Advertisement
ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ನೇತೃತ್ವದಲ್ಲಿ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್‌ನ ಮೂವರು ವೀಕ್ಷಕರು ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದರು. “ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗುವುದು” ಎಂಬ ಒಂದು ಸಾಲಿನ ನಿರ್ಣಯವನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಸಿಎಂ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷ ಖರ್ಗೆ ಮತ್ತು ಹೈಕಮಾಂಡ್ ಅಂಗಳಕ್ಕೆ ತಳ್ಳಲಾಗಿದೆ.
Related Articles
Advertisement
ಸಿಎಂ ಹುದ್ದೆಗೆ ಪೈಪೋಟಿ ತೀವ್ರಗೊಂಡಿರುವಂತೆಯೇ ಡಿ.ಕೆ. ಶಿವಕುಮಾರ್ ಪರವಾಗಿ ಒಕ್ಕಲಿಗರ ಸಂಘ, ಒಕ್ಕಲಿಗ ಸಮಾಜದ ಮಠಾಧೀಶರು ಕೂಗೆಬ್ಬಿಸಿದ್ದರೆ, ಸಿದ್ದರಾಮಯ್ಯ ಪರವಾಗಿ ಕುರುಬ ಸಮಾಜದ ಮುಖಂಡರು, ಮಠಾಧೀಶರು ಒತ್ತಡ ಹೇರುತ್ತಿದ್ದಾರೆ. ರವಿವಾರ ಉಭಯ ನಾಯಕರ ನಿವಾಸ ಗಳ ಬಳಿಯೂ ಅವರ ಬೆಂಬಲಿಗರು ಶಕ್ತಿ ಪ್ರದರ್ಶನ ಮಾಡಿದರು. ಶಾಸಕಾಂಗ ಪಕ್ಷದ ಸಭೆ ನಡೆದ ಹೊಟೇಲ್ ಮುಂದೆಯೂ ಬಲಾಬಲ ಪ್ರದರ್ಶಿಸಿದರು. ಎರಡೂ ಕಡೆಯಿಂದಲೂ ಸಾಕಷ್ಟು ಹೈಡ್ರಾಮಾಗಳು ನಡೆದವು. ಡಿಕೆಶಿ ಪಕ್ಷ ಸಂಘಟನೆಯಲ್ಲಿ ಬಹಳ ಶ್ರಮಿಸಿದ್ದು, ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಮಾಜದ ಮಠಾಧೀಶರು ಆಗ್ರಹಿಸುವ ಮೂಲಕ ಡಿಕೆಶಿ ಬೆಂಬಲಕ್ಕೆ ಒಕ್ಕಲಿಗ ಸಮಾಜವಿದೆ ಎಂಬ ಸಂದೇಶ ರವಾನಿಸಿದ್ದು ವಿಶೇಷ. ಇದೇವೇಳೆ ಕಾಂಗ್ರೆಸ್‌ನಿಂದ ಕುರುಬ ಸಮುದಾಯದ 14 ಮಂದಿ ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಸುಮಾರು ನೂರು ಶಾಸಕರು ಸಿದ್ದರಾಮಯ್ಯ ಅವರ ವರ್ಚಸ್ಸಿನಿಂದ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಕುರುಬ ಸಮುದಾಯದ ಮುಖಂಡರು ಒತ್ತಾಯಿಸಿದರು.
ಸಿಎಂ: ಇಂದೇ ನಿರ್ಣಯ?
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿವೇಚನೆಗೆ ಬಿಡಲಾಗಿದ್ದರೂ ದಿಲ್ಲಿಯಿಂದ ಆಗಮಿಸಿರುವ ವೀಕ್ಷಕರು ಪ್ರತ್ಯೇಕವಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದರು. ಸಿಎಂ ಆಯ್ಕೆ ವಿಚಾರವನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡುವ ಒಂದು ಸಾಲಿನ ನಿರ್ಣಯ ಅಂಗೀಕರಿಸಿದ ಬಳಿಕ ಶಾಸಕರು ತಮ್ಮ ಅಭಿಪ್ರಾಯ ತಿಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಶಾಸಕರನ್ನು ಕರೆದು, ಸಿಎಂ ಯಾರಾಗಬೇಕೆಂಬ ಬಗ್ಗೆ ಲಿಖೀತವಾಗಿ ಬರೆದುಕೊಡುವಂತೆ ಸೂಚಿಸಲಾಯಿತು. ಶಾಸಕರು ತಮ್ಮ ಅಭಿಪ್ರಾಯ ನೀಡಿದ್ದು, ಇದನ್ನು ವೀಕ್ಷಕರು ಎಐಸಿಸಿಗೆ ತಲುಪಿಸಲಿದ್ದಾರೆ. ಸೋಮವಾರ ಖರ್ಗೆ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಿಎಂ ಹೆಸರನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಬಹುತೇಕ ಸೋಮವಾರವೇ ನಿರ್ಣಯ ಹೊರಬೀಳಲಿದೆ.
ಎಐಸಿಸಿ ವೀಕ್ಷಕರನ್ನು ರಾಜ್ಯಕ್ಕೆ ಕಳುಹಿಸಲಾಗಿದೆ. ಅವರು ಪಕ್ಷದ ಶಾಸಕರ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಲುಪಿಸಲಿದ್ದಾರೆ. ಅನಂತರ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ