಇಡಿ ನೀಡಿದ್ದ ಸಮನ್ಸ್ ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಲ್ಲಿಸಿದ ಮೇಲ್ಮನವಿಯ “ಭವಿಷ್ಯ’ ಮಂಗಳವಾರ (ಸೆ.17) ನಿರ್ಧಾರವಾಗುವ ಸಾಧ್ಯತೆಯಿದೆ.
ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಬೇಕೋ ಇಲ್ಲವೋ ಎಂಬ ಬಗ್ಗೆ ಮಂಗಳವಾರ ಮಧ್ಯಾಹ್ನ 2.30ಕ್ಕೆ ತೀರ್ಪು ನೀಡಲು ಕಾಯ್ದಿರಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಡಿ.ಕೆ. ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ, ಸಿಆರ್‌ಪಿಸಿ ಸೆಕ್ಷನ್ 482ರಡಿ ತೀರ್ಪು ನೀಡಿರುವುದಾಗಿ ಏಕಸದಸ್ಯ ನ್ಯಾಯಪೀಠ ಹೇಳಿದೆ. ಆದರೆ, ಅಂತಹ ಯಾವುದೇ ಅಧಿಕಾರವ್ಯಾಪ್ತಿ ಏಕಸದಸ್ಯ ನ್ಯಾಯಪೀಠಕ್ಕೆ ಇಲ್ಲ. ಹಾಗಾಗಿ, ಕಾನೂನುಬಾಹಿರ ಹಾಗೂ ವಜಾಗೊಳ್ಳಲು ಯೋಗ್ಯವಾಗಿರುವ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ನಾಗಾನಂದ, ಸಿಆರ್‌ಪಿಸಿ ಸೆಕ್ಷನ್ 482ರಡಿ ಏಕಸದಸ್ಯ ನ್ಯಾಯಪೀಠ ತೀರ್ಪು ಕೊಟ್ಟಿರುವುದರಿಂದ ಮೇಲ್ಮನವಿ ವಿಚಾರಣೆಗೆ ಅಂಗೀಕಾರ್ಹವಲ್ಲ. ಆದ್ದರಿಂದ ವಜಾಗೊಳಿಸಬೇಕೆಂದು ಮನವಿ ಮಾಡಿದರು. ಮತ್ತೂಬ್ಬ ಹಿರಿಯ ನ್ಯಾಯವಾದಿ ಎಂ.ಬಿ. ನರಗುಂದ ವಾದ ಮಂಡಿಸಿ, ಕ್ರಿಮಿನಲ್ ಸ್ವರೂಪದ ಪ್ರಕರಣಗಳ ದೂರು ದಾಖಲು, ವಿಚಾರಣೆ, ತೀರ್ಪು, ಖುಲಾಸೆ ಈ ಎಲ್ಲ ಸಂದರ್ಭಗಳಿಗೂ ಸಂವಿಧಾನದ ಕಲಂ 226 ಹಾಗೂ ಸಿಆರ್‌ಪಿಸಿ ಸೆಕ್ಷನ್ 482 ಅನ್ವಯವಾಗುತ್ತದೆ ಎಂದರು.
ಇದೇ ವೇಳೆ ಪ್ರಕರಣದ ಇತರ ಆರೋಪಿಗಳಾದ ಸುನೀಲ್ ಕುಮಾರ್ ಶರ್ಮಾ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಸೆ.17ರವರೆಗೆ ಬಂಧಿಸದಂತೆ ಜಾರಿ ನಿರ್ದೇಶನಾಲಯಕ್ಕೆ ವಿಭಾಗೀಯ ನ್ಯಾಯಪೀಠ ನಿರ್ದೇಶನ ನೀಡಿತು. ಈ ಮೇಲ್ಮನವಿಗಳ ಬಗ್ಗೆಯೂ ಮಂಗಳವಾರವೇ ತೀರ್ಪು ಬರಲಿದೆ.