Advertisement

ಡಿಕೆಶಿ ಹೇಳಿಕೆಗೆ ಖಂಡನೆ

01:05 PM Oct 21, 2018 | Team Udayavani |

ಬೀದರ: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಕಾಂಗ್ರೆಸ್‌ ತಪ್ಪು ಮಾಡಿತ್ತು ಎನ್ನುವ ಹೇಳಿಕೆ ನೀಡಿದ ಸಚಿವ ಡಿ.ಕೆ. ಶಿವಕುಮಾರ ಹೇಳಿಕೆಯನ್ನು ಲಿಂಗಾಯತ ಸಮನ್ವಯ ಸಮಿತಿ ಮುಖಂಡರು ಖಂಡಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಲಿಂಗಾಯತ ಹೋರಾಟದ ಮುಖಂಡರಾದ ಡಾ.ಬಸವಲಿಂಗ ಪಟ್ಟದೇವರು ಮಾತನಾಡಿ, ಡಿ.ಕೆ. ಶಿವಕುಮಾರ ರಾಜ್ಯದ ಲಿಂಗಾಯತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಬೇರೆ ಧರ್ಮಕ್ಕೆ ಮಾನ್ಯತೆ ದೊರೆತ ಸಂದರ್ಭದಲ್ಲಿ ಮಾತನಾಡದ ಅವರು, ಇದೀಗ ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡುವ ಅವಶ್ಯಕತೆ ಏನಿತ್ತು? ರಾಜಕೀಯ ಸ್ವಾರ್ಥಕ್ಕೆ ಲಿಂಗಾಯತ ಸಮುದಾಯ ಬಳಕೆ ಮಾಡುತ್ತಿರುವುದು ಸರಿಯಲ್ಲ. ಮಾಡಿದ ತಪ್ಪಿಗೆ ಫಲ ಅನುಭವಿಸುತ್ತಾರೆ ಎಂದರು.

ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಡಿಕೆಶಿ ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಬೆಂಬಲ ನೀಡಿದ್ದರು. ಇದೀಗ ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಅಥವಾ ಯಾರದೋ ಪ್ರಭಾವಕ್ಕೊಳಗಾಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಅಂದಿನ ಸರ್ಕಾರ ಲಿಂಗಾಯತ ಸಮುದಾಯದ ಬೇಡಿಕೆಗಳನ್ನು ಸರಳವಾಗಿ ಒಪ್ಪಿಕೊಂಡಿಲ್ಲ. ಅನೇಕ ಹೋರಾಟದಿಂದ ಸರ್ಕಾರ ಸಮುದಾಯದ ಬೇಡಿಕೆಗಳನ್ನು ಆಲಿಸಿ, ಸಮಿತಿ ರಚಿಸಿ ವರದಿ ಪಡೆದ ನಂತರ ಅಲ್ಪಸಂಖ್ಯಾತ ಮಾನ್ಯತೆ ನೀಡುವ ಬಗ್ಗೆ ತೀರ್ಮಾನಕ್ಕೆ ಬರಲಾಗಿತ್ತು.

ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಎಲ್ಲ ಸಭೆಗಳಲ್ಲಿ ಡಿಕೆಶಿ ಹಾಜರಿದ್ದು, ಬೆಂಬಲ ಸೂಚಿಸಿದ್ದರು. ಸದ್ಯ ಸಾರ್ವಜನಿಕವಾಗಿ ನೀಡಿದ ಹೇಳಿಕೆಗೆ ಕೂಡಲೇ ಕ್ಷಮೆ ಯಾಚಿಸಬೇಕು. ಅಲ್ಲದೆ, ರಾಜಕೀಯ ಸ್ವಾರ್ಥಕ್ಕಾಗಿ ಲಿಂಗಾಯತ ಸಮುದಾಯದ ಪದ ಬಳಕೆ ಮಾಡಬಾರದು ಎಂದರು. 

ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಮಾತನಾಡಿ, ಡಿ.ಕೆ. ಶಿವಕುಮಾರ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾರೆ. ಅವರ ಹಗರಣಗಳನ್ನು ಮುಚ್ಚಿಕೊಳ್ಳಲು ಅಥವಾ ಯಾವುದೋ ಪ್ರಭಾವಕ್ಕೆ ಒಳಗಾಗಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ.

Advertisement

ಅದು ರಂಭಾಪುರಿ ಶ್ರೀಗಳ ಕಾರ್ಯಕ್ರಮದಲ್ಲಿ ಡಿಕೆಶಿ ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡಿರುವುದು ನೋಡಿದರೆ ಅನೇಕ ಅನುಮಾನಗಳು ಹುಟ್ಟುವಂತೆ ಮಾಡಿದೆ. ಡಿಕೆಶಿ ಕೇವಲ ಲಿಂಗಾಯತ ಸಮುದಾಯಕ್ಕೆ ಅವಮಾನಿಸಿಲ್ಲ ಹಿಂದಿನ ಸರ್ಕಾರಕ್ಕೂ ಅವಮಾನಿಸಿದ್ದಾರೆ. ಆದ್ದರಿಂದ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು. ಸರ್ಕಾರದ ಪ್ರತಿನಿಧಿಯಾಗಿ ಲಿಂಗಾಯತ ಧರ್ಮದವರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿರುವುದು ಖಂಡನಿಯ ಎಂದರು.

ಲಿಂಗಾಯತ ಸಮುದಾಯದ ವ್ಯಕ್ತಿ ಅಲ್ಲದ ಡಿಕೆಶಿ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವುದು ತಪ್ಪು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಿಂಗಾಯತ ಸಮುದಾಯದ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವ ಉತ್ತಮ ಕೆಲಸ ಮಾಡಿದೆ. ಮಾನ್ಯತೆಗಾಗಿ ಸಮಿತಿ ರಚಿಸಿ ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳಿಸಿದ್ದಾರೆ ಎಂದರು.

ದೆಹಲಿ ಬಸವ ಮಂಟಪದ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಈ ಹಿಂದಿನ ಸರ್ಕಾರದಲ್ಲಿ ಸಚಿಚರಾಗಿದ ಡಿಕೆಶಿ ಪ್ರತ್ಯೇಕ ಲಿಂಗಾಯ ಹೋರಾಟಕ್ಕೆ ಬೆಂಬಲಿಸಿದ್ದು, ಇದೀಗ ತಪ್ಪುಮಾಡಿದೇವೆ ಎಂದು ಹೇಳುತ್ತಿರುವುದು ಖಂಡನೀಯ. ಕೂಡಲೆ ಡಿಕೆಶಿ ಕ್ಷಮೆ ಕೇಳದಿದ್ದರೆ, ಲಿಂಗಾಯತ ಹೋರಾಟದ ಜೊತೆಗೆ ಡಿಕೆಶಿ ವಿರುದ್ಧವೂ ಪ್ರತಿಭಟನೆ ನಡೆಸಲಾಗುವುದು. ಡಿಸೆಂಬರ್‌ ತಿಂಗಳಲ್ಲಿ ದೆಹಲಿಯಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಯಲಿದ್ದು, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸುವ ನಂಬಿಕೆ ಇದೆ. ಕೇಂದ್ರ ಸರಕಾರ ಸ್ಪಂದಿಸದಿದ್ದರೆ ಎಲ್ಲ ಮುಖಂಡರು ಸೇರಿ ಸಭೆ ನಡೆಸಿ ಮುಂದಿನ ತಿರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ಸಿದ್ಧರಾಮ ಬೆಲ್ದಾಳ ಶರಣರು ಮಾತನಾಡಿ, ಡಿಕೆಶಿಗೆ ಕೆಡಗಾಲ ಬಂದತ್ತಿದ್ದು, ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯ ಸ್ವಾರ್ಥಕ್ಕೆ ಸಮಾಜ ಬಲಿಪಶುಮಾಡುವುದು ಸರಿಯಲ್ಲ. ವೀರಶೈವ ಲಿಂಗಾಯತ ಪುರಾತನ ಎಂದು ಹೇಳುವವರು ಬೇಕಾದರೆ ಬಹಿರಂಗವಾಗಿ ಚರ್ಚೆಗೆ ಬರಲಿ. ದಾಖಲೆಗಳನ್ನು ನೀಡಲಿ ಎಂದ ಅವರು, ಲಿಂಗಾಯತ ಧರ್ಮಕ್ಕೆ ಬಸವಣ್ಣನವರೆ
ಗುರು ಎಂಬುದರ ದಾಖಲೆಗಳನ್ನು ನೀಡುತ್ತೇನೆ.

ಸತ್ಯ ಅರಿಯದವರು ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು. ಬಸವರಾಜ ಧನ್ನೂರ್‌, ರಾಜೇಂದ್ರ ಕುಮಾರ ಗಂದಗೆ, ಬಿ.ಜಿ. ಶೆಟಗಾರ, ಶಿವರಾಜ ಪಾಟೀಲ, ಶ್ರೀಕಾಂತ ಸ್ವಾಮಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next