ಬಾಗಲಕೋಟೆ: ಉಪಚುನಾವಣೆ ಕಾವೇರಿದ ಬೆನ್ನಲ್ಲೇ ಸಚಿವ ಡಿ.ಕೆ. ಶಿವಕುಮಾರ ವಿರುದ್ಧ ಮಾಜಿ ಸಚಿವ ಜನಾರ್ದನ ರೆಡ್ಡಿ ನೇರ ವಾಗ್ಧಾಳಿ ನಡೆಸಿದ್ದು, ಡಿ.ಕೆ.ಶಿವಕುಮಾರ ಬಗ್ಗೆ ಹೆಚ್ಚು ಯೋಚನೆ ಮಾಡಬೇಕಾದ ಅಗತ್ಯ ಇಲ್ಲ. ಅವರದ್ದೇನಿದ್ದರೂ ಕನಕಪುರ, ರಾಮನಗರದಲ್ಲಿ ಮಾತ್ರ ಪ್ರಾಬಲ್ಯ. ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಏನೂ ನಡೆಯುವುದಿಲ್ಲ. ಯಾರೋ ಎಲ್ಲಿಂದಲೋ ಬಂದು ಚಾಲೆಂಜ್ ಮಾಡಿದ್ರೆ ಏನೂ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಮುಧೋಳ ಪಟ್ಟಣದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಒಂದು ನಿಮಿಷದ ಎತ್ತಿನ ಬಂಡಿ ಓಟದ ಸ್ಪರ್ಧೆ ಉದ್ಘಾಟಿಸಲು ಅಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಳ್ಳಾರಿಯಲ್ಲಿ ಪ್ರಭಾವ ಕಳೆದುಕೊಂಡಿಲ್ಲ. ಜನ ನಮಗೆ ಆಶೀರ್ವಾದ ಮಾಡುತ್ತ ಬಂದಿದ್ದಾರೆ.
ಶ್ರೀರಾಮುಲು ಗೆದ್ದಿದ್ದಾರೆ. ರೆಡ್ಡಿ ಸಹೋದರರಿಬ್ಬರೂ ಗೆದ್ದಿದ್ದಾರೆ. ಶ್ರೀರಾಮುಲು ಬಳ್ಳಾರಿಯ ಮಣ್ಣಿನ ಮಗ. ನೇರವಾಗಿ ಮಾತನಾಡುವ ವ್ಯಕ್ತಿ. ಅವರ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಶಾಂತಾ ಗೆಲುವು ಖಚಿತ. ಅರಿಷಿಣ-ಕುಂಕುಮ ನೀಡಿ ಮಗಳೆಂದು ಉಡಿ ತುಂಬಿ ಆಯ್ಕೆ ಮಾಡುತ್ತಾರೆ ಎಂದರು.
ಬಳ್ಳಾರಿ ಕಾಂಗ್ರೆಸ್ ಅಧ್ಯಕ್ಷ ಆಂಜನೆಯಲು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಣ್ಣ-ಪುಟ್ಟ ಇರುವೆಗಳು ಮಾತನಾಡುತ್ತವೆ. ಅವರ ಬಗ್ಗೆ ಮಾತನಾಡುವುದರಲ್ಲಿ ಅರ್ಥ ಇಲ್ಲ. ಶಿವಕುಮಾರ ಬಗ್ಗೆ ಯಾಕೆ ಅಷ್ಟು ಯೋಚನೆ ಮಾಡುತ್ತೀರಿ. ಯಾರೋ ಎಲ್ಲಿಂದಲೋ ಬಂದು, ಚಾಲೆಂಜ್
ಮಾಡಿದ್ರೆ ಏನೂ ನಡೆಯುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ರಾಜ್ಯದ ಜನರ ಆಪೇಕ್ಷೆ. ದೇವರು ಆಶೀರ್ವಾದ ಮಾಡುತ್ತಾನೆ ಎಂದರು.