Advertisement

DKS vs HDK: ನಿಲ್ಲದ ಕುಮಾರಸ್ವಾಮಿ – ಶಿವಕುಮಾರ್‌ ವಾಕ್ಸಮರ

01:19 AM Aug 06, 2024 | Team Udayavani |

ಬೆಂಗಳೂರು: ಪಾದಯಾತ್ರೆ ಮಾಡುತ್ತಿರುವ ಮೈತ್ರಿ ನಾಯಕರು ಹಾಗೂ ಜನಾಂದೋಲನ ಯಾತ್ರೆ ಮಾಡುತ್ತಿರುವ ಕಾಂಗ್ರೆಸ್‌ ನಾಯಕರ ನಡುವಿನ ಮಾತಿನ ಸಮರ ಮುಂದುವರಿದಿದೆ.

Advertisement

ಮದ್ದೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಿಜೆಪಿ ಅವಧಿಯಲ್ಲಿನ 13 ಹಗರಣಗಳ ಪಟ್ಟಿ ನೀಡಿ, ಅದರ ಬಗ್ಗೆ ವಿವರಣೆ ನೀಡಿ ಅದರ ಬಗ್ಗೆ ಉತ್ತರಿಸಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ಸವಾಲೆಸೆದರು. ಅನಂತರ ಪಾದಯಾತ್ರೆ ಮಾಡಿ ಎಂದು ಸವಾಲು ಹಾಕಿದರು.

ಚನ್ನಪಟ್ಟಣದಲ್ಲಿ ನಡೆದ ಪಾದಯಾತ್ರೆ ಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, 5 ಮಂದಿ ವಿಧವೆಯರ ಹಣೆಗೆ ಪಿಸ್ತೂಲು ಇಟ್ಟು ಅವರ ನಿವೇಶನಗಳನ್ನು ಬರೆಸಿಕೊಂಡ ಅಣ್ಣ, ತಮ್ಮಂದಿರುವ ಇಲ್ಲಿ ನಿಮ್ಮ ಕ್ಷೇತ್ರ ಉದ್ಧಾರ ಮಾಡುತ್ತಾರಾ ಎಂದು ಪ್ರಶ್ನಿಸಿದರು. ನನ್ನ ಆಸ್ತಿಯ ಬಗ್ಗೆ ಚರ್ಚೆಮಾಡಲು ಸದಾ ಸಿದ್ಧವಿದ್ದೇನೆ. ಅವರು ವಿಧಾನಸೌಧಕ್ಕೆ ಕರೆದಿದ್ದಾರೆ, ಅಲ್ಲಿಯಾದರೂ ಸರಿ. ಅಜ್ಜಯ್ಯನ ಮುಂದೆ ಆಣೆ ಪ್ರಮಾಣಕ್ಕಾದರೂ ಸರಿ, ನಾನು ಸಿದ್ಧವಿದ್ದೇನೆ. ಚರ್ಚೆಗೆ ಅಂಜುವ ಮಾತೇ ಇಲ್ಲ ಎಂದರು.

ಎಚ್‌ಡಿಕೆ ಸೋದರನ ಆಸ್ತಿ ಎಷ್ಟು, ಬಿಎಸ್‌ವೈ ಜೈಲಿಗೆ ಹೋಗಿದ್ಯಾಕೆ: ಡಿಕೆಶಿ

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ಧಾಳಿ ನಡೆಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ನನ್ನ ಕುಟುಂಬ ಆಸ್ತಿ ಲೆಕ್ಕ ಕೇಳುವ ಮೊದಲು ನಿನ್ನ ಸಹೋದರನ ಆಸ್ತಿಯ ಲೆಕ್ಕ ಕೊಡು ಎಂದು ಕುಮಾರಸ್ವಾಮಿಯನ್ನು ಪ್ರಶ್ನಿಸಿದರೆ, ನಿಮ್ಮಪ್ಪ ಜೈಲಿಗೆ ಹೋಗಿದ್ಯಾಕೆ ಎಂಬುದನ್ನು ಹೇಳು ಎಂದು ವಿಜಯೇಂದ್ರರನ್ನು ಪ್ರಶ್ನಿಸಿದ್ದಾರೆ.

Advertisement

ಸೋಮವಾರ ಜನಾಂದೋಲನ ಸಭೆಗೆ ತೆರಳುವ ಮುನ್ನ ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಕುಟುಂಬದ ಆಸ್ತಿ ಲೆಕ್ಕಾಚಾರ ಕೇಳುತ್ತಿದ್ದೀಯಾ? ಎಲ್ಲದಕ್ಕೂ ಲೆಕ್ಕ ಕೊಡುತ್ತೇನೆ. ಇದಕ್ಕೂ ಮೊದಲು ನಿನ್ನ ಸಹೋದರನ ಆಸ್ತಿ ಲೆಕ್ಕ ನೀಡು ಎಂದು ಕುಮಾರಸ್ವಾಮಿಗೆ ಸವಾಲೆಸೆದರು. ನಿನ್ನ ಅಧಿಕಾರಾವಧಿಯಲ್ಲಿ ನಿನ್ನ ಸಹೋದರ ಹೇಗೆ ಅಧಿಕಾರ ದುರುಪಯೋಗ ಮಾಡಿಕೊಂಡ ಎಂಬುದನ್ನು ಮೊದಲು ಲೆಕ್ಕಾಚಾರ ಹಾಕೋಣ. ಆನಂತರ ನನ್ನದು ಕೊಡುತ್ತೇನೆ. ಇದರಲ್ಲಿ ಯಾವುದೇ ಮುಚ್ಚು ಮರೆಯಿಲ್ಲ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ನನ್ನ ಪ್ರಶ್ನೆ ಮಾಡುತ್ತಾನೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೇ. ಆದರೆ, ಅವರ ಸಹೋದರನ ಆಸ್ತಿ ಬಗ್ಗೆ ಮೊದಲು ಉತ್ತರ ನೀಡಲಿ. ಜೆಡಿಎಸ್‌, ಬಿಜೆಪಿ ಹಗರಣಗಳಿಗೆ ಉತ್ತರ ಕೊಡಿ ಎಂದು ಕೇಳಿದರೂ ಇದುವರೆಗೂ ಉತ್ತರ ಕೊಟ್ಟಿಲ್ಲ ಎಂದರು.

ಮೊದಲು ಯತ್ನಾಳ್‌ಗೆ ಉತ್ತರಿಸಿ
ನಾನು ಭ್ರಷ್ಟಾಚಾರದ ಪಿತಾಮಹ ಎನ್ನುವ ವಿಜಯೇಂದ್ರ, ನಿಮ್ಮ ಅಪ್ಪನನ್ನು ಯಾಕೆ ಜೈಲಿಗೆ ಕಳುಹಿಸಿದೆ? ರಾಜೀನಾಮೆ ಕೊಡಿಸಿದೆ? ಏನಾಯಿತು, ಎಲ್ಲಿ ಬಂತು? ಏಕೆ ಇದೆಲ್ಲ ಆಯಿತು? ಇದರ ಲೆಕ್ಕಾಚಾರವನ್ನು ಮೊದಲು ನೀಡು. ಮೊದಲು ನಿಮ್ಮ ಪಕ್ಷದ ಬಸನಗೌಡ ಪಾಟೀಲ್‌ ಯತ್ನಾಳ್‌, ಗೂಳಿಹಟ್ಟಿ ಶೇಖರ್‌ಗೆ ಉತ್ತರ ಕೊಡಿ. ಆನಂತರ ನನಗೆ ಕೊಡುವಿರಂತೆ ಎಂದು ಕಿಡಿಕಾರಿದರು.

ಕೇಂದ್ರ ಸರಕಾರದಿಂದ ಕರ್ನಾಟಕದ ಪಾಲಿನ ಅನುದಾನ ಬಿಡುಗಡೆ ಮಾಡಿಸಿಲ್ಲ. ಬಿಜೆಪಿ ಆಡಳಿತದಲ್ಲಿದ್ದಾಗ ಮಾಡಿರುವ ಹಗರಣದ ಬಗ್ಗೆ ಉತ್ತರ ಕೇಳಿದ್ದೇವೆ. ಅದ್ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಹೀಗಾಗಿ ಬಿಡದಿಯಿಂದ ಮೈಸೂರಿನವರೆಗೆ ಜನಾಂದೋಲನ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಹಣೆಗೆ ಪಿಸ್ತೂಲು ಇಟ್ಟು ಸೈಟು ಬರೆಸಿಕೊಂಡ ಅಣ್ತಮ್ಮ: ಎಚ್‌ಡಿಕೆ

ರಾಮನಗರ: ಐವರು ವಿಧವೆಯರ ಹಣೆಗೆ ಪಿಸ್ತೂಲು ಇಟ್ಟು ಅವರ ನಿವೇಶನಗಳನ್ನು ಬರೆಸಿಕೊಂಡ ಅಣ್ಣ ತಮ್ಮಂದಿರುವ ಇಲ್ಲಿ ನಿಮ್ಮ ಕ್ಷೇತ್ರ ಉದ್ಧಾರ ಮಾಡುತ್ತಾರಾ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.

ಮೈತ್ರಿ ಪಾದಯಾತ್ರೆ ಚನ್ನಪಟ್ಟಣ ಆಗಮಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಲ್ಲಂ ವೀರಭದ್ರಪ್ಪ ಅವರು, ಪೂರ್ಣಪ್ರಜ್ಞಾ ಶಾಲೆಯ ಪಕ್ಕ 2005ರಲ್ಲಿ 5 ಮಂದಿ ವಿಧವಾ ತಾಯಂದಿರ ನಿವೇಶನವನ್ನು ಸೇಲ್‌ ಅಗ್ರಿಮೆಂಟ್‌ ಮಾಡಿಸಿಕೊಂಡಿದ್ದರು. ಬಳಿಕ ಆ ತಾಯಂದಿರನ್ನು ತಡರಾತ್ರಿಯಲ್ಲಿ ಕರೆಸಿ ಹೇಗೆ ಜಮೀನು ಬರೆಸಿಕೊಂಡರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಆರೋಪಿಸಿದರು.

ನಾನು ಕಾಲೇಜಿನಲ್ಲಿ ಓದುತ್ತಿರುವಾಗಲೇ 3 ವಾರ್ಡ್‌ಗಳ ಕಸ ಹೊಡೆಯುವ ಲಾರಿ ಇಟ್ಟುಕೊಂಡು ದುಡಿಮೆ ಮಾಡಿದ್ದೇನೆ. ಸಿನೆಮಾ ಡಬ್ಬ ಮಾರಾಟ ಮಾಡಿ ಬಂದ ಹಣದಲ್ಲಿ ಕೇತುಗಾನಹಳ್ಳಿ ಬಳಿಯ 45 ಎಕರೆ ಜಮೀನು ಖರೀದಿ ಮಾಡಿದ್ದೇನೆ. ಅವರಂತೆ ನಾನು ಬಂಡೆ ಒಡೆದವನಲ್ಲ, ಮತ್ತಿಕೆರೆ ಬಳಿ ಇರುವ ಬಂಡೆಗಳು ಇವರ ಸಾಧನೆ ಹೇಳುತ್ತಿವೆ ಎಂದು ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.

ನನ್ನ ಆಸ್ತಿಯ ಬಗ್ಗೆ ಚರ್ಚೆಮಾಡಲು ಸದಾ ಸಿದ್ಧವಿದ್ದೇನೆ. ಅವರು ವಿಧಾನಸೌಧಕ್ಕೆ ಕರೆದಿದ್ದಾರೆ, ಅಲ್ಲಿಯಾದರೂ ಸರಿ. ಅಜ್ಜಯ್ಯನ ಮುಂದೆ ಆಣೆ ಪ್ರಮಾಣಕ್ಕಾದರೂ ಸರಿ, ನಾನು ಸಿದ್ಧವಿದ್ದೇನೆ. ಚರ್ಚೆಗೆ ಅಂಜುವ ಮಾತೇ ಇಲ್ಲ. ನನ್ನ ಸಹೋದರನ ಬಗ್ಗೆ ಹೇಳುತ್ತಾರೆ. ನಾನು ಅಧಿಕಾರದಲ್ಲಿದ್ದಾಗ ಅವರ ಕುಟುಂಬದ ವಿರುದ್ಧ ಕೇಸ್‌ ಹಾಕಿಸಿದ್ದನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next