Advertisement

ದ.ಕ.: ವಾರದಲ್ಲಿ ಎರಡು ದರೋಡೆ: ದುರ್ಬಲ ಗಸ್ತು: ಜನರಲ್ಲಿ ಆತಂಕ

12:49 AM Dec 26, 2020 | mahesh |

ಮಂಗಳೂರು: ದಕ್ಷಿಣ ಕನ್ನಡದ ಗ್ರಾಮೀಣ ಪ್ರದೇಶಗಳಲ್ಲಿ ವಾರದ ಅವಧಿಯಲ್ಲಿ ಎರಡು ದರೋಡೆ, ಸುಲಿಗೆ ಪ್ರಕರಣಗಳು ನಡೆದಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಪೊಲೀಸರ ಗಸ್ತು ದುರ್ಬಲಗೊಂಡಿರುವುದು ದುಷ್ಕರ್ಮಿಗಳಿಗೆ ವರದಾನವಾಗುತ್ತಿದೆ.

Advertisement

ನಗರ ಪ್ರದೇಶದಲ್ಲಿ ಸರ ಸುಲಿಗೆಯಂಥ ಪ್ರಕರಣಗಳು ಆತಂಕ ಮೂಡಿಸುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಒಂಟಿ ಮನೆಗಳನ್ನೇ ಗುರಿಯಾಗಿಸಿಕೊಂಡ ದುಷ್ಕೃತ್ಯ ಗ್ರಾಮೀಣ ಜನರ ನಿದ್ದೆಗೆಡಿಸಿದೆ. ಡಿ. 21 ರಂದು ಸೌತಡ್ಕದಲ್ಲಿ ದರೋಡೆ ನಡೆದಿತ್ತು. ಡಿ. 25ರಂದು ವಿಟ್ಲದಲ್ಲಿ ಅಂಥದ್ದೇ ಸುಲಿಗೆ ಜರಗಿದೆ.

ರಾತ್ರಿ ಗಸ್ತು ದುರ್ಬಲ
ಹಲವು ತಿಂಗಳುಗಳಿಂದ ರಾತ್ರಿ ಗಸ್ತು ಕಾರ್ಯ ನಾಮ್‌ ಕೆ ವಾಸ್ತೇ ಎನ್ನುವಂತೆ ನಡೆಯುತ್ತಿದ್ದು, ಸಂಪೂರ್ಣ ದುರ್ಬಲಗೊಂಡಿದೆ ಎಂಬ ಅಭಿಪ್ರಾಯ ಗ್ರಾಮೀಣ ವಲಯದಲ್ಲಿ ಕೇಳಿಬರುತ್ತಿದೆ. ನಗರ ಪ್ರದೇಶದಲ್ಲೂ ಪರಿಸ್ಥಿತಿ ಭಿನ್ನ ವಾಗಿಲ್ಲ. ಇದರೊಂದಿಗೆ ಲಾಕ್‌ಡೌನ್‌ ಅನುಷ್ಠಾನ ಸೇರಿ ದಂತೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಹಲವು ಕಾರ್ಯ ಗಳಲ್ಲಿ ಪೊಲೀಸರು ತೊಡಗಿದ್ದಾರೆ. ಒಂದು ತಿಂಗಳಿಂದ ಗ್ರಾ.ಪಂ. ಚುನಾವಣೆಯ ಭದ್ರತೆಯ ಹೊಣೆಯನ್ನು ನಿಭಾಯಿಸಬೇಕಿದೆ. ಇವೆಲ್ಲ ಕಾರಣಗಳಿಂದ ಕಾನೂನು ಸುವ್ಯವಸ್ಥೆ ಕಾರ್ಯಕ್ಕೆ ಪೊಲೀಸರು ಸಿಗದಂತಾಗಿದೆ. ಈ ಕೊರತೆ ಮನಗಂಡೇ ದರೋಡೆಕೋರರು, ಕಳ್ಳರು ದುಷ್ಕೃತ್ಯದಲ್ಲಿ ತೊಡಗಿದ್ದಾರೆ ಎಂಬುದು ಸಾರ್ವಜನಿಕರ ವಿಶ್ಲೇಷಣೆ.

ಪೊಲೀಸರು ಜಿಲ್ಲೆಯ ಗ್ರಾಮಾಂತರವೂ ಸೇರಿದಂತೆ ವಿವಿಧ ಭಾಗಗಳಲ್ಲಿ ನಿರಂತರವಾಗಿ ಗಸ್ತು ನಡೆಸುವ ರೂಢಿ ಕಡಿಮೆಯಾಗುತ್ತಿದೆ. ರಾತ್ರಿ ವೇಳೆ ಪೊಲೀಸರು ಕೆಲವು ಮುಖ್ಯ ರಸ್ತೆ, ಹೆದ್ದಾರಿ ಬದಿಗಳಲ್ಲಿ ಕಾಣಸಿಗುತ್ತಾರೆ. ಉಳಿದಂತೆ ಪೊಲೀಸರ ರೌಂಡ್ಸ್‌ ತೀರಾ ಕಡಿಮೆಯಾಗಿದೆ ಎಂಬ ಆಕ್ಷೇಪ ಗ್ರಾಮೀಣ ಪ್ರದೇಶದವರದ್ದು.

ಗಸ್ತು ಹೆಚ್ಚಳಕ್ಕೆ ಕ್ರಮ
ವಿವಿಧ ಕರ್ತವ್ಯಗಳ ನಡುವೆಯೂ ಪೊಲೀಸರು ರೌಂಡ್ಸ್‌ ಹಾಕುತ್ತಿದ್ದಾರೆ. ವಿಶೇಷ ತಂಡಗಳು ಕೂಡ ಹಲವೆಡೆ ಗಸ್ತು ನಡೆಸುತ್ತಿದ್ದು, ಇನ್ನಷ್ಟು ತೀವ್ರಗೊಳಿಸಲಾಗುವುದು. ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಕೂಡ ನಡೆಯುತ್ತಿದೆ.
-ಬಿ.ಎಂ. ಲಕ್ಷ್ಮೀಪ್ರಸಾದ್‌, ಎಸ್‌ಪಿ, ದ.ಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next