ಬೆಂಗಳೂರು : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಜತೆ ಸೇರಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ದಿಲ್ಲಿಯಲ್ಲೇ ಈ ಷಡ್ಯಂತ್ರದ ರೂಪುರೇಷೆ ಹೆಣೆಯಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ತಮ್ಮ ವಿರುದ್ಧ ಕುಮಾರಸ್ವಾಮಿ ಮಾಡಿರುವ ಸರಣಿ ಟ್ವೀಟ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕುಮಾರಸ್ವಾಮಿ ದಿಲ್ಲಿಗೆ ಹೋಗಿ ನನ್ನ ವಿರುದ್ಧ ಏನೇನು ಮಾಡಿದ್ದಾರೆಂಬುದು ಗೊತ್ತಿದೆ. ಎರಡು ಪಕ್ಷದವರು ಸೇರಿ ದಿಲ್ಲಿಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಈ ಬಗ್ಗೆ ಸಮಯ ಬಂದಾಗ ಹೇಳುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ತಮ್ಮ ವಿರುದ್ಧ ಕುಮಾರಸ್ವಾಮಿ ನಿರಂತರವಾಗಿ ಪ್ರತ್ಯಕ್ಷ-ಪರೋಕ್ಷ ವಾಗ್ದಾಳಿ ನಡೆಸುತ್ತಿದ್ದರೂ ಮೌನಕ್ಕೆ ಶರಣಾಗಿದ್ದ ಶಿವಕುಮಾರ್ ಇದೇ ಮೊದಲ ಬಾರಿಗೆ ಬಹಿರಂಗ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಹಳೆ ಮೈಸೂರು ಭಾಗದ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ತುರುಸಿನ ರಾಜಕಾರಣ ನಡೆಯುವ ಮುನ್ಸೂಚನೆಯನ್ನು ಇದು ನೀಡುತ್ತಿದೆ.
ಕುಮಾರಣ್ಣ ನನ್ನ ವಿರುದ್ಧ ಏನು ಬೇಕಾದರೂ ಮಾತನಾಡಲಿ. ನನ್ನನ್ನು ಅವರು ತಿದ್ದಲಿ. ಆದರೆ ಮೇಕೆದಾಟು ಪಾದಯಾತ್ರೆ ನಮ್ಮ ಮನೆಯ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡುವುದಕ್ಕಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿಯವರ ಜತೆ ಸ್ಪರ್ಧೆ ಮಾಡುವ ಶಕ್ತಿ ನನ್ನಲ್ಲಿ ಇಲ್ಲ. ನಾನು ಥಿಯೇಟರ್ ಮಾಲೀಕ. ನನಗೆ ಅಭಿನಯ ಮಾಡುವುದಕ್ಕೆ ಬರುವುದಿಲ್ಲ. ಅವರು ನನ್ನ ಹಿತ ಬಯಸಿ ಈ ರೀತಿ ಹೇಳಿರಬಹುದು. ನನಗೆ ಈಗ ವಯಸ್ಸಾಗಿದೆ. ಗಡ್ಡ ಬೆಳಗ್ಗಾಗಿದೆ ಎಂದು ತಿರುಗೇಟು ನೀಡಿದರು.
ಮೈತ್ರಿ ಸರಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಹಾಕಿದ ಪಂಚೆ-ಶಲ್ಯವನ್ನೇ ಈಗಲೂ ಧರಿಸಿದ್ದೇನೆ. ಇದು ಹೊಸತಲ್ಲ ಎಂದು ಹೇಳುವ ಮೂಲಕ ಕುಮಾರಸ್ವಾಮಿಯವರ “ಪಂಚೆ ಕಟ್ಟಿ ನಾಟಕʼʼ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.