ಮಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಮಾಡಿದ ಸಂದರ್ಭದಲ್ಲಿಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೇರವಾಗಿ ಡಿ.ಕೆ. ಶಿವಕುಮಾರ್‌ಗೆ ಬಿಜೆಪಿ ಸೇರುವಂತೆ ಸೂಚಿಸಿದ್ದರು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಬಿಜೆಪಿ ನಾಯಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಮಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಬಿಜೆಪಿ ಮುಖಂಡರು ಸಿದ್ದರಾಮಯ್ಯ ವಿರುದ್ಧ ವಿರುದ್ಧ ಕಿಡಿಕಾರಿದ್ದಾರೆ.
ಡಿಕೆಶಿ ಸೇರ್ಪಡೆ ಸಿಎಂ ಹೇಳಿಕೆಯಲ್ಲಿ ಷಡ್ಯಂತ್ರ - ಯಡಿಯೂರಪ್ಪ: ಸಿದ್ದರಾಮಯ್ಯ ಹೇಳಿಕೆ ದುರುದ್ದೇಶ ಪೂರ್ವಕವಾಗಿದೆ. ಇದು ಬಿಜೆಪಿಯಲ್ಲಿ ಗೊಂದಲ ಮೂಡಿಸಲು ಸಿಎಂ ಮಾಡುತ್ತಿರುವ ರಾಜಕೀಯ ಷಡ್ಯಂತ್ರ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಟಿಪ್ಪು ಜಯಂತಿಯನ್ನು ಸ್ವತಂತ್ರವಾಗಿ ಮಾಡಲಿ ಅದಕ್ಕೆ ಬಿಜೆಪಿಯಿಂದ ವಿರೋಧವಿಲ್ಲ, ಆದರೆ ಸರಕಾರಿ ಕಾರ್ಯಕ್ರಮವಾಗಿ ಮಾಡುವುದಕ್ಕೆ ವಿರೋಧವಿದೆ. ಟಿಪ್ಪು ಜಯಂತಿಯೂ ಒಂದೇ ಹಿಟ್ಲರ್ ಜಯಂತಿಯೂ ಒಂದೇ. ಟಿಪ್ಪು ಜಯಂತಿಗೆ ಎಲ್ಲರ ವಿರೋಧವಿದೆ. ಬಿಜೆಪಿ ಆಡಳಿತಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆಯೇ ಇರುವುದಿಲ್ಲ ಎಂದವರು ಹೇಳಿದರು.
ಡಿಕೆಶಿಯನ್ನು ಬೆದರಿಸುವ ಅಗತ್ಯ ಬಿಜೆಪಿಗಿಲ್ಲ: ದೇಶದಲ್ಲಿ ಬಿಜೆಪಿಗೆ ಬರುವವರು ಬರುತ್ತಲೇ ಇದ್ದಾರೆ. ನಮಗೆ ಯಾರನ್ನೂ ಬೆದರಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವಂತಹ ಗತಿ ಬಂದಿಲ್ಲ. ಯಾರನ್ನೂ ಆರತಿ ಎತ್ತಿ ಕರೆತರುವ ಅಗತ್ಯವೂ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಗುಜರಾತ್‌ನಲ್ಲಿ ಶಂಕರ್‌ಸಿಂಗ್ ವಘೇಲಾರಿಂದ ತೊಡಗಿ ಕರ್ನಾಟಕದ ಯೋಗೇಶ್ವರ್ ವರೆಗೂ ಬಿಜೆಪಿಗೆ ಹಲವರು ಸೇರುತ್ತಿದ್ದಾರೆ. ಅವರೆಲ್ಲ ತಮ್ಮ ಆಸಕ್ತಿಯ ಮೇಲೆ ಬರುತ್ತಿದ್ದಾರೆ. ಹೀಗಾಗಿ ಇಲ್ಲಿ ಡಿಕೆಶಿಯನ್ನು ಬೆದರಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಡಿಕೆಶಿ ಬರುತ್ತೇನೆ ಎಂದರೂ ಬೇಡ-ಈಶ್ವರಪ್ಪ: ಡಿಕೆಶಿ ಮನೆ ಮೇಲೆ ಐಟಿ ದಾಳಿ ಆದಾಗ ಹತ್ತಾರು ಕೋಟಿ ರೂ. ಸಿಕ್ಕಿದೆ. ರಾಜ್ಯದ ಜನರೂ ನೋಡಿದ್ದಾರೆ. ಇಂತಹ ವ್ಯಕ್ತಿ ಅವರಾಗಿ ಬರುತ್ತೇನೆ ಎಂದರೂ ಯಾವುದೇ ಕಾರಣಕ್ಕೂ ನಾವು ತೆಗೆದುಕೊಳ್ಳುವುದಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಬಾಲಿಶ-ಸಿಟಿ. ರವಿ: ಡಿಕೆಶಿಯನ್ನು ಬೆದರಿಸಲಾಗುತ್ತಿದೆ ಎಂಬುದು ಹಾಸ್ಯಾಸ್ಪದ. ಎಲ್ಲ ಕ್ಷೇತ್ರಗಳಲ್ಲೂ ಪರಿಣತಿ ಹೊಂದಿರುವ ಡಿಕೆಶಿ ಬಳಿ ಐಟಿ ಅಧಿಕಾರಿಗಳು ಬಿಜೆಪಿಗೆ ಸೇರಿ ಅನ್ನುವುದೇ ಬಾಲಿಶ ಹಾಗೂ ಹಾಸ್ಯಾಸ್ಪದ ಸಂಗತಿ ಎಂದು ಸಿ.ಟಿ. ರವಿ ತಿಳಿಸಿದರು. ಯಾರಾದರು ಪೊಲೀಸ್ ಕಾನ್‌ಸ್ಟೆಬಲ್, ಒಬ್ಬ ಗೃಹ ಸಚಿವರನ್ನು ಬ್ಲ್ಯಾಕ್‌ವೆುಲ್ ಮಾಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದ ಸಿ.ಟಿ. ರವಿ ಅವರು, ಡಿಕೆಶಿ ಅವರು ರಾಜಕೀಯವಾಗಿ ಅಷ್ಟೊಂದು ದುರ್ಬಲರು ಅಂತ ನನಗೇನು ಅನಿಸಿಲ್ಲ. ತನ್ನ ರಾಜಕೀಯ ಅವಧಿಯಲ್ಲಿ ಐದಾರು ಸಾವಿರ ಕೋಟಿ ವ್ಯವಹಾರ ಮಾಡುವಷ್ಟು ಸಾಮರ್ಥ್ಯ ಇರುವ ಮನುಷ್ಯ ಐಟಿ ಅಧಿಕಾರಿಗಳ ಮಾತು ಕೇಳಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುವಷ್ಟು ದುರ್ಬಲರು ಅಂತ ಅನಿಸುತ್ತಿಲ್ಲ. ಹೀಗಾಗಿ ಇದೊಂದು ರಾಜಕೀಯ ಗಿಮಿಕ್ ಎಂದರು.