ಬೆಂಗಳೂರು: ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಶೀಘ್ರವೇ ಅನುಮತಿ ಕೊಡಿಸುವಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಲು ದೆಹಲಿಗೆ ತೆರಳಿದ್ದಾರೆ.
ಕೇಂದ್ರ ಸಚಿವರನ್ನು ಭೇಟಿ ಮಾಡಲು ಸೋಮವಾರ ದೆಹಲಿಗೆ ತೆರಳಿರುವ ಅವರು, ಕೇಂದ್ರ ಸರ್ಕಾರದಲ್ಲಿ ರಾಜ್ಯ ಪ್ರತಿನಿಧಿಸುವ ಸಚಿವರಾದ ಪ್ರಲ್ಹಾದ್ ಜೋಶಿ, ಡಿ.ವಿ.ಸದಾನಂದಗೌಡ, ಸುರೇಶ್ ಅಂಗಡಿಯವರನ್ನು ಭೇಟಿ ಮಾಡಿ, ಎರಡೂ ಯೋಜನೆಗಳಿಗೆ ಕೇಂದ್ರದಿಂದ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಮಹದಾಯಿ ಯೋಜನೆಯಲ್ಲಿ ನ್ಯಾಯ ಮಂಡಳಿ ಆದೇಶದಂತೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದರೆ, ಯೋಜನೆ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ. ಅದೇ ರೀತಿ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಡಿಪಿಆರ್ ಸಲ್ಲಿಸಿದ್ದು, ಅದಕ್ಕೂ ಕೇಂದ್ರ ಜಲ ಆಯೋಗದಿಂದ ಅನುಮತಿ ದೊರೆಯಬೇಕಿರುವುದರಿಂದ ಈ ನಿಟ್ಟಿನಲ್ಲಿ ರಾಜ್ಯ ಪ್ರತಿನಿಧಿಸುವ ಸಚಿವರು ಕೇಂದ್ರ ಸರ್ಕಾರದಲ್ಲಿ ಪ್ರಭಾವ ಬಳಸಿ ಅನುಮತಿ ಕೊಡಿಸುವಂತೆ ಮನವಿ ಮಾಡಲು ದೆಹಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಡಿ.ಕೆ.ಸುರೇಶ್ ಡಿನ್ನರ್: ಇನ್ನೊಂದೆಡೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಮಂಗಳವಾರ ದಕ್ಷಿಣ ಭಾರತದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಸಂಸದರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ. ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ ಸಂಸದರಿಗೆ ಸೌಹಾರ್ದ ಭೋಜನ ಕೂಟ ಏರ್ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಎಲ್ಲ ಸಂಸದರಿಗೂ ಡಿ.ಕೆ. ಸಹೋದರರು ಭೋಜನ ಕೂಟ ಏರ್ಪಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಅದನ್ನು ಡಿ.ಕೆ.ಶಿವಕುಮಾರ್ ಆಪ್ತ ಮೂಲಗಳು ಅಲ್ಲಗಳೆದಿವೆ.