ನವದೆಹಲಿ: ಅಕ್ರಮ ಹಣಕಾಸು ಪ್ರಕರಣದಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಶನಿವಾರ ರೋಸ್ ಅವೆನ್ಯೂ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯದ ಎಎಸ್ ಜಿ ಕೆಎಂ ನಟರಾಜ್ ಅವರು ಪ್ರಬಲವಾಗಿ ವಾದ ಮಂಡಿಸುತ್ತಿದ್ದಾರೆ.
ವೈಟ್ ಯಾವಾಗಲೂ ವೈಟ್, ಅದು ಕಪ್ಪು ಹಣ ಆಗಲು ಸಾಧ್ಯವಿಲ್ಲ: ನಟರಾಜ್
ಕಾನೂನು ಬದ್ಧವಾಗಿ ಗಳಿಸಿರುವ ಆಸ್ತಿಗೆ ತೆರಿಗೆ ಕಟ್ಟಲಾಗುತ್ತದೆ. ಡಿಕೆಶಿ ಪ್ರಕರಣವನ್ನು ಪಿಎಂಎಎಲ್ ಕಾಯ್ದೆಯಡಿ ತನಿಖೆ ನಡೆಸಲಾಗುತ್ತಿದೆ. ಅಕ್ರಮವಾಗಿ ಗಳಿಸಿದ ಆಸ್ತಿಗೆ ಸಕ್ರಮದ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ವೈಟ್ ಯಾವತ್ತಿಗೂ ವೈಟ್, ಅದನ್ನು ಕಪ್ಪು ಹಣ ಯಾವಾಗಲೂ ಕಪ್ಪು ಹಣವೇ ಆಗಿರುತ್ತದೆ. ಪಿಎಂಎಲ್ ಕಾಯ್ದೆಯ ಸೆಕ್ಷನ್ 9ರ ಅಡಿ ಆಸ್ತಿ ಜಪ್ತಿ ಮಾಡಿ ತನಿಖೆ ನಡೆಸುವ ಅಧಿಕಾರವಿದೆ ಎಂದು ಇ.ಡಿ ಪರ ವಕೀಲರಾದ ಕೆಎಂ ನಟರಾಜ್ ಪ್ರಬಲವಾಗಿ ವಾದ ಮಂಡಿಸಿದರು.
ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಸಕ್ರಮಗೊಳಿಸಲು ಕಾನೂನು ಬಿಡಲ್ಲ. ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಅನುಭವಿಸಲು ಸಾಧ್ಯವಿಲ್ಲ. ವಿಚಾರಣೆಗೆ ಆರೋಪಿ ಸಹಕರಿಸುತ್ತಿಲ್ಲ. ಸೆಕ್ಷನ್ 53ರ ಪ್ರಕಾರ ಆರೋಪಿ ಉತ್ತರದಿಂದ ತಪ್ಪಿಸಿಕೊಳ್ಳುವಂತಿಲ್ಲ. ಸೆಕ್ಷನ್ 3ರ ಪ್ರಕಾರ ಆರೋಪಿ ಸತ್ಯ ಹೇಳಬೇಕು ಎಂದು ವಾದಿಸಿದರು.
ಹತ್ತು ಕೃಷಿ ಭೂಮಿ ಇದ್ದು ಅದನ್ನು ನಗದು ಕೊಟ್ಟು ಖರೀದಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ. ಪೂರಕ ದಾಖಲೆ ಕಲೆ ಹಾಕುತ್ತಿದ್ದೇವೆ. ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ವಿಚಾರ ತನಿಖೆ ನಡೆಯುತ್ತಿದೆ. ಹೀಗಾಗಿ ಸಾಕ್ಷ್ಯ ನಾಶಪಡಿಸುವ ಎಲ್ಲಾ ಸಾಧ್ಯತೆಯೂ ಇದೆ. ಡಿಕೆ ಶಿವಕುಮಾರ ಬಳಿ ಅಪಾರ ಪ್ರಮಾಣದ ಕೃಷಿ ಜಮೀನು ಇದೆ. ಡಿಕೆಶಿ ಸಹೋದರನ ಹೆಸರಿನಲ್ಲಿ 27 ಆಸ್ತಿಗಳಿವೆ. ತೆರೆದ ಕೋರ್ಟ್ ನಲ್ಲಿ ಎಲ್ಲ ವಿಚಾರ ಹೇಳಲು ಸಾಧ್ಯವಾಗುವುದಿಲ್ಲ ಎಂದು ಎಎಸ್ ಜಿ ನಟರಾಜ್ ವಾದಿಸಿದರು.
ಐಟಿ ಕೇಸ್ ನಲ್ಲಿ ಕೆಲವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಅದೇ ರೀತಿ ಇ.ಡಿ.ವಿಚಾರಣೆಯಲ್ಲೂ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಇದೆ. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಕೆಟ್ಟ ಪ್ರವೃತ್ತಿ ಡಿಕೆ ಶಿವಕುಮಾರ್ ಅವರದ್ದಾಗಿದೆ.